ಪಶ್ಚಿಮಘಟ್ಟಗಳಲ್ಲಿ ತಗ್ಗಿದ ವರುಣನ ಅಬ್ಬರ

0
23
ಪಶ್ಚಿಮಘಟ್ಟಗಳಲ್ಲಿ ತಗ್ಗಿದ ವರುಣನ ಅಬ್ಬರ

|| ಮಳೆ ನಿಂತರೂ ಅಪಾಯ ತಪ್ಪಿಲ್ಲ || ಸಂಚಾರಕ್ಕೆ ಮುಕ್ತವಾಗದ ಸೇತುವೆಗಳು ||
ಕನ್ನಡಮ್ಮ ಸುದ್ದಿ
ಚಿಕ್ಕೋಡಿ 22: ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಇದರಿಂದ ಗಡಿ ಭಾಗದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟದಲ್ಲಿ ಎರಡು ಅಡಿಯಷ್ಟು ಇಳಿಕೆಯಾದರೂ ಸಹ ಕೃಷ್ಣಾ ನದಿಗೆ 1.75 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿರುವದರಿಂದ ಕೃಷ್ಣಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ನದಿ ಜಲಾನಯನ ಪ್ರದೇಶವಾದ ಮಹಾರಾಷ್ಟ್ರದ ಮಹಾಬಳೇಶ್ವರ, ನವಜಾ, ವಾರಣಾ ಮತ್ತು ರಾಧಾನಗರಿ ಭಾಗದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರ ಮಳೆ ಸುರಿದು ಗಡಿ ಭಾಗದಲ್ಲಿ ಆತಂಕ ಸೃಷ್ಠಿ ಮಾಡಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿದ್ದರಿಂದ ನದಿಗಳ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬರುವುದರಿಂದ ನದಿ ಭಾಗದ ಜನರು ನಿಟ್ಟುಸಿರು ಬಿಡುವಂತಾಗಿದೆ.
ಕೊಂಕಣ ಪ್ರದೇಶ ಮತ್ತು ಗಡಿ ಭಾಗದಲ್ಲಿ ಸುರಿಯುತ್ತಿರುವ ಮಳೆ ನೀರಿನಿಂದ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿತ್ತು. ಶನಿವಾರ ಕೃಷ್ಣಾ ನದಿಗೆ 1.52 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ರವಿವಾರ ಅದು 1.48 ಲಕ್ಷ ಕ್ಯುಸೆಕ್‍ಗೆ ಇಳಿಕೆ ಕಂಡಿದೆ. ಮತ್ತು ದೂಧಗಂಗಾ ವೇಧಗಂಗಾ ನದಿಗಳಿಗೆ ಶುಕ್ರವಾರ ಮತ್ತು ಶನಿವಾರ 27 ಸಾವಿರ ಕ್ಯುಸೆಕ್ ನೀರು ಬರುತ್ತಿತ್ತು. ರವಿವಾರ ಅದು 24 ಸಾವಿರ ಕ್ಯುಸೆಕ್‍ಗೆ ತಲುಪಿದೆ. ಇದರಿಂದ ಕೃಷ್ಣಾ ನದಿ ನೀರಿನಲ್ಲಿ ನಾಲ್ಕು ಸಾವಿರ ಕ್ಯುಸೆಕ್ ಕಡಿಮೆಯಾದರೆ ದೂಧಗಂಗಾ ಮತ್ತು ವೇಧಗಂಗಾ ನದಿ ನೀರಿನ ಹರಿವಿನಲ್ಲಿ ಮೂರು ಸಾವಿರ ಕ್ಯುಸೆಕ್‍ಗೆ ಇಳಿಕೆ ಕಂಡು ಬಂದಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜದಿಂದ ಕೃಷ್ಣಾ ನದಿಗೆ 1.48.105 ಕ್ಯುಸೆಕ್ ನೀರು ಹರಿದು ಬಂದರೆ ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮೂಲಕ 24992 ಕ್ಯುಸೆಕ್ ನೀರು ಹರಿದು ಬರುತ್ತದೆ. ಒಟ್ಟಾರೆ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 1.73.043 ಕ್ಯುಸೆಕ ನೀರು ಹರಿದು ಬರಲಾರಂಭಿಸಿದೆ. ಅದರಂತೆ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 2.04.000 ಕ್ಯುಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದಿಂದ 1.53 ಲಕ್ಷ ಕ್ಯುಸೆಕ್ ನೀರನ್ನು ನಾರಾಯನಪೂರ ಜಲಾಶಯಕ್ಕೆ ಹರಿ ಬಿಡುತ್ತಿದ್ದಾರೆ.
ಉಪವಿಭಾಗದ ಎಂಟು ಸೇತುವೆಗಳು ಮುಳುಗಡೆ:
ಮಳೆ ಪ್ರಮಾಣ ಕಡಿಮೆಯಾದರೂ ಸಹ ನದಿಗಳ ನೀರಿನ ಹರಿವಿನಲ್ಲಿ ಅಲ್ಪಸ್ವಲ್ಪ ಕಡಿಮೆಯಾಗಿದೆ. ಇದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಎಂಟು ಸೇತುವೆಗಳ ಮೇಲೆ ಅಪಾರ ಪ್ರಮಾಣದ ನೀರು ಇರುವದರಿಂದ ಸಂಚಾರ ಕಡಿತಗೊಂಡಿವೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ವೇಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬೋಜವಾಡಿ-ಕುನ್ನೂರ, ಜತ್ರಾಟ-ಭೀವಸಿ, ಸಿದ್ನಾಳ-ಅಕ್ಕೋಳ ಈ ಸೆತುವೆಗಳು ಮುಳುಗಡೆಗೊಂಡಿವೆ.
ಮಹಾರಾಷ್ಟ್ರದ ಮಳೆ ಪ್ರಮಾಣ:
ಕೋಯ್ನಾ-69ಮಿಮೀ, ವಾರಣಾ-32ಮಿಮೀ, ಕಾಳಮ್ಮವಾಡಿ- 55ಮಿಮೀ, ನವಜಾ-39, ಸಾಂಗ್ಲೀ-04 ಮಿಮೀ, ರಾಧಾನಗರಿ-57 ಮಿಮೀ, ಪಾಟಗಾಂವ-45 ಮಿಮೀ, ಮಹಾಬಲೇಶ್ವರ-57ಮಿಮೀ, ಕೊಲ್ಲಾಪೂರ-07 ಮಿಮೀ, ಈ ರೀತಿ ಮಹಾರಾಷ್ಟ್ರದಲ್ಲಿ ಮಳೆ ಆಗಿದೆ.
ಚಿಕ್ಕೋಡಿ ತಾಲೂಕಿನ ಮಳೆ ವಿವರ:
ಚಿಕ್ಕೋಡಿ-3.6ಮಿಮೀ, ಅಂಕಲಿ-11.6 ಮಿಮೀ, ನಾಗರಮುನ್ನೋಳ್ಳಿ-2.4 ಮಿಮೀ, ಸದಲಗಾ-4.8. ಮಿಮೀ, ಗಳತಗಾ-6.2 ಮಿಮೀ, ಜೋಡಟ್ಟಿ-0.8 ಮಿಮೀ, ನಿಪ್ಪಾಣಿ ಪಿಡಬ್ಲುಡಿ-9.2 ಮಿಮೀ, ನಿಪ್ಪಾಣಿ ಎಆರ್‍ಎಸ್-2.4 ಮಿಮೀ, ಸೌಂದಲಗಾ-7.2 ಮಿಮೀ ಈ ರೀತಿಯಾಗಿ ಮಳೆಯಾಗಿದೆ.
.

loading...