ಬಸವಣ್ಣನವರು ಸ್ಥಾಪಿಸಿದ್ದು ಧರ್ಮ ಹೊರತು ಜಾತಿಯನ್ನಲ್ಲ

0
38

ಧಾರವಾಡ : ಪ್ರಾಮಾಣಿಕ ಸೇವೆ ಮಾಡುವ ಮೂಲಕ ಮತ್ತೊಬ್ಬರ ಮನ ನೋಯಿಸದೆ ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿ ಪಾತ್ರರಾಗಿ ಸ್ನೇಹ ಸಮಾನತೆಯಿಂದ ಬದುಕುವುದೆ ಬಸವ, ಶರಣ ಧರ್ಮ ಎಂದು ಬಸವವಾಹಿನಿ ಮಖ್ಯಸ್ಥ ಈ.ಕೃಷ್ಣಪ್ಪ ಅಭಿಪ್ರಾಯಪಟ್ಟರು
ಸೈನಿಕ ಕಾಲೋನಿಯಲ್ಲಿ ಜರುಗಿದ ಶ್ರಾವಣ ಮಾಸದ ನಿಮಿತ್ತ ಏರ್ಪಡಿಸಿದ ಬಸವಧರ್ಮ ಚಿಂತನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಬುದ್ದ, ಬಸವ, ಏಸು, ಪೈಗಂಬರರು ಪ್ರವಾದಿಗಳು ದೇವನೊಬ್ಬನೆ ಎನ್ನುವ ಸಂದೇಶ ಕೊಟ್ಟ ಕಾರಣ ಆ ಧರ್ಮಿಯರು ಏಕದೇವೋಪಾಸಕರಾದರು. ಈ ನಾಡಿನಲ್ಲಿ ಜನಿಸಿದ ಪ್ರತಿಯೊಬ್ಬ ಮಹಾತ್ಮರು ಸಮಾಜಕ್ಕೆ ಮೌಲ್ಯಾಧಾರಿತ ಸಾಹಿತ್ಯವನ್ನು ಕೊಟ್ಟುಹೋಗಿದ್ದಾರೆ ಆದರೆ ಅವರು ಕೊಟ್ಟಿರುವ ಸಾಹಿತ್ಯ ಹಾಗೂ ಸಂದೇಶವನ್ನು ಶೇ. 50. ರಷ್ಟು ನಾವು ಅಳವಡಿಕೆ ಮಾಡಿಕೊಂಡಿದ್ದರೆ ಈ ನಾಡು ಕಲ್ಯಾಣ ರಾಜ್ಯವಾಗುತ್ತಿತ್ತು ಎಂದರು.
ವೇದಿಕೆ ಮೇಲೆ ನಿಂತು ತಾಸುಗಟ್ಟಲೆ ಭಾಷಣ ಮಾಡುವವರು ಬಸವಣ್ಣನವರ ಬಗ್ಗೆ ಸಾಕಷ್ಟು ವಚನಗಳನ್ನು ಹೇಳಬಲ್ಲರು ಆದರೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕೆಂಬ ಹಂಬಲವಿಟ್ಟುಕೊಂಡರೆ ಬಸವತತ್ವ ಇನ್ನೂ ಹೆಚ್ಚು ಅನುಷ್ಠಾನಗೊಳುತ್ತದೆ. ದೀನ.ದಲಿತ.ಹಿಂದುಳಿದ, ಸಮಾಜದಲ್ಲಿ ತುಳಿತಕ್ಕೊಳಗಾದವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸ್ಥಾಪಿಸಿದ ಧರ್ಮ ಬಸವಧರ್ಮವಾಗಿದೆ ಹೊರತು ಅದು ಜಾತಿಯಲ್ಲ. ಬಸವಣ್ಣನವರು ಎಲ್ಲಾ ಸಮಾಜ,ವರ್ಗದರನ್ನು ಪ್ರೀತಿಯಿಂದ ಅಪ್ಪಿಕೊಂಡರು ಆದರೆ ಅವರನ್ನು ಕೆಲವರು ಲಿಂಗಾಯತ ಜಾತಿಗೆ ಮೀಸಲಾಗಿಡುತ್ತಿರುವುದು ವಿಷಾದಕರ ಸಂಗತಿ ಎಂದರು.
ಕರ್ನಾಟಕ ಸರ್ಕಾರದ ನಿವೃತ್ ಕಾರ್ಯದರ್ಶಿ ಜಿ.ವಿ.ಕೊಂಗವಾಡ ಮಾತನಾಡಿ, ದೇಶಕ್ಕೆ ಮೌಲ್ಯಾಧಾರಿತ ಸಂದೇಶವನ್ನು ನೀಡಿದ ಮಹಾತ್ಮರನ್ನು ನಾವು ಸ್ಮರಿಸಿದರೆ ಸಾಲದು ಅವರು ನಡೆದು ನುಡಿದಂತೆ ನಾವು ಅವರ ಮಾರ್ಗದಲ್ಲಿ ಸಾಗಲು ಪ್ರಯತ್ನಿಸಬೇಕು. ಮುಸ್ಲಿಂರಿಗೆ ಖುರಾನ್, ಕ್ರಿಶ್ಚಿಯನ್‍ರಿಗೆ ಬೈಬಲ್ ಹೇಗೆ ಪವಿತ್ರ ಗ್ರಂಥವಾಗಿದೆಯೋ ಹಾಗೆ ಬಸವಧರ್ಮಿಯರಿಗೆ ವಚನ ಸಾಹಿತ್ಯವೆಂಬುದು ಪವಿತ್ರ ಗ್ರಂಥವಾಗಿದೆ. ವಚನ ಓದುವುದರ ಜೊತೆಗೆ ಅದರಲ್ಲಿನ ಮೌಲ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಅಭಿವೃದ್ದಿಯಾಗುತ್ತದೆ. ಕಲ್ಯಾಣ ಕ್ರಾಂತಿ ನಂತರ 770 ಜನ ಅಮರಗಣಂಗಳು ನಾಡಿನ ವಿವಿಧ ಭಾಗದಲ್ಲಿ ವಚನ ಸಾಹಿತ್ಯವನ್ನು ಹೊತ್ತುಕೊಂಡು ಸಂಚರಿಸಿದರು. ಆದರೆ ವಚನ ಸಾಹಿತ್ಯವನ್ನು ಕೆಲವು ಮಠಗಳು ಮಾತ್ರ ಪ್ರಸಾರ ಮಾಡುತ್ತಿದ್ದು ಇನ್ನುಳಿದ ಬಸವತತ್ವ ಮಠಗಳು ಬಸವಾದಿ ಶರಣರ ಸಂದೇಶ ಸಾರುವಲ್ಲಿ ಕೊರತೆ ಅನುಭವಿಸುತ್ತಿರುವುದು ನೋವಿನ ಸಂಗತಿ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ ಅಧಿಕಾರಿ ವಿ.ವಿ.ಕಟ್ಟಿ, ಶಿವಾನಂದ ಶೆಟ್ಟೆಣ್ಣವರ, ಸವಿತಾ ಅಮರಶೆಟ್ಟಿ, ಮಲ್ಲೇಶಪ್ಪ ಪಳೋಟಿ, ಪ್ರೊ. ಎಸ್.ಕೆ.ಕುಂದರಗಿ, ಶಿವಾನಂದ ಲೋಲೆನವರ, ರೇಣುಕಾ ಶಿರಗಂಬಿ, ಎಸ್.ಬಿ.ನಸಬಿ, ಚನಬಸಪ್ಪ ಕಗ್ಗಣ್ಣವರ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಬಸವವಾಹಿನಿ ಮಖ್ಯಸ್ಥ ಈ.ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

loading...

LEAVE A REPLY

Please enter your comment!
Please enter your name here