ಪ್ರವಾಹಕ್ಕೆ ಸಹಾಯ ಹಸ್ತ ಚಾಚಿದ ಶ್ರವಣಬೆಳಗೊಳದ ಭಟ್ಟಾರಕ ಶ್ರೀಗಳು

0
0

ಬೆಳಗಾವಿ: ಆಗಸ್ಟ ತಿಂಗಳಿನಲ್ಲಿ ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಎಲ್ಲ ನದಿಗಳಿಗೆ ಪ್ರವಾಹ ಬಂದು ಇಲ್ಲಿನ ಜನಜೀವನ ಅಸ್ತವ್ಯಸ್ತವಾದ ಹಿನ್ನಲೆಯಲ್ಲಿ ಜೈನ ಸಮಾಜದ ಗುರುಗಳಾದ ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಹೊಂಬುಜ ಮಠದ ಶ್ರೀ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಸೋಂದಾ ಮಠದ ಶ್ರೀ. ಭಟ್ಟಾಕಲಂಕ ಭಟ್ಟಾರಕರು ಸ್ವಾಮೀಜಿ ಇವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವುದಲ್ಲದೇ ಪೀಡಿತರಿಗೆ “ಹೆದರಬೇಡಿ , ನಿಮ್ಮೊಂದಿಗೆ ನಾವಿದ್ದೇವೆ” ಎಂಬ ಮಾತುಗಳನ್ನು ಹೇಳುವ ಮೂಲಕ ಧೈರ್ಯ ತುಂಬಿದ್ದಾರೆ.

ಕಳೆದ ವಾರದಲ್ಲಿ ಶ್ರವಣಬೆಳಗೊಳದ ಶ್ರೀ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಪ್ರವಾಹ ವಿಕೋಪಕ್ಕೆ ಒಳಗಾದ ಪ್ರದೇಶಗಳಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನೀಧಿಗೆ ೧೦ ಲಕ್ಷ ರೂ.ಗಳ ದೇಣಿಗೆಯನ್ನು ನೀಡಿದ್ದರು. ಇಂದು ಸುಮಾರು ೨೫ ಲಕ್ಷ ರೂ. ಪರಿಹಾರ ಸಾಮಗ್ರಿಗಳೊಂದಿಗೆ ಆಗಮಿಸಿದ ಶ್ರೀಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಒಂದು ವಾರಕಾಲದ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಚಾತುರ್ಮಾಸ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ಮುನಿಗಳಾಗಲಿ ಭಟ್ಟಾರಕಗಳಾಗಲಿ ಚಾತುರ್ಮಾಸದ ಸ್ಥಳವನ್ನು ಬಿಟ್ಟು ಬರುವುದಿಲ್ಲ . ಆದರೆ ಇತ್ತಿಚಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದಂತ ಸ್ಥಿತಿಯಲ್ಲಿ ಭಟ್ಟಾರಕ ಶ್ರೀಗಳು ತಮ್ಮ ಚಾತುರ್ಮಾಸದಲ್ಲಿ ಪ್ರವಾಸ ಕೈಗೊಂಡು ಈ ಭಾಗದ ಜನರಿಗೆ ಧೈರ್ಯ ಹೇಳಿರುವುದು ನಿಜಕ್ಕು ಅಭಿನಂದಾನಾರ್ಹರು.
ಶ್ರವಣಬೆಳಗೊಳದ ಶ್ರೀ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು, ಹೊಂಬುಜ ಮಠದ ಶ್ರೀ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಆಗಸ್ಟ ೧೫ ರಂದು ಕುಂಭೋಜ ಕ್ಷೇತ್ರಕ್ಕೆ ಆಗಮಿಸಿದರು. ತದನಂತರ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಚಾತುರ್ಮಾಸ ಕೈಗೊಂಡಿರುವ ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ ಮುನಿಗಳ ದರ್ಶನ ಪಡೆದು ಅವರ ಕುಶಲೋಪರಿ ವಿಚಾರಿಸಿದರು. ಅದಲ್ಲದೇ ಗ್ರಾಮದಲ್ಲಿನ ಸಂತ್ರಸ್ಥರಿಗೆ ದಿನನಿತ್ಯದ ವಸ್ತುಗಳನ್ನು ಹಸ್ತಾಂತರಿಸಿದರು. ಯರನಾಳ ಗ್ರಾಮದಿಂದ ಪ್ರಯಾಣ ಬೆಳೆಸಿ ಕೊಣ್ಣೂರ, ಗೋಕಾಕ ಪ್ರದೇಶಗಳಿಗೆ ಭೇಟಿ ನೀಡಿದರು.
ಆಗಸ್ಟ ೧೬ ಶ್ರವಣಬೆಳಗೊಳದ ಶ್ರೀ. ಚಾರುಕೀರ್ತಿ ಸ್ವಾಮೀಜಿಗಳು ಮತ್ತು ಸೋಂದಾ ಮಠದ ಭಟ್ಟಾಕಲಂಕ ಮಹಾಸ್ವಾಮೀಜಿಗಳು ಶೇಡಬಾಳ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿ ಶ್ರೀ.೧೦೮ ಚಿನ್ಮಯಸಾಗರ ಮಹಾರಾಜ ( ಜಂಗಲವಾಲೆ ಬಾಬಾ) ಅವರ ದರ್ಶನ ಪಡೆದು ಅವರ ಕುಶಲೋಪರಿ ವಿಚಾರಿಸಿದರು.ತದನಂತರ ಉಗಾರ ಬಿ.ಕೆ.ಐನಾಪೂರ, ರಡೇರಹಟ್ಟಿ, ಅಥಣಿ, ಪಟ್ಟಣಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ದಿನನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಮುಖಂಡ ವಿನೋದ ದೊಡ್ಡಣ್ಣವರ, ಶೀತಲನಾಥ ಪಾಟೀಲ, ಅರುಣಕುಮಾರ ಯಲಗುದ್ರಿ, ಪುಷ್ಪಕ ಹನಮಣ್ಣವರ, ಅಭಿನಂದನ ಜಾಬನ್ನಜವರ, ರಾಜೇಂದ್ರ ಜಕ್ಕನ್ನವರ, ರಾಜು ಕಟಗೆನ್ನವರ ವಜ್ರಕುಮಾರ ಮಗದುಮ್ಮ ಉಪಸ್ಥಿತರಿದ್ದರು. ಶ್ರೀಗಳು ಆಗಸ್ಟ ೧೭ ರಂದು ತೇರದಾಳ, ಶ್ರಂಕಟ್ಟಿ,ಅಲಗುರು, ಜಮಖಂಡಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

loading...