ಬಿಜೆಪಿ ಆಸ್ತಿ ೨೦೧೭-೧೮ರಲ್ಲಿ ಶೇ.೨೨ ರಷ್ಟು ಏರಿಕೆ, ಕಾಂಗ್ರೆಸ್ ಆಸ್ತಿ ಶೇ.೧೫ರಷ್ಟು ಕುಸಿತ: ಎಡಿಆರ್ ವರದಿ

0
11

ನವದೆಹಲಿ:-೨೦೧೭-೧೮ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಒಟ್ಟು ಆಸ್ತಿ ಹಿಂದಿನ ವರ್ಷಕ್ಕಿಂತ ಶೇ ೨೨.೨೭ ರಷ್ಟು ಹೆಚ್ಚಾಗಿದೆ ಎಂದು ಚುನಾವಣಾ ಕಾವಲು ಸಂಸ್ಥೆ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬುಧವಾರ ತಿಳಿಸಿದೆ.
‘೨೦೧೬-೧೭ನೇ ಹಣಕಾಸು ವರ್ಷದಲ್ಲಿ, ಬಿಜೆಪಿಯ ಘೋಷಿತ ಆಸ್ತಿ ಒಟ್ಟು ೧೨೧೩.೧೩ ಕೋಟಿ ರೂ. ಇತ್ತು. ೨೦೧೭-೧೮ನೇ ಹಣಕಾಸು ವರ್ಷದಲ್ಲಿ ಇದು ಶೇ.೨೨.೨೭ ರಷ್ಟು ಹೆಚ್ಚಳವಾಗಿ ೧,೪೮೩.೩೫ ಕೋಟಿ ರೂ.ಗೆ ಏರಿದೆ.’ ಎಂದು ‘ ೨೦೧೬-೧೭ ಮತ್ತು ೨೦೧೭-೧೮ರಲ್ಲಿ ರಾಷ್ಟ್ರೀಯ ಪಕ್ಷಗಳ ಸ್ವತ್ತುಗಳು ಮತ್ತು ಸಾಲಗಳ ವಿಶ್ಲೇಷಣೆಯ ಎಡಿಆರ್ ವರದಿ ಹೇಳಿದೆ.
೨೦೧೬-೧೭ ಮತ್ತು ೨೦೧೭-೧೮ರ ಆರ್ಥಿಕ ವರ್ಷದ ಅವಧಿಯಲ್ಲಿ ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ ಮತ್ತು ಎಐಟಿಸಿ ಸೇರಿ ಏಳು ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಆಸ್ತಿ ಮತ್ತು ಸಾಲಗಳ ವಿಶ್ಲೇಷಣೆಯ ನಂತರ ಎಡಿಆರ್ ವರದಿಯನ್ನು ಸಿದ್ಧಪಡಿಸಿದೆ.
ವರದಿಯಂತೆ ೨೦೧೬-೧೭ನೇ ಹಣಕಾಸು ವರ್ಷದಲ್ಲಿ ೭ ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಒಟ್ಟು ಆಸ್ತಿ ೩೨೬೦.೮೧ ಕೋಟಿ ರೂ.ಗಳಾಗಿದ್ದು, ಇದು ೨೦೧೭-೧೮ನೇ ಸಾಲಿನ ಅವಧಿಗಿಂತ ಶೇ. ೬ ರಷ್ಟು ಹೆಚ್ಚಳವಾಗಿ ೩,೪೫೬.೬೫ ಕೋಟಿ ರೂ.ಗೆ ತಲುಪಿದೆ.
‘ಕಾಂಗ್ರೆಸ್ ಮತ್ತು ಎನ್‌ಸಿಪಿ ಮಾತ್ರ ಆಸ್ತಿಗಳಲ್ಲಿ ಇಳಿಕೆ ತೋರಿಸಿದ ಎರಡು ರಾಷ್ಟ್ರೀಯ ಪಕ್ಷಗಳಾಗಿವೆ ಎಂದು ವರದಿ ತಿಳಿಸಿದೆ.
ಬಿಜೆಪಿಗೆ ಹೋಲಿಸಿದರೆ, ೨೦೧೬-೧೭ ಮತ್ತು ೨೦೧೭-೧೮ರ ನಡುವಿನ ಕಾಂಗ್ರೆಸ್‌ನ ಒಟ್ಟು ಆಸ್ತಿ ಶೇ.೧೫.೨೬ ರಷ್ಟು ಕಡಿಮೆಯಾಗಿದೆ. ಅಂದರೆ ೮೫೪.೭೫ ಕೋಟಿಯಿಂದ ೭೨೪.೩೫ ಕೋಟಿ ರೂ.ಗೆ ಇಳಿಕೆಯಾಗಿದೆ. ಇನ್ನು, ಎನ್‌ಸಿಪಿಯ ಆಸ್ತಿ ೧೧.೪೧ ಕೋಟಿಯಿಂದ ೯.೫೪ ಕೋಟಿ ರೂ.ಗೆ ಇಳಿದಿದೆ. (ಶೇಕಡಾ ೧೬.೩೯ ರಷ್ಟು)
‘ತೃಣಮೂಲ ಕಾಂಗ್ರೆಸ್‌ನ ಒಟ್ಟು ಆಸ್ತಿ ೨೦೧೬-೧೭ನೇ ಹಣಕಾಸು ವರ್ಷದಲ್ಲಿ ೨೬.೨೫ ಕೋಟಿ ರೂ.ಗಳಿಂದ ೨೯.೧೦ ಕೋಟಿ ರೂ.ಗೆ ಏರಿದೆ (ಶೇ. ೧೦.೮೬ ರಷ್ಟು ಹೆಚ್ಚಳ) ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ಪಕ್ಷಗಳು ಘೋಷಿಸಿದ ೨೦೧೬-೧೭ನೇ ಹಣಕಾಸು ವರ್ಷದ ಒಟ್ಟು ಸಾಲಗಳು ೫೧೪.೯೯ ಕೋಟಿ ರೂ.ನಷ್ಟಿತ್ತು. (ಒಂದೊಂದು ಪಕ್ಷ ಸರಾಸರಿ ೭೩.೫೭ ಕೋಟಿ ರೂ.) ಇದು ೨೦೧೭-೧೮ನೇ ಸಾಲಿನಲ್ಲಿ ಶೇ ೨೭.೨೬ ರಷ್ಟು ಇಳಿದು ೩೭೪.೬೧ ಕೋಟಿ ರೂ.ಗೆ ತಲುಪಿದೆ.
೨೦೧೬-೧೭ನೇ ಹಣಕಾಸು ವರ್ಷದಲ್ಲಿ ಕಾಂಗ್ರೆಸ್ ೪೬೧.೭೩ ಕೋಟಿ ರೂ. ಮತ್ತು ಬಿಜೆಪಿ ೨೦.೦೩ ಕೋಟಿ ರೂ. ಸಾಲವನ್ನು ಘೋಷಿಸಿದ್ದರೆ, ೨೦೧೭-೧೮ರಲ್ಲಿ ಕಾಂಗ್ರೆಸ್ ೩೨೪.೨ ಕೋಟಿ ರೂ. ಬಿಜೆಪಿಯ ೨೧.೩೮ ಕೋಟಿ ಮತ್ತು ತೃಣಮೂಲದ ೧೦.೬೫ ಕೋಟಿ ರೂ.ಘೋಷಿಸಿವೆ.
‘೨೦೧೬-೧೭ ಮತ್ತು ೨೦೧೭-೧೮ರ ಹಣಕಾಸು ವರ್ಷದಲ್ಲಿ ನಾಲ್ಕು ಪಕ್ಷಗಳ ಸಾಲಗಳಲ್ಲಿ ಇಳಿಕೆಯಾಗಿದೆ. ಕಾಂಗ್ರೆಸ್ (೧೩೭.೫೩ ಕೋಟಿ ರೂ.), ಸಿಪಿಎಂ (೩.೦೨ ಕೋಟಿ ರೂ.), ಎನ್‌ಸಿಪಿ (೧.೩೪ ಕೋಟಿ ರೂ.) ಮತ್ತು ತೃಣಮೂಲ ಕಾಂಗ್ರೆಸ್( ೫೫ ಲಕ್ಷ ರೂ.)
ವರದಿಯಂತೆ ಬಿಜೆಪಿ, ಸಿಪಿಐ ಮತ್ತು ಬಿಎಸ್‌ಪಿ ೨೦೧೭-೧೮ನೇ ಹಣಕಾಸು ವರ್ಷದಲ್ಲಿ ಸಾಲಗಳಲ್ಲಿ ಹೆಚ್ಚಳವನ್ನು ಘೋಷಿಸಿವೆ.

loading...