ಬಸವ ಜಯಂತಿ: ಉಪ ರಾಷ್ಟ್ರಪತಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಶುಭಾಶಯ

0
12

ಬೆಂಗಳೂರು:- ಬಸವ ಜಯಂತಿಯ ಅಂಗವಾಗಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕನ್ನಡದಲ್ಲೇ ಟ್ವೀಟ್ ಮಾಡಿ, ಮೊಟ್ಟಮೊದಲ ಸಾಮಾಜಿಕ ಸುಧಾರಕ “ ಶ್ರೀ ಜಗಜ್ಯೋತಿ ಬಸವೇಶ್ವರರ ” ಜಯಂತಿಯ ಶುಭಾಶಯಗಳನ್ನು ದೇಶದ ಸಮಸ್ತ ಜನತೆಗೆ ಕೋರುತ್ತಿದ್ದೇನೆ. ಭಾರತದಲ್ಲಿ ಮೊಟ್ಟಮೊದಲ ಸಾಮಾಜಿಕ ಸುಧಾರಣಾವಾದಿ ಮತ್ತು ತಾತ್ವಿಕ ಚಿಂತಕ. 12 ನೇ ಶತಮಾನದಲ್ಲಿ ಅಸ್ಪೃಶ್ಯತೆಯ ಹೆಮ್ಮರವನ್ನು ಕಿತ್ತುಹಾಕಲು ಹೋರಾಟ ಮಾಡಿದ ಹರಿಕಾರ. “ಕಾಯಕವೇ ಕೈಲಾಸ” ಎಂಬ ಅಮೃತವಾಣಿಯ ಮೂಲಕ ಕೆಲಸವೇ ದೇವರು, ಎಂಬುದನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿದ ಪ್ರಥಮ ಪ್ರವರ್ತಕ ಎಂದು ತಿಳಿಸಿದ್ದಾರೆ.

ವಚನ ಸಾಹಿತ್ಯದ“ ಮೂಲಕ ಧಾರ್ಮಿಕ ಕ್ಲಿಷ್ಟ ವಿಷಯಗಳನ್ನು ಸರಳವಾಗಿ “ಅನುಭವ ಮಂಟಪ”ದ ಮೂಲಕ ಸಮಸ್ತ ಜನತೆಗೂ ತಲುಪಿಸಿದ ಮಾರ್ಗದರ್ಶಕ. ಇಂತಹ ಮಹಾನ್ ವ್ಯಕ್ತಿಗೆ ನನ್ನ ವಂದನೆಗಳು ಎಂದು ನಾಯ್ಡು ತಿಳಿಸಿದ್ದಾರೆ.

ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಮಾದರಿಯನ್ನು – ಸಂಸತ್ತಿನ ಪರಿಕಲ್ಪನೆಯನ್ನು ತೋರಿಸಿಕೊಟ್ಟವರು ಬಸವಣ್ಣ. ಅವರ ವಚನಗಳು ಕೇವಲ ಬೋಧನೆಯಲ್ಲ, ಅವು ಕ್ರಾಂತಿ ಗೀತೆಗಳು. ಅವರು ತೋರಿದ ದಾರಿಯಲ್ಲಿ ಸಾಗಿದರೆ ಕಲ್ಯಾಣ ರಾಜ್ಯದ ಕನಸು ನನಸಾದೀತು. ಸಮಸ್ತ ಕನ್ನಡಿಗರಿಗೂ ಬಸವ ಜಯಂತಿಯ ಶುಭಾಶಯಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ವಿಷ್ಣುವಿನ ಆರನೇಯ ಅವತಾರ, ರೇಣುಕಾದೇವಿ ಹಾಗೂ ಸಪ್ತರ್ಷಿ ಜಮದಗ್ನಿಯ ವೀರಪುತ್ರ, ಹಿಂದೂ ಧರ್ಮದ ಏಳು ಚಿರಂಜೀವಿಗಳಲ್ಲಿ ಒಬ್ಬರಾದ ಅವತಾರ ಪುರುಷ, ಪಿತೃವಾಕ್ಯ ಪರಿಪಾಲಕ ಪರಶುರಾಮ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ,
ಬಡವರು,‌ ಶೋಷಿತರು, ಜಾತಿ ತಾರತಮ್ಯದಿಂದ ನರಳಿದವರು, ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು. ಬಸವ ಜಯಂತಿಯ ದಿನ ಆ ಚೇತನಕ್ಕೆ ಭಕ್ತಿಯ ನಮನಗಳು ಎಂದು ತಿಳಿಸಿದ್ದಾರೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು. ಕಾಯಕ ಯೋಗದ ಮೂಲಕ ಜಗಜ್ಜ್ಯೋತಿ ಬಸವಣ್ಣನವರು ಮನುಕುಲಕ್ಕೆ ಆದರ್ಶ ಚಿಂತನೆಗಳನ್ನು ನೀಡಿದವರು. 12ನೇ ಶತಮಾನದಲ್ಲಿ ಅವರು ತೋರಿದ ಸುಧಾರಣೆಯ ಬೆಳಕು ಇಂದಿಗೂ ದಾರಿ ತೋರುತ್ತಿದೆ. ಬಸವೇಶ್ವರರ ಉಪದೇಶಗಳ ಬೆಳಕಿನಲ್ಲಿ ನಡೆಯೋಣ, ಎಲ್ಲರೂ ಮನೆಯಲ್ಲಿಯೇ ಬಸವ ಜಯಂತಿ ಆಚರಿಸೋಣ ಎಂದು ತಿಳಿಸಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ, ಜಗಜ್ಯೋತಿ ಬಸವಣ್ಣನವರ ಜಯಂತಿಯ ಶುಭಾಶಯಗಳು. ಕಾಯಕವೇ ಕೈಲಾಸವೆಂದ ಭಕ್ತಿಭಂಡಾರಿಯ ಚರಣಗಳಿಗೆ ಶಿರಬಾಗಿ ಶರಣು. ಅನುಭವ ಮಂಟಪವೆಂಬ ಪ್ರಜಾತಾಂತ್ರಿಕ ಸದನದ ಸ್ಥಾಪಕನಿಗೆ ಶಿರಬಾಗಿ ಶರಣು. ಇವನಾರವ, ಇವನಾರವ ಎಂದೆಣಿಸದ ವಿಶ್ವಮಾನವನಿಗೆ ಶಿರಬಾಗಿ ಶರಣು ಎಂದು ತಿಳಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಟ್ವೀಟ್ ಮಾಡಿ, ಅಂತರಂಗ ಬಹಿರಂಗ ಆತ್ಮಸಂಗ ಒಂದೇ ಅಯ್ಯಾ ನಾದಬಿಂದುಕಳಾತೀತ ಆದಿಯಾಧಾರ ನೀನೇ ಅಯ್ಯಾ ಆರೂಢದ ಕೂಟದ ಸುಖವ ಕೂಡಲಸಂಗಯ್ಯ ತಾನೇ ಬಲ್ಲ. ‘ಕಾಯಕವೇ ಕೈಲಾಸ’ ಎಂಬ ತತ್ವದ ಮೂಲಕ ಭಕ್ತಿಯ ಪಥದಲ್ಲಿ ಸಮಾಜ ಸುಧಾರಣೆಯ ಮಹಾಕೈಂಕರ್ಯವನ್ನು ಮಾಡಿದ 12ನೇ ಶತಮಾನದ ಸನಾತನ ಧರ್ಮದ ಕಾಲಜ್ಞಾನಿ ಅಣ್ಣ ಬಸವಣ್ಣನವರ ಜಯಂತಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ ನಮ್ಮ ಕೂಡಲ ಸಂಗನ ಶರಣರ ಅನುಭಾವದಿಂದ ಭವದ ಕೇಡು ನೋಡಯ್ಯಾ ನಾಡಿನ ಸಮಸ್ತ ಜನತೆಗೆ ವಿಶ್ವಗುರು ಶ್ರೀ ಬಸವೇಶ್ವರರ ಜಯಂತೋತ್ಸವದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕಂದಾಯ ಸಚಿವ ಆರ್. ಅಶೋಕ್ ಟ್ವೀಟ್ ಮಾಡಿ, ಸಮಾಜ ಸುಧಾರಕರು, ಶ್ರೇಷ್ಠ ಕವಿ, ದಾರ್ಶನಿಕರು, ಭಕ್ತಿ ಆಂದೋಲನವನ್ನು ಮುಂದುವರೆಸಿ ಜನರಿಗೆ ಭಕ್ತಿ ಮಾರ್ಗ ದಿಂದ ಮೋಕ್ಷ ಪ್ರಾಪ್ತಿಯಾಗುವುದೆಂದು ಸಾರಿದ ಧರ್ಮಗುರು ಶ್ರೀ ಬಸವಣ್ಣನವರ ಜಯಂತ್ಯುತ್ಸವದ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟ್ವೀಟ್‌ ಮಾಡಿ, ವಚನ ಕ್ರಾಂತಿಯಿಂದ ಜಾತಿ ಭೇದವೆಂಬ ಪರಿಧಿಯನ್ನು ತೊಡೆದು ಅರಿವಿನ ಕಿರಣದ ಬೆಳಕನ್ನು ಬೀರುತ್ತಾ ಅಂಧಕಾರದ ಛಾಯೆಯನ್ನು ಹೊಡೆದೋಡಿಸಿದ ಕ್ರಾಂತಿಕಾರಿ ಬಸವಣ್ಣನವರ ಜಯಂತಿಯಂದು ನನ್ನ ಭಕ್ತಿಪೂರ್ವಕ ಪ್ರಣಾಮಗಳು ಎಂದು ತಿಳಿಸಿದ್ದಾರೆ.

loading...