ಪತ್ನಿ ಕೊಲೆಗೈದ ಪತಿಗೆ ಮರಣದಂಡನೆ ತೀರ್ಪು

0
31

(ಮರಣ ದಂಡನೆಗೆ ಶಿಕ್ಷೆಗೆ ಒಳಗಾದ ಪತಿ)

ಬೆಳಗಾವಿ
ಸರಾಯಿ ಕುಡಿಯಲು ಹಣ ನೀಡದ ಪತ್ನಿಯನ್ನು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದ ಆರೋಪಿ ಪತಿ ನಾಗರಾಜ ಯಲ್ಲಪ್ಪ ನಾಯಿಕಗೆ ಬೆಳಗಾವಿ 5ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಹುಕ್ಕೇರಿ ತಾಲೂಕಿನ ಸಲದಾಳ ಗ್ರಾಮದವನಾದ ನಾಗರಾಜ ಸರಾಯಿ ಕುಡಿತದ ಚಟಕ್ಕೆ ಬಿದ್ದು ಪತ್ನಿಗೆ ಹಣ ನೀಡುವಂತೆ ನಿತ್ಯ ಕಿರುಕುಳ ನೀಡುತ್ತಿದ್ದರಿಂದ ಆಕೆ ಕಳೆದ ನಾಲ್ಕು ವರ್ಷದಿಂದ ಹಿಂಡಾಲ್ಕೋ ಕ್ವಾಟರ್ಸ್‍ನ ತವರು ಮನೆಯಲ್ಲಿ ವಾಸವಾಗಿದ್ದಳು.
ತನ್ನ ಉಪಜೀವನ ಸಾಗಿಸಲು ನಾಗರಾಜನ ಪತ್ನಿ ತವರುಮನೆಯಲ್ಲಿ ಇದ್ದುಕೊಂಡು ಬ್ಯೂಟಿ ಪಾರ್ಲರ್‍ನಲ್ಲಿ ಕೆಲಸ ಮಾಡುತ್ತಿದ್ದಳು. ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಪಾರ್ಲಗೆ ಹೋಗಿ ತನಗೆ ಸರಾಯಿ ಕುಡಿಯಲು ಹಣ ನೀಡುವಂತೆ ಪೀಡಿಸಿದ್ದಾನೆ. ಆಕೆ ಹಣ ನೀಡದೆ ಇದ್ದಾಗ ತಂಟೆ ಮಾಡುವುದು, ಪತ್ನಿಯ ಪೋಷಕರೊಂದಿಗೆ ನಿಮ್ಮ ಮಗಳನ್ನು ಕಳುಹಿಸಿ ಇಲ್ಲದಿದ್ದರೇ ನನಗೂ ನಿಮ್ಮ ಮನೆಯಲ್ಲಿ ಇರಲು ಜಾಗೆ ನೀಡುವಂತೆ ನಿತ್ಯ ಜಗಳ ಮಾಡುತ್ತಿದ್ದ. ಇದಕ್ಕೆ ಪೋಷಕರು ಒಪ್ಪದ ಹಿನ್ನಲೆಯಲ್ಲಿ ಹಾಗೂ ಪತ್ನಿ ಸರಾಯಿ ಕುಡಿಯಲು ಹಣ ನೀಡದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ.
ತನ್ನ ದುಶ್ಚಟಕ್ಕೆ ಹಣ ನೀಡದ ಪತ್ನಿಯನ್ನು 28 ಮಾರ್ಚ್2016ರಂದು ಯಮನಾಪೂರ ಗ್ರಾಮ ಹದ್ದಿ ಹಿಂಡಾಲ್ಕೋ ಕಂಪನಿಯ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸೇತುವೆಯ ಬಳಿ ಬೆಳಗ್ಗೆ 10.15ಕ್ಕೆ ಬ್ಯೂಟಿ ಪಾರ್ಲರ್‍ಗೆ ಪತ್ನಿ ತೆರಳುವ ಸಮಯದಲ್ಲಿ ಅವಳ ತಲೆಗೆ, ಮುಖಕ್ಕೆ, ಕೈ ಮಚ್ಚಿನಿಂದ ಕಡಿದು ಹಲ್ಲೆ ನಡೆಸಿ ಕೊಲೆಗೈದಿರುವ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿತನಿಗೆ ಮೇಲೆ ಆರೋಪ ಸಾಭೀತಾಗಿರುತ್ತದೆಂದು ತೀರ್ಮಾನಿಸಿ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಡಿಸಿದೆ. ಮುರುಳೀಧರ ಕುಲಕರ್ಣಿ ವಾದ ಮಂಡಿಸಿದ್ದರು.

loading...