ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಪರಿಹಾರ: ಶಿವಮೊಗ್ಗದಲ್ಲಿ ಯಡಿಯೂರಪ್ಪ ಘೋಷಣೆ

0
7

ಶಿವಮೊಗ್ಗ- ಶಿವಮೊಗ್ಗದಲ್ಲಿ ಪ್ರವಾಹಕ್ಕೆ ಸಂತ್ರಸ್ತರಾದವರಿಗೆ ತಕ್ಷಣದ ಪರಿಹಾರವಾಗಿ 10 ಸಾವಿರ ರೂಪಾಯಿ, ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಭಾಗಶಃ ಮನೆ ಹಾನಿಯಾದವರಿಗೆ 1 ಲಕ್ಷ ರೂಪಾಯಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಇಂದು ನಗರದ ರಾಮಣ್ಣಶ್ರೇಷ್ಟಿ ಪಾರ್ಕ್ ಗಣಪತಿ ದೇವಾಲಯದಲ್ಲಿರುವ ಸಂತ್ರಸ್ತರ ಕೇಂದ್ರಕ್ಕೆ ಭೇಟಿ ನೀಡಿ ಅವರ ಅಹವಾಲು ಆಲಿಸಿದ ಅವರು, ನೆರೆಯಿಂದ 40 ಕುಟುಂಬಗಳು ತೊಂದರೆಗೊಳಲಾಗಿವೆ. ನೆರೆಯಿಂದ ಜಲಾವೃತವಾಗಿರುವ ಮನೆಗಳ ಸಂತ್ರಸ್ತರಿಗೆ ಬಟ್ಟೆ, ಪಾತ್ರೆ, ಇತರ ಆಹಾರ ಸಾಮಗ್ರಿಗಳ ಖರೀದಿಗೆ ತಕ್ಷಣ 10 ಸಾವಿರ ರೂಪಾಯಿ ನೀಡಲಾಗುವುದು ಎಂದರು.
ಪರಿಹಾರ ಪಡೆದುಕೊಂಡ ಸಂತ್ರಸ್ತರು ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳಬೇಕು, ಮುಂದಿನ ದಿನಗಳಲ್ಲಿ ನೀವು ಬಯಸುವುದಾದರೆ, ಎರಡು ಅಂತಸ್ತಿನ ಅಪಾರ್ಟ್ ಮೆಂಟ್ ನಿರ್ಮಿಸಿ, ಎರಡು ಕೊಠಡಿಗಳ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಶಾಸಕರು, ಅಧಿಕಾರಿಗಳು ಸಂತ್ರಸ್ತರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಸಂತ್ರಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾನಿಗೀಡಾದ ರಸ್ತೆ, ಸೇತುವೆ, ಆಸ್ತಿಪಾಸ್ತಿಗಳ ನಿರ್ಮಾಣಕ್ಕೆ ತುರ್ತು 50 ಕೋಟಿ ರೂ. ಬಿಡುಗಡೆ ಮಾಡುವುದಾಗಿ ತಿಳಿಸಿದ ಮುಖ್ಯಮಂತ್ರಿ, ನಗರದಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ನೆರೆ ಹಾವಳಿ ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಸುಮಾರು 40 ಸಾವಿರ ಕುಟುಂಬಗಳ ಪುವರ್ವಸತಿಗೆ ಸರ್ಕಾರ ಬದ್ಧವಾಗಿದೆ. ಪ್ರವಾಹದಿಂದ ಹಾನಿಗೊಳಗಾದ ಗೋಶಾಲೆಗೆ ಮೇವು ಸೇರಿದಂತೆ, ಪರಿಹಾರಕ್ಕಾಗಿ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರವಾಹ ಮತ್ತು ಮಳೆಯಿಂದ ಹಾನಿಗೀಡಾಗಿರುವ ರಾಜೀವ್ ಗಾಂಧಿ ಬಡಾವಣೆ, ಮಹಾವೀರ ಗೋಶಾಲೆ, ವಿದ್ಯಾನಗರ, ರಾಮಣ್ಣ ಶ್ರೇಷ್ಟಿ ಪಾರ್ಕ್ ಪರಿಹಾರ ಕೇಂದ್ರಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ಶಾಸಕ ಕೆ.ಎಚ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

loading...