ಪಿಓಪಿ ಗಣೇಶ ವಿಗ್ರಹ ಬಳಕೆ ಬೇಡ

0
76

ಕನ್ನಡಮ್ಮ ಸುದ್ದಿ-ಧಾರವಾಡ : ಕೆರೆ,ನದಿ,ಹಳ್ಳ,ಸರೋವರ,ಬಾವಿ ಸೇರಿದಂತೆ ಯಾವುದೇ ಜಲಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‍ನಿಂದ ತಯಾರಿಸಿದ ತಾಯಾರಿಸಿದ ಮತ್ತು ರಸಾಯನಿಕ ಬಣ್ಣಗಳನ್ನು ಲೇಪಿಸಿದ ಗಣೇಶ ವಿಗ್ರಹಗಳನ್ನು ವಿಸರ್ಜಿಸುವದನ್ನು ಈ ಬಾರಿ ಗಣೇಶ ಉತ್ಸವದ ಸಂದರ್ಭದಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗುವದು.ಇಲ್ಲಿನ ಗಣೇಶ ವಿಗ್ರಹಗಳ ತಯಾರಕರು,ಮಾರಾಟಗಾರರು,ಸಾರ್ವಜನಿಕ ಗಣೇಶ ಉತ್ಸವ ಮಹಾಮಂಡಳದ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಸಹಕರಿಸಬೇಕು.ಹೊರ ರಾಜ್ಯಗಳಿಂದ ಖರೀದಿಸಿ ತರಲ್ಪಡುವ ಪಿಓಪಿ ಗಣೇಶ ವಿಗ್ರಹಗಳನ್ನು ಜಿಲ್ಲಾಡಳಿತ ವಶಪಡಿಸಿಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಲಮೂಲಗಳಲ್ಲಿ ಪಿಓಪಿ ಮತ್ತು ರಸಾಯನಿಕ ಬಣ್ಣ ಲೇಪಿಸಿದ ಗಣೇಶ ವಿಗ್ರಹಗಳ ವಿಸರ್ಜನೆ ನಿಷೇಧ ಕಾಯ್ದೆಯ ಕುರಿತು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಪದಾಧಿಕಾರಿಗಳು ಹಾಗೂ ಗಣೇಶ ವಿಗ್ರಹಗಳ ತಯಾರಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಪರಿಸರ ಮಾಲಿನ್ಯ ಹಾಗೂ ಜಲಮಾಲಿನ್ಯ ನಿಯಂತ್ರಣ ಕಾಯ್ದೆಯ ಸೆಕ್ಷನ್ 33 (ಎ) ಅಡಿ ಜಲಮೂಲಗಳನ್ನು ರಸಾಯನಿಕಗಳಿಂದ ಮಲಿನಗೊಳಿಸುವದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.ಈ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲೂ ಸಹ ಅವಕಾಶವಿದೆ.ರಾಜ್ಯ ಉಚ್ಛನ್ಯಾಯಾಲವೂ ಸಹ ಈ ಆದೇಶ ಎತ್ತಿ ಹಿಡಿದಿದೆ.
ಗಣೇಶ ವಿಗ್ರಹಗಳ ತಯಾರಕರು,ಮಾರಾಟಗಾರರು ಹಾಗೂ ಬಳಕೆದಾರರಿಗೆ ಕೊನೆಯ ಘಳಿಗೆಯಲ್ಲಿ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಈ ಬಾರಿ ಸಾಕಷ್ಟು ಮುಂಚಿತವಾಗಿಯೇ ಸಭೆ ಕರೆದು ಸೂಚನೆ ನೀಡಲಾಗುತ್ತಿದೆ. ಯಾವುದೇ ಹಬ್ಬ,ಉತ್ಸವದ ಸಂದರ್ಭಗಳಲ್ಲಿ ಶಬ್ದ ಮಾಲಿನ್ಯ ಉಂಟು ಮಾಡುವ ರೀತಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಶಬ್ದ ಹೊರಡಿಸುವ ಡಿ.ಜೆ.ಗಳ ಬಳಕೆಯೂ ಕೂಡ ನಿಷಿದ್ಧವಾಗಿದೆ. ಸಾರ್ವಜನಿಕರಿಗೆ ,ಗಣೇಶ ಪ್ರತಿಷ್ಠಾಪನೆ ಮಹಾಮಂಡಳಿಗಳಿಗೆ ಗಣೇಶ ವಿಗ್ರಹಗಳ ವಿಸರ್ಜನೆಗೆ ಅನುಕೂಲ ಕಲ್ಪಿಸಲು ಚಿಕ್ಕ ಚಿಕ್ಕ ಹೊಂಡ, ಕಲ್ಯಾಣಿಗಳನ್ನು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿ ಕೊಡಲಾಗುವದು.ಇದಕ್ಕಾಗಿ ಈಗಾಗಲೇ 2 ಕೋಟಿ ರೂ.ಅನುದಾನ ಲಭ್ಯವಿದೆ.ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ಸರಕಾರ ,ಮಹಾನಗರಪಾಲಿಕೆಯಿಂದ ಪಡೆಯಲಾಗುವದು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಸಾರ್ವಜನಿಕರೆಲ್ಲರ ಸಹಕಾರ ಬೇಕು ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಅಧಿಕಾರಿ ವಿಜಯಕುಮಾರ್ ಕಡಕ್‍ಬಾವಿ, ಪೊಲೀಸ್ ಉಪ ಆಯುಕ್ತ ವಾಸುದೇವ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ ಉಪಸ್ಥಿತರಿದ್ದರು.

loading...