ಬಿಜೆಪಿ ಸರ್ಕಾರ ಬಹುಮತ ಪಡೆಯುವ ವಿಶ್ವಾಸವಿದೆ: ಸಂಸದೆ ಶೋಭಾ ಕರಂದ್ಲಾಜೆ

0
3

ವಿಜಯಪುರ: ರಾಜ್ಯದಲ್ಲಿ ಸ್ಥಿರ ಸರ್ಕಾರ ಅಸ್ತಿತ್ವದಲ್ಲಿರಬೇಕು ಎಂಬುದು ರಾಜ್ಯದ ಜನತೆಯ ಅಪೇಕ್ಷೆ ಇದೆ, ಖಂಡಿತವಾಗಿಯೂ ಸೋಮವಾರ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದ್ದು, ಬಿಜೆಪಿ ಸರ್ಕಾರ ಮೂರುವರೆ ವರ್ಷ ತನ್ನ ಅವಧಿ ಪೂರ್ಣಗೊಳಿಸಲಿದ್ದು, ಭರವಸೆಗಳು ಈಡೇರಿಸುವ ಶಕ್ತಿ ವೃದ್ಧಿಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರಬೇಕು ಎಂಬುದು ಜನತೆಯ ಆಶಯವಾಗಿತ್ತು. ನೆರೆಯ ಮಹಾರಾಷ್ಟç ಮೊದಲಾದ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಪಕ್ಷದ ಸರ್ಕಾರವೇ ಕೇಂದ್ರದಲ್ಲಿ ಇದ್ದ ಕಾರಣದಿಂದಾಗಿ ರೈಲ್ವೇ ಮೊದಲಾದ ಯೋಜನೆಗಳಲ್ಲಿ ಈ ಎಲ್ಲ ರಾಜ್ಯಗಳಿಗೆ ಸಿಂಹಪಾಲು ದೊರಕುತ್ತಿತ್ತು, ಆದರೆ ನಮ್ಮ ರಾಜ್ಯದಲ್ಲಿ ಈ ರೀತಿಯ ಪರಿಸ್ಥಿತಿ ಇರಲಿಲ್ಲ, ಪ್ರಧಾನಿ ಮೋದಿ ಅವರು ಪಕ್ಷಪಾತ ಮಾಡದೇ ನಮ್ಮ ರಾಜ್ಯಕ್ಕೂ ಸಮಾನ ಪ್ರಾಶಸ್ತö್ಯ ನೀಡಿದರೂ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿಲ್ಲ, ಮೋದಿ ಅವರು ಅನೇಕ ಸಭೆಗಳಿಗೆ ಕರೆದರೂ ಸಿದ್ಧರಾಮಯ್ಯ ಅವರು ಹೋಗಲಿಲ್ಲ, ಮೋದಿ ಅವರನ್ನು ಪ್ರಧಾನಿ ದೃಷ್ಟಿಯಿಂದ ನೋಡದೇ ಕೇವಲ ಪಕ್ಷದ ನೇತಾರರಂತೆ ಸಿದ್ಧರಾಮಯ್ಯ ಕಂಡರು, ಗ್ಲೋಬಲ್ ಇನವೆಸ್ಟರ್ ಮೀಟ್‌ನಲ್ಲಿಯೂ ಭಾಗವಹಿಸಲಿಲ್ಲ, ಹೀಗಾಗಿ ರಾಜ್ಯಕ್ಕೆ ಅನುದಾನ ಬರಲಿಲ್ಲ. ಉದ್ಯೋಗ ಸೃಷ್ಟಿಯಾಗಲಿಲ್ಲ ಎಂದರು. ಎಷ್ಟೋ ವರ್ಷಗಳ ನಂತರ ಈ ಅವಕಾಶ ಬಂದಿದೆ ಎಂದರು.
ರೈತರ ಹೊಲಗಳಿಗೆ ನೀರು ಹರಿದಾಗ ಮಾತ್ರ ಕಾಲುವೆ ಕಟ್ಟಿದ್ದು ಸಾರ್ಥಕವಾಗುತ್ತದೆ, ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಸಂಕಲ್ಪವನ್ನು ಬಿಜೆಪಿ ಸರ್ಕಾರ ಕೈಗೊಂಡಿದೆ.
ಕಳೆದ ಅವಧಿಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಜಾತಿ-ಜಾತಿ, ಧರ್ಮ-ಧರ್ಮಗಳನ್ನು ಒಡೆದು ಶಾಲಾ ಮಕ್ಕಳಲ್ಲಿಯೂ ಜಾತಿಯತೆಯ ವಿಷಬೀಜ ಬಿತ್ತಿದರು, ಯಾರಿಗೂ ಬೇಡವಾದ ಟಿಪ್ಪು ಜಯಂತಿ ಆಚರಣೆಯ ವಿಷಯ ತಂದು ಸಂಘರ್ಷದ ವಾತಾವರಣ ನಿರ್ಮಾಣ ಮಾಡಿದ್ದರು. ಆದರೆ ಜನತೆ ಅವರಿಗೆ ತಕ್ಕಪಾಠ ಕಲಿಸಿದ್ದರು, ಹೀಗಾಗಿ ಅವರು ಪ್ರತಿಪಕ್ಷ ಸ್ಥಾನದಲ್ಲಿ ಕೂರುವುದನ್ನು ಬಿಟ್ಟು ಮೂರನೇಯ ಜಾಗಕ್ಕೆ ಬಂದಿದ್ದ ಜೆಡಿಎಸ್ ಜೊತೆ ಕೈ ಜೋಡಿಸಿ ಹಿಂಬಾಗಿಲಿನಿAದ ಅಧಿಕಾರಕ್ಕೆ ಬಂದಿತ್ತು ಎಂದರು.
ನೆರೆ ಪರಿಸ್ಥಿತಿಯಿಂದ ತೊಂದರೆಗೊಳಗಾದವರಿಗೆ ಪರಿಹಾರ ಧನ ಬಿಡುಗಡೆ ಸೇರಿದಂತೆ ಎಲ್ಲ ವಿಷಯಗಳಲ್ಲಿಯೂ ಅತ್ಯಂತ ಜವಾಬ್ದಾರಿಯುತವಾಗಿ ರಾಜ್ಯ ಸರ್ಕಾರ ನಡೆದುಕೊಂಡಿದೆ. ತಾಂತ್ರಿಕ ಕಾರಣಗಳಿಂದಾಗಿ ಬೆಳೆ ಪರಿಹಾರ ಸ್ವಲ್ಪ ತಡವಾಗಿರಬಹುದು, ಆದರೆ ತುರ್ತು ಪರಿಹಾರವನ್ನು ಯಾವುದೇ ರೀತಿಯಲ್ಲಿ ಲೆಕ್ಕಾಚಾರ ಹಾಕದೇ ನೀಡಲಾಗಿದೆ ಎಂದರು.
ಬಚ್ಚೇಗೌಡ ಕುಟುಂಬಕ್ಕೆ ಬಿಜೆಪಿ ಮೋಸ ಮಾಡಿಲ್ಲ
ಬಚ್ಚೇಗೌಡ ಕುಟುಂಬಕ್ಕೆ ಭಾರತೀಯ ಜನತಾ ಪಕ್ಷ ಅನೇಕ ಅವಕಾಶ ಕೊಟ್ಟಿದೆ, ಅನೇಕ ದೊಡ್ಡ ದೊಡ್ಡ ಅವಕಾಶಗಳನ್ನು ಅವರ ಕುಟುಂಬಕ್ಕೆ ನೀಡಿದೆ. ಅವರ ಕುಟುಂಬಕ್ಕೆ ಪಕ್ಷ ಯಾವುದೇ ರೀತಿ ಮೋಸ ಮಾಡಿಲ್ಲ, ಬಿಜೆಪಿ ಜೊತೆ ನಿಲ್ಲುವುದು ಅವರ ಕರ್ತವ್ಯವಾಗಿತ್ತು. ಈ ಬಗ್ಗೆ ಅನೇಕ ಬಾರಿ ವಿನಂತಿ ಮಾಡಿಕೊಂಡಿದ್ದರೂ ಫಲಪ್ರದವಾಗಲಿಲ್ಲ,ಆದರೆ ಅದೇನಿದ್ದರೂ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗೆಲುವು ನಿಶ್ಚಿತ ಎಂದರು.
ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳು ಶ್ರಮಿಸಲಾಗಿದೆ, ಆದರೂ ಸೋತರೆ ಅವರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಈರುಳ್ಳಿ ರಫ್ತನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಈ ಕೊರತೆಯ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಕೆಲವೊಂದು ವರ್ತಕರು ದುರ್ಲಾಭ ಪಡೆಯುವ ಪ್ರಯತ್ನ ಮಾಡುತ್ತಾರೆ, ಹೀಗಾಗಿ ಬೆಲೆ ಗಗನಕ್ಕೇರುತ್ತಿದೆ, ಗೋದಾಮುಗಳಲ್ಲಿ ಈರುಳ್ಳಿ ಸಂಗ್ರಹಣೆ ಮಾಡದಂತೆ ಅಗತ್ಯ ನಿರ್ದೇಶನ ನೀಡಲಾಗುತ್ತಿದ್ದು, ವಿವಿಧ ಗೋದಾಮುಗಳ ಮೇಲೆ ದಾಳಿನ ನಡೆಸಿ ಅಲ್ಲಿದ್ದ ಈರುಳ್ಳಿಯನ್ನು ಮುಟ್ಟಗೋಲು ಹಾಕುವ ಕಾರ್ಯ ನಡೆಯುತ್ತಿದೆ, ಗೋದಾಮುಗಳಲ್ಲಿ ಸಂಗ್ರಹದಲ್ಲಿರುವ ಉಳ್ಳಾಗಡ್ಡಿ ಆಚೆಗೆ ಬಂದರೆ ಬೆಲೆ ಸಹಜ ಸ್ಥಿತಿಗೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜಯಕುಮಾರ ಪಾಟೀಲ, ಆರ್.ಎಸ್. ಪಾಟೀಲ ಕುಚಬಾಳ, ರವಿಕಾಂತ ಬಗಲಿ, ದಯಾಸಾಗರ ಪಾಟೀಲ, ವಿವೇಕಾನಂದ ಡಬ್ಬಿ, ಮಲ್ಲಮ್ಮ ಜೋಗೂರ, ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

loading...