ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸಲು ಆಗ್ರಹ

0
24

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್‌ ನೇತೃತ್ವದಲ್ಲಿ ತಾಲೂಕು ಮಟ್ಟದ ಸಾರ್ವಜನಿಕರ ಸಮಸ್ಯೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆ ನಡೆಯಿತು.
ಈ ವೇಳೆ ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಅಲ್ಲದೆ ಪುರಸಭೆ ವ್ಯಾಪ್ತಿಯ ಕೆಲ ಲೇ ಔಟ್‌ಗಳು ಅಭಿವೃದ್ಧಿಯಾಗುವ ಮುಂಚಿತವಾಗಿ ಎಲ್ಲ ಉತಾರಗಳನ್ನು ನೀಡಲಾಗುತ್ತಿದೆ. ಪರಿಣಾಮ ಬಡಾವಣೆಗಳು ಮೂಲ ಸೌಕರ್ಯದಿಂದ ವಂಚಿತವಾಗುತ್ತಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶವನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ಆಗ್ರಹಿಸಿ ಇತರ ಸಮಸ್ಯೆಗಳ ಜೊತೆಗೆ ಕೆಲ ಸಂಘಟನೆ ಮುಖಂಡರು ಹಾಗೂ ಜನತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹಿಂದುಳಿದ ವರ್ಗಗಳಿಗೆ ಸಮರ್ಪಕವಾದ ರುದ್ರಭೂಮಿಯಿಲ್ಲ. ಅಂತ್ಯ ಸಂಸ್ಕಾರ ಮಾಡಲು ಹಿಂದುಳಿದ ವರ್ಗದ ಜನತೆ ಇಂದಿಗೂ ಪರದಾಡುವಂತಾಗಿದೆ. ಹೀಗಾಗಿ ಪ್ರತಿಯೊಂದು ಗ್ರಾಮ ಪಂಚಾಯ್ತಿಯಲ್ಲಿ ರುದ್ರಭೂಮಿಗೆ ಸೂಕ್ತ ಜಾಗ ನೀಡುವಂತೆ ಪಂಚಾಯ್ತಿಗಳಿಗೆ ಸೂಚಿಸಬೇಕು ಎಂದು ಕೆಲ ದಲಿತಪರ ಸಂಘಟನೆಗಳು ಮನವಿ ಮಾಡಿದ್ದು ಒಂದೆಡೆಯಾದರೆ ಇತ್ತ ಗಜೇಂದ್ರಗಡ ಪಟ್ಟಣದಲ್ಲಿ ಆಧಾರ್‌ ಕಾರ್ಡ ಕೇಂದ್ರವಿಲ್ಲದ ಪರಿಣಾಮ ಪಟ್ಟಣ ಹಾಗೂ 30 ಕ್ಕೂ ಅಧಿಕ ಗ್ರಾಮಗಳ ಜನತೆ ನೆರೆಯ ಪಟ್ಟಣಗಳಿಗೆ ಅಲೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವದನ್ನು ಸರಳಿಕರಣಗೊಳಿಸಬೇಕು ಎಂದು ಕೆಲ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಜಿಲ್ಲಾಧಿಕಾರಿ ಮನೋಜಕುಮಾರ ಜೈನ್‌ ಮಾತನಾಡಿ, ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ರುದ್ರಭೂಮಿ ಜಾಗದ ಕುರಿತು ಪರಶೀಲನೆ ಹಾಗೂ ಗಜೇಂದ್ರಗಡದ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಆಧಾರ್‌ ಕಾರ್ಡ ಆರಂಭಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಅಲ್ಲದೆ ಉದ್ಯೋಗ ಖಾತ್ರಿ ಹಾಗೂ ಲೇಔಟ್‌ ಕುರಿತು ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಜನತೆಯ ಅಹವಾಲು ಮುಗಿಯುತ್ತಿದಂತೆಯೇ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳನ್ನು ಸಭೆಯಿಂದ ಹೊರಗೆ ತೆರಳುವಂತೆ ಸೂಚಿಸಿ ಅಧಿಕಾರಿಗಳ ಜೊತೆಗೆ ಸಭೆಗೆ ಮುಂದಾದರು. ಈ ಕುರಿತು ತಹಸೀಲ್ದಾರ್‌ ಶ್ರೀಶೈಲ್‌ ತಳವಾರ ಅವರಿಗೆ ಪಟ್ಟಣದ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನೀಡುವ ಸೂಚನೆ ಕುರಿತು ಮಾಹಿತಿ ಪಡೆಯುವುದು ಹೇಗೆ ಎಂದು ಪ್ರಶ್ನಿಸಿದಾಗ ತಹಸೀಲ್ದಾರ್‌ ತಳವಾರ ಅವರು ಜನತೆಯ ಅಹವಾಲು ಆಲಿಸುವ ಕುರಿತು ಮಾತ್ರ ವರದಿ ಮಾಡಿಕೊಳ್ಳಿ ಎನ್ನುವ ದಾಟಿಯಲ್ಲಿ ಉತ್ತರಿಸಿ ಸಭೆಯೊಳಗೆ ನಡೆದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗಜೇಂದ್ರಗಡ ಮತ್ತು ರೋಣ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

loading...