ಪ್ರತಿ ಟನ್ನ ಕಬ್ಬಿಗೆ ರೂ.3000 ನೀಡಲು ಒತ್ತಾಯ

0
35

ರೈತರಿಂದ ಕೃಷಿ ಸಚಿವರ ಪ್ರತಿಕೃತಿ ದಹನ

ಘಟಪ್ರಭಾ 6: ಹೊಸದಾಗಿ 2012-13 ನೇ ಸಾಲಿನ ಕಬ್ಬು ಬೆಳೆಯ ಪ್ರತಿ ಟನ್ನಿಗೆ ಪ್ರಥಮ ಕಂತಾಗಿ 3000 ರೂ. ನೀಡಬೇಕು, ರಾಜ್ಯದಲ್ಲಿ ಎಸ್.ಎ.ಪಿ. ಕಾಯ್ದೆ ಜಾರಿಗೆ ತರಬೇಕು, ಬಾಕಿ ಉಳಿಸಿಕೊಂಡ ಎಲ್ಲಾ ಕಾರ್ಖಾನೆಗಳು ಬಿಲ್ಲನ್ನು ಪಾವತಿಸಬೇಕು, 2011-12 ನೇ ಸಾಲಿನ 2 ನೇ ಕಂತಾಗಿ ಹೆಚ್ಚುವರಿಯಾಗಿ 500 ರೂ. ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ರಾಜ್ಯಾದಂತ ರಸ್ತೆ ತಡೆ ನಡೆಸಿ ಪ್ರತಿಭಟಿಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಇಂದು ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ನೂರಾರು ಸದಸ್ಯರು ಸುಮಾರು 3 ಗಂಟೆಗಳ ಕಾಲ ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯನ್ನು ತಡೆದು ಕೃಷಿ ಸಚಿವ ಉಮೇಶ ಕತ್ತಿ ಪ್ರತಿಕೃತಿ ದಹಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದರು.

ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಗಣಪತಿ ಇಳಿಗೇರ ಮಾತನಾಡಿ ಸರ್ಕಾರ ರಚಿಸಿರುವ ಕಬ್ಬು ಬೆಳೆ ನಿಗದಿ ಸಮೀತಿ ಅಧ್ಯಕ್ಷ ಹಾಗೂ ರಾಜ್ಯ ಕೃಷಿ ಸಚಿವರಾಗಿರುವ ಉಮೇಶ ಕತ್ತಿ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಸ್ವತಃ ಕಬ್ಬು ಬೆಳೆ ನಿಗದಿ ಸಮೀತಿ ಅಧ್ಯಕ್ಷರಾಗಿದ್ದರೂ ಕೂಡ ರೈತರು ಬೆಳೆದ ಕಬ್ಬಿನ ಪ್ರತಿ ಟನ್ನಿಗೆ 3000.ರೂ ಬೆಲೆ ನೀಡಲು ವಿರೋಧಿಸುತ್ತಿರುವುದು ರೈತ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಕೃಷಿ ಸಚಿವ ಸ್ಥಾನದಲ್ಲಿದ್ದು ರಾಜ್ಯ ರೈತರ ಕಾಳಜಿ ವಹಿಸದೇ ಕಾರಖಾನೆಗಳ ಮಾಲೀಕರಪರವಾಗಿ ಲಾಭಿ ನಡೆಸುತ್ತಿದ್ದಾರೆಂದು ಆರೋಪಿಸಿದರು.

ಪ್ರತಿಭಟಣಾ ಸ್ಥಳಕ್ಕೆ ಗೋಕಾಕ ತಹಶಿಲ್ದಾರ ಓದ್ರಾಮ ಅವರು ಆಗಮಿಸಿ ಪ್ರತಿಭಟಣಾ ನಿರತ ರೈತರಿಂದ ಮನವಿ ಸ್ವಿಕರಿಸಿ ಸರ್ಕಾರಕ್ಕೆ ರವಾನಿಸುವದಾಗಿ ತಿಳಿಸಿದರು.

ಪ್ರತಿಭಟಣೆಯಲ್ಲಿ ತಾಲೂಕಾ ಅಧ್ಯಕ್ಷ ಭೀಮಶಿ ಗದಾಡಿ, ಬೀರಪ್ಪಾ ಪೂಜಾರಿ, ಭೀಮಶೆಪ್ಪಾ ಕಮತ, ವಿವೇಕ ಸನದಿ, ದೇವೇಂದ್ರ ಮಸ್ತಾರ, ಬಸು ಪಡದಲ್ಲಿ, ಚೂನಪ್ಪಾ ಪೂಜೇರಿ, ಕಲ್ಲಪ್ಪಾ ಪಾಗದ, ಲಕ್ಷಪ್ಪಾ ಮನ್ನಿಕೇರಿ, ವಿಠ್ಠಲ ಕಟ್ಟಿಕಾರ, ಲಕ್ಷ್ಮಣ ಗದಾಡಿ ಸೇರಿದಂತೆ ಘಟಪ್ರಭಾ ಸುತ್ತ ಮುತ್ತಲಿನ ಅನೇಕ ಗ್ರಾಮಗಳಿಂದ ಆಗಮಿಸಿದ  ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಸ್ತೆ ತಡೆ : ಪ್ರತಿ ಟನ್ನು ಕಬ್ಬಿಗೆ 3 ಸಾವಿರ ರೂ. ನೀಡಬೇಕೆಂದು ಆಗ್ರಹಸಿ ರೈತ ಸಂಘ ಹಾಗೂ ಹಸಿರು ಸೇನೆಯವರು ನಡೆಸಿದ 3 ಗಂಟೆಗಳಕಾಲ ಘಟಪ್ರಭಾ ಮೃತ್ಯುಂಜಯ ವೃತ್ತದಲ್ಲಿ ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ಮಾಡಿರುವದರಿಂದ ಪ್ರಯಾಣಿಕರು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರಿಗೆ ಯಾವದೇ ಮುನ್ಸೂಚನೆ ನೀಡದೆ ನಡೆಸಿದ ರಸ್ತೆ ತಡೆಯಿಂದ ಜನರಲ್ಲಿ ಭಾರೀ ಆಕ್ರೌಶ ವ್ಯಕ್ತ ವಾಯಿತು. ಈ ಮದ್ಯೆ ಕೆಲ ಪ್ರಯಾಣಿಕರು ಮತ್ತು ಪ್ರತಿಭಟನಾ ನಿರತ ರೈತರ ನಡುವೆ ಮಾತಿನ ಚಕಮಕಿಯು ನಡೆಯಿತು. ಸುಮಾರು 2 ಕಿ.ಮೀ ವರೆಗೆ ವಾಹನಗಳು ಸಾಲು ಸಾಲಾಗಿ ನಿಂತಿದ್ದು ಪ್ರಯಾಣಿಕರು ದಿಕ್ಕು ತೋಚದೇ ಪರದಾಡುವಂತಾಯಿತು. ತಹಶಿಲ್ದಾರರು ನಿಗದಿತ ಸಮಯಕ್ಕೆ ಆಗಮಿಸದಿರುವದೇ ಇಷ್ಟೆಲ್ಲಾ ತೊಂದರೆಗಳಿಗೆ ಕಾರಣವಾಯಿತೆಂದು ಹೇಳಲಾಗಿದೆ.

 

loading...

LEAVE A REPLY

Please enter your comment!
Please enter your name here