ಪಂತ್‌ ಆಯ್ಕೆ ಮಾಡದೇ ಇದ್ದದ್ದು ಆಶ್ಚರ್ಯ ತಂದಿದೆ: ಪಾಂಟಿಂಗ್‌

0
10

ದುಬೈ:- ಮುಂಬರುವ ಮಹತ್ವದ ಐಸಿಸಿ ವಿಶ್ವಕಪ್ ಟೂರ್ನಿಯ 15 ಆಟಗಾರರ ಭಾರತ ತಂಡದಲ್ಲಿ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರಿಗೆ ಸ್ಥಾನ ಕಲ್ಪಿಸದಿರುವುದು ಆಶ್ಚರ್ಯ ಉಂಟುಮಾಡಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್‌ ಹೇಳಿದರು.

“ ವಿಶ್ವಕಪ್‌ ಭಾರತ ತಂಡದಲ್ಲಿ ಪಂತ್‌ ಇಲ್ಲದೇ ಇರುವುದು ಆಶ್ಚರ್ಯ ತಂದಿದೆ. ಭವಿಷ್ಯ ಅವರು ಭಾರತ ತಂಡದ ಅಂತಿಮ 11 ಆಟಗಾರರ ತಂಡದಲ್ಲಿ ಆಡಬೇಕು. ಬ್ಯಾಟಿಂಗ್‌ ಕ್ರಮಾಂಕ 4 ಅಥವಾ 5 ರಲ್ಲಿ ಪಂತ್‌ ಬದಲು ಇನ್ನಿತರೆ ಆಟಗಾರರು ಆಡಿದ್ದೆ ಆದಲ್ಲಿ ಭಾರತ ತಂಡ ಇನ್ನಿತರ ತಂಡಗಳಿಗಿಂತ ವಿಭಿನ್ನವಾಗಿ ಕಾಣಲಿದೆ” ಎಂದು ಪಾಂಟಿಂಗ್‌ ಹೇಳಿರುವುದನ್ನು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

“ ವಿಶ್ವದ ಇತರೆ ತಂಡಗಳಿಗೆ ಹೋಲಿಕೆ ಮಾಡಿದ್ದೇ ಆದಲ್ಲಿ ಭಾರತ ಕ್ರಿಕೆಟ್‌ನಲ್ಲಿ ಪ್ರಬುದ್ಧತೆ ಸಾಧಿಸಿದೆ. ಅದರಲ್ಲು ಬ್ಯಾಟಿಂಗ್‌ ವಿಭಾಗ ಅತ್ಯಂತ ಬಲಿಷ್ಟವಾಗಿದೆ. ಆದರೆ, ಪಂತ್‌ ಅವರನ್ನು ಐಸಿಸಿ ವಿಶ್ವಕಪ್‌ಗೆ ನಿರ್ಲಕ್ಷೆ ಮಾಡಲಾಗಿದೆ. ಪಂತ್‌ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಕನಿಷ್ಟ ಮೂರು ಐಸಿಸಿ ವಿಶ್ವಕಪ್‌ ಆಡಬೇಕು. ಅಂಥ ಪ್ರತಿಭೆಯನ್ನು ಪಂತ್‌ ಹೊಂದಿದ್ದಾರೆ. ಒಂದು ವೇಳೆ ಅವರು ಆಡದೆ ಇದ್ದಲ್ಲಿ ಆಶ್ಚರ್ಯ ಉಂಟಾಗುವುದರಲ್ಲಿ ಅನುಮಾನವಿಲ್ಲ” ಎಂದು ತಿಳಿಸಿದರು.

44 ವರ್ಷದ ರಿಕ್ಕಿ ಪಾಂಟಿಂಗ್‌ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಕೆಟ್‌ ಕೌಶಲದ ಆಧಾರದ ಮೇಲೆ ಪಂತ್‌ ಬದಲು ದಿನೇಶ್ ಕಾರ್ತಿಕ್‌ಗೆ ಐಸಿಸಿ ವಿಶ್ವಕಪ್‌ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೂ, ತಂಡದಲ್ಲಿ ಆಟಗಾರರನ್ನು ಬದಲಾವಣೆ ಮಾಡಲು ಮೇ 23ರವರೆಗೂ ಅವಕಾಶವಿದೆ.

loading...