ಪಾಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಶಾಂತಿಯುತ ಮತದಾನ

0
6
ಕೊಟ್ಟಾಯಂ- ಪಾಲ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಸೋಮವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡಿದ್ದು, ಬೆಳಗ್ಗೆ 11 ಗಂಟೆಯ ವೇಳೆಗೆ ಶೇಕಡಾ 15ರಷ್ಟು ಮತದಾನವಾಗಿತ್ತು.
ಐದು ದಶಕಗಳ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಹಣಕಾಸು ಸಚಿವ ಕೆ.ಎಂ.ಮಾಣಿ ಅವರ ನಿಧನದಿಂದ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಕೇರಳ ಕಾಂಗ್ರೆಸ್(ಎಂ) ನಾಯಕ ಜೋಸ್ ಕೆ. ಮಾಣಿ, ಯುಡಿಎಫ್ ಅಭ್ಯರ್ಥಿ ಜೋಸ್ ಟೋಮ್ ಪುನಿಕ್ಕುನ್ನಲ್, ಎಲ್‌ಡಿಎಫ್ ಅಭ್ಯರ್ಥಿ ಮಾಣಿ ಸಿ. ಕಪ್ಪನ್ ಮತ್ತಿತರರು ತಮ್ಮ ಹಕ್ಕು ಚಲಾಯಿಸಿದರು.
ಬೆಳಗ್ಗೆ  6 ಗಂಟೆಗೆ ಅಣಕು ಮತದಾನ ಮಾಡಿ ಮತ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಾತರಿ ಪಡಿಸಲಾಯಿತು.
ಸಂಜೆ 5 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ನೇರ ಹಣಾಹಣಿ ಇದೆ.
ಭ್ರಷ್ಟಾಚಾರ, ಆರ್ಥಿಕ ಬಿಕ್ಕಟ್ಟು, ಕೃಷಿ ಬಿಕ್ಕಟ್ಟು, ಶಬರಿಮಲೆ ವಿವಾದ ಸೇರಿದಂತೆ ಹಲವು ವಿಷಯಗಳು ಚುನಾವಣಾ ವಿಚಾರವಾಗಿತ್ತು. ಪ್ರಚಾರದ ಸಂದರ್ಭದಲ್ಲಿ ಇದೇ ಹೆಚ್ಚಾಗಿ ಚರ್ಚೆಗೆ ಒಳಗಾಗಿತ್ತು. ಕೆ.ಎಂ. ಮಣಿ ಅವರ ನಿಧನದಿಂದ ಅನುಕಂಪ ಹಾಗೂ ಎಲ್‌ಡಿಎಫ್ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಯುಡಿಎಫ್ ಮುಂದಾಗಿದೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಎನ್‌ಡಿಎ ನೆಚ್ಚಿಕೊಂಡು ಇದನ್ನೇ ಚುನಾವಣೆಗೆ ಬಳಸಿದೆ. ಒಟ್ಟಿನಲ್ಲಿ ಮತದಾರ ಯಾರ ಪರವಾಗಿದ್ದಾನೆ ಎಂಬುದು ಫಲಿತಾಂಶ ಪ್ರಕಟಗೊಂಡ ಬಳಿಕ ಗೊತ್ತಾಗಲಿದೆ.
loading...