ಪ್ಲಾಸ್ಟಿಕ್ ಬಳಕೆ ಮಾನವ ಕುಲಕ್ಕೆ ಅಪಾಯಕಾರಿ

0
19

ಕನ್ನಡಮ್ಮ ಸುದ್ದಿ-ಶಿರಸಿ: ಇಡೀ ಮನುಕುಲಕ್ಕೆ ಮಾರಕವಾದ ನಿಷೇಧಿತ 40 ಮೈಕ್ರೋನ್ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಸ್ಕೊಡ್‍ವೆಸ್ ಸಂಸ್ಥೆ ಹಾಗೂ ಎಲ್ಲಾ ಸಿಬ್ಬಂದಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ವಿನೂತನ ಕಾರ್ಯಕ್ರಮ ಜರುಗಿತು.
ಪೌರಾಯುಕ್ತೆ ಅಶ್ವಿನಿ ಬಿ.ಎಂ, ರೋಟರಿ ಕ್ಲಬ್ ಅಧ್ಯಕ್ಷ ಆರ್.ಎ.ಖಾಜಿ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸ್ಕೊಡ್‍ವೆಸ್ ಸಂಸ್ಥೆ ಹಾಗೂ ಸಿಬ್ಬಂದಿ ತಮ್ಮ ಎಲ್ಲಾ ಕಚೇರಿಗಳಲ್ಲಿ ಹಾಗೂ ಸಿಬ್ಬಂದಿ ಕುಟುಂಬಗಳಲ್ಲಿ ನಿಷೇಧಿತ 40 ಮೈಕ್ರಾನ್ ಕಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಪ್ರತಿಜ್ಞೆ ಸ್ವೀಕರಿಸಿ ಪ್ಲಾಸ್ಟಿಕ್ ಮುಕ್ತ ಸ್ಕೊಡ್‍ವೆಸ್ ಎಂದು ಘೋಷಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಕೊಡ್‍ವೆಸ್ ಸಂಸ್ಥೆಯ ಮುಖ್ಯಸ್ಥ ವೆಂಕಟೇಶ್ ನಾಯ್ಕ, ಸಂಸ್ಥೆಯು ರಾಜ್ಯದ 18 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇಂದಿನಿಂದ ನಮ್ಮ ಕೇಂದ್ರ ಕಚೇರಿಯು ಸೇರಿದಂತೆ ಎಲ್ಲಾ ಘಟಕ ಕಚೇರಿಗಳು ಹಾಗೂ ಸಿಬ್ಬಂದಿ ಮನೆಗಳು ಪ್ಲಾಸ್ಟಿಕ್ ಮುಕ್ತವಾಗಲಿದೆ. ಶಿರಸಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಸ ಮುಕ್ತ ನಗರ ಹಾಗೂ ಪ್ಲಾಸ್ಟಿಕ್ ನಿಷೇಧ ಕಾರ್ಯಗಳ ಕುರಿತು ನಡೆದ ಸಭೆಯ ನಿರ್ಣಯವನ್ನು ಆಧರಿಸಿ ಸ್ಕೊಡ್‍ವೆಸ್ ಸಂಸ್ಥೆ ಈ ಕ್ರಮ ಕೈಗೊಂಡಿದೆ ಎಂದರು. ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಳಸಲು ಯೋಗ್ಯವಾಗಿರುವ ಬಟ್ಟೆ ಹಾಗೂ ಕಾಗದದ ಚೀಲಗಳನ್ನು ಬಿಡುಗಡೆ ಮಾಡಿ ಮಾತನಾಡಿದ ನಗರ ಸಭೆ ಪೌರಾಯುಕ್ತೆ ಅಶ್ವಿನಿ ಬಿ.ಎಂ, ಮನುಷ್ಯನ ಆಂತರಿಕ ಅಂಗಾಂಗಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಜೀವಿತಾವಧಿಯನ್ನೇ ಕ್ಷೀಣಿಸುವಂತೆ ಮಾಡುತ್ತಿರುವ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ನಿಟ್ಟಿನಲ್ಲಿ ಸ್ಕೊಡ್‍ವೆಸ್ ಸಂಸ್ಥೆ ಕೈಗೊಂಡಿರುವ ಕಾರ್ಯ ಅಭಿನಂದನಾರ್ಹ ಎಂದರು. ನಗರ ಸಭೆ ಪ್ರತಿನಿತ್ಯ ಕಸವಿಲೇವಾರಿ, ಪ್ಲಾಸ್ಟಿಕ್ ನಿಷೇಧ, ನಗರ ನೈರ್ಮಲ್ಯ ಕಾರ್ಯಗಳಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದು ಸಾರ್ವಜನಿಕರು, ಸಂಘಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಸಾರ್ವತ್ರಿಕ ಜಾಗೃತಿಗೆ ಸಹಕರಿಸಲು ಕೋರಿದರು.
ರೋಟರಿ ಕ್ಲಬ್‍ನ ಅಧ್ಯಕ್ಷ ಆರ್.ಎ.ಖಾಜಿ ಮಾತನಾಡಿ, ನಗರದ ವಿವಿಧ ಭಾಗಗಳಲ್ಲಿ ಶ್ರಮದಾನದ ಮೂಲಕ ರೋಟರಿ ಕ್ಲಬ್ ಜನಜಾಗೃತಿ ಮೂಡಿಸುವುದರೊಡನೆ ಪ್ಲಾಸ್ಟಿಕ್ ನಿಷೇಧ ಹಾಗೂ ಕಸ ನಿರ್ವಹಣೆ ಕುರಿತು ಜಾಗೃತಿ ಮೂಡಿಸುತ್ತಾ ಬಂದಿದ್ದು ಈ ಕಾರ್ಯವು ಜನಾಂದೋಲನ ಆಗಬೇಕಿದೆ. ಮುಂದಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರಲ್ಲದೆ ಸ್ಕೊಡ್‍ವೆಸ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಜೀವಜಲ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಸ್ಕೊಡ್‍ವೆಸ್ ಸಂಸ್ಥೆ ಸ್ವತಹ ತಮ್ಮ ಕಚೇರಿ, ಸಿಬ್ಬಂದಿ ಹಾಗೂ ಅವರ ಕುಟುಂಬಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಮಾದರಿ ಪ್ರಯತ್ನ ಎಂದರು.

ಪ್ಲಾಸ್ಟಿಕ್ ನಿಷೇಧಕ್ಕಾಗಿ ಸ್ಕೊಡ್‍ವೆಸ್ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು ನಿರ್ದೇಶಕಿ ಸರಸ್ವತಿ ಎನ್ ರವಿ ರವರು ಪ್ರತಿಜ್ಞಾ ವಿಧಿ ಬೋಧಿಸಿ ಪ್ಲಾಸ್ಟಿಕ್ ನಿಷೇಧಕ್ಕಾಗಿ ಕಚೇರಿ ಆದೇಶ ಹೊರಡಿಸಿದರು. ಈ ವೇಳೆ ನಿವೃತ್ತ ಪ್ರಾಚಾರ್ಯ ಕೆ.ಎನ್.ಹೊಸಮನಿ, ಶ್ರೀಧರ ಹೆಗಡೆ, ರಾಮಚಂದ್ರ ಪ್ರಭು, ನಗರ ಸಭೆ ಆರೋಗ್ಯ ನಿರೀಕ್ಷಕ ಆರ್.ಎಂ. ವೆರ್ಣೇಕರ್, ಅಭಿಯಂತರರಾದ ಮಧುರ ಮೊಗದೂರು, ಕಾರ್ಯಕಾರಿ ವ್ಯವಸ್ಥಾಪಕಿ ಭಾಗ್ಯಶ್ರೀ ಬಿ., ಯೋಜನಾಧಿಕಾರಿ ರಾಮಚಂದ್ರ ಭಟ್ಟ ಇದ್ದರು. ಸಂಸ್ಥೆಯ ಯೋಜನಾಧಿಕಾರಿ ರಿಯಾಜ್ ಸಾಗರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯನಿರ್ವಹಕ ಗಣಪತಿ ವಿ ನಾಯ್ಕ ವಂದಿಸಿದರು. ಲಕ್ಷ್ಮಿವಿನಾಯಕ, ಜಿತೇಂದ್ರ ಕುಮಾರ್, ಸುಧೀರ್ ಎಂ ಶೆಟ್ಟಿ ಕಾರ್ಯಕ್ರಮದಲ್ಲಿ ಯಶಸ್ವಿಗೆ ಶ್ರಮಿಸಿದರು.

loading...