ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಅಮಾನತ್ತುಗೊಳಿಸಲು ಆಗ್ರಹಿಸಿ

0
51

ಕಲಘಟಗಿ : ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಯವರು ಅವ್ಯವಹಾರ ಎಸಗಿದ್ದಾರೆಂದು ಆರೋಪಿಸಿ, ಅವರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿ, ನಡೆಸುತ್ತಿರುವ ಸರದಿ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಪಾದಾರ್ಪಣೆ ಮಾಡಿದೆ.

ಪಟ್ಟಣ ಪಂಚಾಯತಿ ಸದಸ್ಯರು ನಡೆಸುತ್ತಿರುವ ಸತ್ಯಾಗ್ರಹಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ನಾಗರಿಕರು ಸೇರಿದಂತೆ ಹಲವರು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಡುವೆ ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ, ಪ.ಪಂ.ಸದಸ್ಯರ ಅಹವಾಲು ಆಲಿಸಿದರು.

ಈ ಸಂದರ್ಭದಲ್ಲಿ ಪ.ಪಂ.ಸದಸ್ಯರು ಮುಖ್ಯಾಧಿಕಾರಿ ಆರ್.ಡಿ. ಬಾಗಲಕೋಟಿಯವರ ಸರ್ವಾಧಿಕಾರಿ ವರ್ತನೆಯನ್ನು ಮತ್ತು ಅವ್ಯವಹಾರಗಳನ್ನು ವಿವರಿಸಿದರು. ಈ ಕುರಿತು ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು. ಪ್ರತಿಭಟನಾ ನಿರತರ ದೂರುಗಳನ್ನು ಆಲಿಸಿದ, ಶ್ರೀನಿವಾಸ ಮಾನೆ, ಹೋರಾಟಕ್ಕೆ ತಾವೂ ಸಹ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದರು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರವಾಗಿ ಚರ್ಚಿಸಿ, ತೀವ್ರ ತನಿಖೆ ನಡೆಸಿ, ಕ್ರಮಕೈಗೊಳ್ಳಲು ಒತ್ತಾಯಿಸಲಾಗುವುದು ಎಂದರಲ್ಲದೆ .ಈಗ ಪ್ರತಿಭಟನೆಯನ್ನು ಮೊಟಕುಗೊಳಿಸಿ  ತನಿಖೆಗೆ ಸಮಯಾವಕಾಶವನ್ನು ನೀಡುವಂತೆ ಅವರು ಮನವಿ ಮಾಡಿದರೂ, ನಾಗರಿಕರು ಮತ್ತು ಪ.ಪಂ.ಸದಸ್ಯರು ಅದಕ್ಕೊಪ್ಪದೇ ಪ್ರತಿಭಟನೆಯನ್ನು ಮುಂದುವರಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ನಿರತರು ಪ.ಪಂ. ಮುಖ್ಯಾಧಿಕಾರಿಯವರ ವಿರುದ್ಧ ಪ್ರಕಟಿಸಿದ ಕರಪತ್ರದಲ್ಲಿ ನಮೂದಿಸಿದ ನಾಯಕ ಕಾರ್ನರ್ ಮಳಿಗೆಗಳನ್ನು ತಮ್ಮಿಷ್ಟದಂತೆ ಹಂಚಿಕೆ ನಡೆಸಿದ್ದು, ಬಂದ ಬಾಡಿಗೆ ಹಣವನ್ನು ದುರುಪಯೋಗ ಪಡಿಸಿದ್ದಾರೆಂಬ ಅಂಶವನ್ನು ಪ್ರಶ್ನಿಸಿ, ನಾಯಕ ಕಾರ್ನರ್ನ ಬಾಡಿಗೆದಾರ ಸೂಕ್ತ ದಾಖಲೆಗಳನ್ನು ಪ್ರದರ್ಶಿಸಿ ವಿಧಾನಪರಿಷತ್ ಸದಸ್ಯರ ಹಾಗೂ ಪ ಪಂ ಸದಸ್ಯರ ಗಮನವನ್ನು ಸೆಳೆದರು.

ನಂತರ ವಿ.ಪ. ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಪಟ್ಟಣದ ಅಭಿವೃದ್ದಿಗೆ ಕೈಗೊಂಡ ಶಾಶ್ವತ ಕುಡಿಯುವ ನೀರಿನ ಯೋಜನೆ, ಸೌಂದರ್ಯೀಕರಣದ ಕಾಮಗಾರಿ, ರಸ್ತೆ ಕಾಮಗಾರಿಗಳ ಕುರಿತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಲೋಪವನ್ನು ಸರಿಪಡಿಸಲು ತಾವೂ ಯತ್ನಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷದ ತಾಲೂಕಾ ಅಧ್ಯಕ್ಷ ಬಿ.ವೈ. ಪಾಟೀಲ, ಜಿ.ಪಂ. ಮಾಜಿ ಉಪಾಧ್ಯಕ್ಷ ಎಸ್.ಎಂ. ಚಿಕ್ಕಣ್ಣವರ, ಬ್ರಹ್ಮಕುಮಾರ ಅಳಗವಾಡಿ, ಸುಧೀರ ಬೋಳಾರ, ಎಸ್.ವಿ. ತಡಸಮಠ, ಮಹಾಂತೇಶ ತಹಸೀಲ್ದಾರ, ನಾರಾಯಣ ಮಧೂರಕರ, ಶಂಕರ ಹುದ್ದಾರ, ಫಕ್ಕೀರೇಶ ನೆಸರೇಕರ, ಸೋಮಶೇಖರ ಬೆನ್ನೂರ, ದೇವೇಂದ್ರ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು. ಸತ್ಯಾಗ್ರಹದಲ್ಲಿ ಪ.ಪಂ. ಸದಸ್ಯರಾದ ತಾನಾಜಿ ನಿಕ್ಕಂ, ಪ್ರವೀಣ ದೈವಜ್ಞ ಉಪವಾಸ ನಿರತರಾಗಿದ್ದರು. ಉಳಿದ ಸದಸ್ಯರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here