ಫಲಾನುಭವಿಗಳ ಪಟ್ಟಿ ಪರಿಶೀಲಿಸಲು ಸೂಚನೆ: ನಾಯಕ

0
30

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಗುಂಪು ಮನೆಗಳ ಪಟ್ಟಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ನೀಡುವ ದಾಖಲೆಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಅನರ್ಹರನ್ನು ಪಟ್ಟಿಯಿಂದ ಕೈ ಬೀಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಹೀಗಾಗಿ ಪಟ್ಟಿಯಲ್ಲಿ ಅನರ್ಹರ ಆಯ್ಕೆಯಾಗಿದ್ದರೆ ಮೂಲಾಜಿಲ್ಲದೆ ಅವರನ್ನು ಕೈ ಬಿಡಲಾಗುವುದು ಎಂದು ಮುಖ್ಯಾಧಿಕಾರಿ ಹನಮಂತಮ್ಮ ನಾಯಕ ಹೇಳಿದರು.
ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ಸ್ಥಾಯಿ ಕಮೀಟಿ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ನಿರಾಶ್ರಿತರಿಗೆ ಮನೆ ನೀಡುವ ಉದ್ದೇಶದಿಂದ ಆಯ್ಕೆ ಮಾಡಿರುವ ಫಲಾನುಭವಿಗಳಲ್ಲಿ ಪಟ್ಟಿಯಲ್ಲಿ ಅನರ್ಹರು ಹೆಚ್ಚಾಗಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕೇಳಿ ಬಂದಿವೆ. ಆದರೆ ಯಾವುದೇ ದೂರುಗಳು ಈವರೆಗೂ ಪುರಸಭೆ ಕಾರ್ಯಾಲಯಕ್ಕೆ ಬಂದಿಲ್ಲ ಎನ್ನುತ್ತಿದಂತೆಯೇ ಮದ್ಯಪ್ರವೇಶಿಸಿದ ಕೆಲ ಸದಸ್ಯರು, ಸ್ಥಾಯಿ ಸಮಿತಿಯಿಂದ ದೂರು ನೀಡಲಾಗುವುದು. ಹೀಗಾಗಿ ಕಡ್ಡಾಯವಾಗಿ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಷ್ಕರಿಸಲು ಮುಂದಾಗಬೇಕು ಎಂದು ಮುಖ್ಯಾಧಿಕಾರಿ ಅವರನ್ನು ಒತ್ತಾಯಿಸಿದರು.
ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಹೌಸ್‌ ಫಾರ್‌ ಆಲ್‌ ಅಡಿಯಲ್ಲಿ ಪಟ್ಟಣದಲ್ಲಿ ಒಟ್ಟು 1,116 ಮನೆಗಳ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯಲ್ಲಿ ಅರ್ಹರಿಗಿಂತ ಅನರ್ಹರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ನೌಕರದಾರರು, ಹತ್ತಾರು ಮನೆ ಬಾಡಿಗೆ ನೀಡಿರುವ ಶ್ರೀಮಂತರು ಹಾಗೂ ಜಮೀನ್ದಾರರಿಗೆ ಮೊದಲ ಆಧ್ಯತೆ ನೀಡಲಾಗಿದೆ. ಹೀಗಾಗಿ ಬಿಡುಗಡೆಗೊಳಿಸಿರುವ ಪಟ್ಟಿಯು ಅಂತಿಮವಾದರೆ ಅಕ್ರಮದಲ್ಲಿ ಭಾಗಿಯಾದವರ ಹಾಗೂ ಅವರಿಗೆ ಸಹಕರಿಸಿದವರ ಮೇಲೆ ಎಸಿಬಿಯಲ್ಲಿ ದೂರು ದಾಖಲಿಸಲಾಗುವುದು ಎಂದು ಸದಸ್ಯ ಅಶೋಕ ವನ್ನಾಲ ಎಚ್ಚರಿಸಿದರು.
ಸದಸ್ಯ ಶರಣಪ್ಪ ರೇವಡಿ ಮಾತನಾಡಿ, ಪಟ್ಟಣದಲ್ಲಿ ಶೌಚಾಲಯ ಹಾಗೂ ವಿವಿಧ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಅಧಿಕಾರಿಗಳು ಸರ್ಕಾರದ ಸಹಾಯಧನ ನೀಡಬೇಕಿತ್ತು. ಆದರೆ ನಿರ್ಮಿಸಿಕೊಳ್ಳದವರಿಗೆ ಪುರಸಭೆ ಅಧಿಕಾರಿಗಳು ಹಣವನ್ನು ಪಾವತಿಸಿದ್ದಾರೆ ಎನ್ನುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಹೀಗಾದರೆ ಸರ್ಕಾರದ ಸೌಲಭ್ಯಗಳು ಅರ್ಹರಿಗೆ ತಲುಪುವುದು ಯಾವಾಗ ಎಂದು ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ಹಿಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ್ದ ಸೂಚನೆಗಳನ್ನು ಜಾರಿಗೆ ತಂದಿಲ್ಲ. ಅಲ್ಲದೆ ಮಳೆ ಕೋಯ್ಲು ಯೋಜನೆ ಪಟ್ಟಣದಲ್ಲಿ ಸಂಪೂರ್ಣವಾಗಿ ಹಳ್ಳ ಹಿಡಿಸಿರುವುದು ಒಂದೆಡೆಯಾದರೆ ಇತ್ತ ಕಳೆದ ವರ್ಷ ಪಟ್ಟಣದಲ್ಲಿ ಮಳೆಗೆ ಬಿದ್ದಿದ್ದ ಮನೆಗಳಿಗೆ ಈವರೆಗೂ ಸಹಾಯಧನ ತಲುಪಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಸ್ಥಾಯಿ ಕಮೀಟಿ ಚೇರಮನ್‌ ಪ್ರಭು ಚವಡಿ ಮಾತನಾಡಿ, ಪುರಸಭೆಗೆ ತೆರಿಗೆ ಸಂಗ್ರಹದಲ್ಲಿ ಬಾರಿ ಇಳಿಮುಖವಾಗಿದೆ. ಹೀಗಾದರೆ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪುರಸಭೆಗೆ ತೆರಿಗೆ ವಂಚಿಸುತ್ತಿರುವವರ ಮೇಲೆ ಕ್ರೀಮಿನಲ್‌ ಕೇಸ್‌ ಹಾಕುವುದರ ಜೊತೆಗೆ ಕಡ್ಡಾಯವಾಗಿ ಕಟ್ಟಡ ಪರವಾಣಿಗೆ, ನೀರಿನ ಕರ ಹಾಗೂ ಪ್ರತಿಯೊಂದು ವಾಣಿಜ್ಯ ಮಳಿಗೆಗಳಿಂದ ತೆರಿಗೆ ಸಂಗ್ರಹಕ್ಕೆ ಅಧಿಕಾರಿಗಳು ಮುಂದಾದಾಗ ಮಾತ್ರ ಪಟ್ಟಣದ ಅಭಿವೃದ್ಧಿ ಜೊತೆಗೆ 4 ರಿಂದ 6 ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲು ಸಾಧ್ಯವಿದೆ ಎಂದರು.
ಪುರಸಭೆ ಅಧ್ಯಕ್ಷೆ ಸುಜಾತಾ ಚುಂಚಾ ಸದಸ್ಯರಾದ ವಿಜಯಲಕ್ಷ್ಮಿ ಚೆಟ್ಟರ, ಸುಮಿತ್ರಾ ತೊಂಡಿಹಾಳ, ಅಕ್ಕಮ್ಮ ಜಾನಾಯಿ , ಚಂದ್ರು ಚಳಗೇರಿ ಹಾಗೂ ರವಿ ಕಲಾಲ ಸೇರಿ ಅಧಿಕಾರಿಗಳು ಇದ್ದರು.

loading...