ಪ್ರಾಥಮಿಕ ವರದಿಯಂತೆ ಮುಂಗಾರು ಮಳೆಯಲ್ಲಿ ಕೊರತೆ: ಜೂನ್ ಆದಿ ಭಾಗದಲ್ಲಿ ಮತ್ತೊಂದು ಮುನ್ಸೂಚನೆ ವರದಿ ನಿರೀಕ್ಷೆ

0
3

ನಂಜುಂಡಪ್ಪ.ವಿ.
ಬೆಂಗಳೂರು, ಮೇ 14 ಫೋನಿ ಚಂಡಮಾರುತ ಸೇರಿದಂತೆ ಮತ್ತಿತರ ಹಮಾಮಾನ ಕಾರಣಗಳಿಂದಾಗಿ ಈ ಬಾರಿ ರಾಜ್ಯಕ್ಕೆ ಮುಂಗಾರು ಆಗಮನ ವಿಳಂಬವಾಗಲಿದ್ದು, ವಾರ್ಷಿಕ ಮಳೆಯಲ್ಲೂ ಕೊರತೆ ಉಂಟಾಗುವ ಆತಂಕ ಎದುರಾಗುವ ಸಂಭವವಿದೆ.
ಕೇಂದ್ರ ಹವಾಮಾನ ಇಲಾಖೆ ಕಳುಹಿಸಿರುವ ಸೂಚನೆಯಂತೆ ಮುಂಗಾರು ಮಳೆಯಲ್ಲಿ ಸ್ವಲ್ಪ ಮಟ್ಟಿಗೆ ಕೊರತೆ ಎದುರಾಗಲಿದ್ದು, ಮತ್ತೊಂದು ಖಾಸಗಿ ಸಂಸ್ಥೆ ಅಂದಾಜಿಸಿರುವಂತೆ ರಾಜ್ಯದಲ್ಲಿ ಶೇ 10 ರಿಂದ 15 ರಷ್ಟು ಮಳೆ ಕೊರತೆ ಎದುರಾಗಬಹುದು ಎನ್ನಲಾಗಿದೆ.
ಹಾಗೆಂದು ಕಳವಳ ಪಡಬೇಕಿಲ್ಲ. ಪ್ರಾಥಮಿಕ ವರದಿಗಳ ಪ್ರಕಾರ ಮುಂಗಾರು ಮಾರುತ ಕಡಿಮೆಯಾಗಬಹುದು. ಆದರೆ ಜೂನ್ ಮೊದಲ ವಾರದಲ್ಲಿ ಕೇಂದ್ರ ಹವಾಮಾನ ಇಲಾಖೆ ದೇಶದ ನಾಲ್ಕು ವಿಭಾಗಗಳಿಗೆ ಮತ್ತೊಂದು ಸುತ್ತಿನ ಮುನ್ಸೂಚನೆ ಕಳುಹಿಸಲಿದ್ದು, ಅದರಲ್ಲಿ ಮಳೆ ಪರಿಸ್ಥಿತಿ ಕುರಿತು ಅಧಿಕೃತ ಮತ್ತು ಖಚಿತ ಮಾಹಿತಿ ದೊರೆಯಲಿದೆ.
ರಾಜ್ಯದಲ್ಲಿ ಕುಡಿಯುವ ನೀರು, ಬರ ಪರಿಹಾರ, ಮಳೆ, ಬೆಳೆ, ಬಿತ್ತನೆ ಚಟುವಟಿಕೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮಂಗಳವಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸುತ್ತಿದ್ದು, ಮುಂಗಾರು ಮಳೆ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮುಂಗಾರು ಮಳೆ ಶೇ 94 ರಿಂದ 104 ರಷ್ಟಿದ್ದರೆ ಅದು ವಾಡಿಕೆ ಮಳೆಯಾಗುತ್ತದೆ. ರಾಜ್ಯದಲ್ಲಿ ಒಟ್ಟು ಬೀಳುವ ಮಳೆಯ ಪೈಕಿ ಶೇ 72 ರಷ್ಟು ಮಳೆ ಮುಂಗಾರು ಅವಧಿಯಲ್ಲಿ ಸುರಿಯುತ್ತದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬೆಂಗಳೂರು ನಗರದಲ್ಲಿ ಹೆಚ್ಚುವರಿಯಾಗಿ 100 ಮಳೆ ಮಾಪನ ಕೇಂದ್ರಗಳನ್ನು ಅಡವಳಿಸಲಾಗಿದೆ. ಅಗತ್ಯವಿರುವ ಗ್ರಾಮ ಪಂಚಾಯತ್ ಗಳಲ್ಲಿ ಎರಡು ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮಳೆ ಕುರಿತು ಖಚಿತ ಮಾಹಿತಿ ರಾಜ್ಯ ಹವಾಮಾನ ಇಲಾಖೆಗೆ ಲಭ್ಯವಾಗುತ್ತಿದೆ.
ಆದರೆ ಕಳೆದ ಬಾರಿ ಮುಂಗಾರು ಅವಧಿಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿತ್ತು. ಮಡಿಕೇರಿ ಹಾಗೂ ಮಲೆನಾಡಿನ ಹಲವು ಭಾಗಗಳಲ್ಲಿ ಭೂ ಕುಸಿತ ಸಂಭವಿಸಿತ್ತು. ಒಟ್ಟಾರೆ ಸುಮಾರು 900 ಟಿಎಂಸಿ. ನೀರು ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿತ್ತು. ಮುನ್ನೆಚ್ಚರಿಕೆ ವಹಿಸಿ ಈ ಪೈಕಿ ಕನಿಷ್ಠ 100 ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಳಸಿಕೊಂಡಿದ್ದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತಿತ್ತು. ಈ ಬಾರಿಯೂ ಸಹ ಮುಂಗಾರು ಮಳೆಯ ಸಂದರ್ಭದಲ್ಲಿ ಎದುರಾಗಲಿರುವ ವಿಪತ್ತು ನಿಭಾಯಿಸಲು ರಾಜ್ಯ ಸರ್ಕಾರ ಗೃಹ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು, ಸಮಿತಿ ಈಗಾಗಲೇ ಕೊಡಗು ಮತ್ತು ಮಲೆನಾಡು ಭಾಗದ ಜಿಲ್ಲೆಗಳಿಗೆ ಮಳೆ ಹಾನಿ ಸಂಭವಿಸಿದರೆ ಪರಿಸ್ಥಿತಿ ಎದುರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ವಿಪತ್ತು ನಿರ್ವಹಣಾ ತಂಡಗಳನ್ನು ಸಜ್ಜಗೊಳಿಸಿದೆ.
ಭಾರೀ ಮಳೆ ಬಂದರೆ ಏನು ಮಾಡಬೇಕು. ಮಳೆಯೇ ಬಾರದಿದ್ದರೆ ಜನ ಜಾನುವಾರುಗಳ ರಕ್ಷಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವಿಶೇಷ ಕ್ರಿಯಾ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ. ಭಾರೀ ಮಳೆ ಅನಾಹುತುಗಳು ಸಂಭವಿಸಿದರೆ ತಕ್ಷಣ ವಿದ್ಯುತ್ ಸಂಪರ್ಕ, ದೂರ ಸಂಪರ್ಕ ವ್ಯವಸ್ಥೆ ಸರಿಪಡಿಸುವಂತೆ ಮತ್ತು ವಿಪತ್ತುಗಳು ಎದುರಾಗಬಹುದಾದ ಪ್ರದೇಶಗಳಲ್ಲಿ ಪ್ರತ್ಯೇಕ ಟವರ್ ಗಳನ್ನು ಸಜ್ಜುಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ಜನರೇಟರ್ ಗಳನ್ನು ಚಾಲನೆಗೊಳಿಸಲು ಅಗತ್ಯ ಪ್ರಮಾಣದಲ್ಲಿ ಡೀಸೆಲ್ ದಾಸ್ತಾನು ಮಾಡುವಂತೆಯೂ ನಿರ್ದೇಶಿಸಲಾಗಿದೆ.
ಈ ಕುರಿತು “ ಯುಎನ್ಐ ಕನ್ನಡ ಸುದ್ದಿ ಸಂಸ್ಥೆಗೆ “ ಮಾಹಿತಿ ನೀಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಚಂಡಮಾರುತ ಮತ್ತಿತರ ವಿಪತ್ತುಗಳನ್ನು ಮುಂದಾಗಿಯೇ ಪತ್ತೆ ಮಾಡಲು ತಂತ್ರಜ್ಞಾನ ಸಾಕಷ್ಟು ಸುಧಾರಣೆಯಾಗಿದೆ. ಫೋನಿ ಚಂಡಮಾರುತದ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೈಗೊಂಡ ಪರಿಣಾಮದಿಂದ ಸಾಕಷ್ಟು ಜೀವ ಹಾನಿ ತಪ್ಪಿಸಲಾಗಿದೆ. ತಂತ್ರಜ್ಞಾನದ ನೆರವಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಮಯ ದೊರೆಯಲಿದೆ ಎಂದರು.
ಇನ್ನು ಪ್ರಕೃತಿ ವಿಕೋಪಗಳಲ್ಲಿ ಜೀವ ಹಾನಿ, ಆಸ್ತಿ ಪಾಸ್ತಿ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಸಹ ಪರಿಷ್ಕರಿಸಲಾಗಿದೆ. ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 4 ಲಕ್ಷ ರೂ, ಪ್ರಧಾನಿ ಪರಿಹಾರ ನಿಧಿಯಿಂದ 2 ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ ನೀಡಲು ಅವಕಾಶವಿದೆ. ಕಳೆದ ಬಾರಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಜೀವ ಹಾನಿಗೀಡಾದವರ ಕುಟುಂಬದ ಅವಲಂಬಿತರಿಗೆ ತಲಾ 7 ಲಕ್ಷ ರೂ ಪರಿಹಾರ ಒದಗಿಸಲಾಗಿತ್ತು. ಜಾನುವಾರುಗಳು ಜೀವ ಹಾನಿಗೀಡಾದರೆ ಗರಿಷ್ಠ 10 ಸಾವಿರ ರೂ, ಮನೆ ಕುಸಿದರೆ ಗರಿಷ್ಠ 1.75 ಲಕ್ಷ ರೂ ಪರಿಹಾರ ನೀಡಲು ಅವಕಾಶವಿದೆ. ಇನ್ನು ಗುಡುಗು, ಸಿಡಿಲು, ಆಲಿಕಲ್ಲು ಮಳೆಯಿಂದ ಅಸುನೀಗುವವರಿಗೆ ಈವರೆಗೆ ಪರಿಹಾರ ನೀಡುತ್ತಿರಲ್ಲ. ಕಳೆದ ವರ್ಷದಿಂದ ಈ ವರ್ಗದಲ್ಲೂ ಸೂಕ್ತ ಪರಿಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ.
ಇದರ ಗುಡುಗು ಸಿಡಿಲಿನಿಂದ ರಕ್ಷಣ ಪಡೆಯಲು ರೈತರು, ದನಗಾಹಿಗಳು, ಜನ ಸಾಮಾನ್ಯರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವನ್ನು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಡುತ್ತಿದೆ. ಇದಕ್ಕಾಗಿ ಪ್ರತ್ಯೇಕವಾಗಿ “ ಸಿಡಿಲು “ ಎಂಬ ಆಪ್ ಅಭಿವೃದ್ಧಿಪಡಿಸಿದ್ದು, ಇದನ್ನು 25 ಸಾವಿರಕ್ಕೂ ಹೆಚ್ಚುಜನ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಇದು ಪ್ಲೇ ಸ್ಟೋರ್ ನಲ್ಲಿ ಸಹ ಲಭ್ಯವಿದೆ.
“ಸಿಡಿಲು” ಆಪ್ ನಲ್ಲಿ ಸಿಡಿಲಿನಿಂದ ರಕ್ಷಣೆ ಪಡೆಯುವ ವಿಧಾನ, ಮನೆಯಿಂದ ಹೊರಗಡೆ, ಮನೆಯೊಳಗೆ ಯಾವ ರೀತಿಯ ಮುನ್ನೆಚ್ಚರಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು, ಜಾನುವಾರುಗಳನ್ನು ಹೇಗೆ ರಕ್ಷಿಸಬೇಕು ಎನ್ನುವ ವಿವರಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಸಿಡಿಲು, ಗುಡುಗು, ಮತ್ತಿತರ ಪ್ರಕೃತಿ ವಿಕೋಪ ಪರಿಸ್ಥಿತಿ ಸಂದರ್ಭದಲ್ಲಿ ರೈತರು, ಜನ ಸಾಮಾನ್ಯರಿಗೆ ಮಾಹಿತಿ ತಲುಪಿಸಲು ಲೊಕೇಷನ್ ಆಧಾರಿತ ಸಂದೇಶ ರವಾನಿಸುವ ವ್ಯವಸ್ಥೆಯನ್ನು ಸಹ ಉಸ್ತುವಾರಿ ಕೋಶ ಸಜ್ಜುಗೊಳಿಸಿದೆ. ವಿಪತ್ತು ಎದುರಾಗಲಿರುವ ಪ್ರದೇಶದ ಎಲ್ಲಾ ಮೊಬೈಲ್ ಟವರ್ ಗಳಿಗೆ ಏಕ ಕಾಲಕ್ಕೆ ಸಂದೇಶ ರವಾನಿಸುವ ಕುರಿತಂತೆ ಸಂಬಂಧಪಟ್ಟ ಖಾಸಗಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
ಕಳೆದ ವರ್ಷ ಸಂಭವಿಸಿದ ಭೀಕರ ವಿಪತ್ತಿನಿಂದ ಸಾವು ನೋವು ಮರುಕಳಿಸದಂತೆ ನೋಡಿಕೊಳ್ಳಲು ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಸೂಕ್ತ ಕ್ರಿಯಾ ಯೋಜನೆಯೂ ಸಹ ಸಿದ್ಧವಾಗಿದೆ.

loading...