ಬೆಳ್ಳಟ್ಟಿ ಸರಕಾರಿ ಆಸ್ಪತ್ರೆಗೆ ಬೇಕಾಗಿದೆ ತುರ್ತು ಚಿಕಿತ್ಸೆ ?

0
63

ವೈದ್ಯರಿಲ್ಲದೇ ಬಾಗಿಲು ಹಾಕಿದ ಕೊಠಡಿ | ಒಂದು ವರ್ಷದ ಹಿಂದೆಯೇ ಕೆಟ್ಟು ನಿಂತಿರುವ ಅಂಬ್ಯುಲೆನ್ಸ್
|ಚಂದ್ರಶೇಖರ ಸೋಮಣ್ಣವರ
ಲಕ್ಷ್ಮೇಶ್ವರ: ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದ ಮೇಲಿದ್ದ ವೈದ್ಯಾಧಿಕಾರಿ ಸಂತೋಷ ನಾಯಕ ಬೆಳಿಗ್ಗೆ ಎರಡು ತಾಸು ಕರ್ತವ್ಯ ನಿರ್ವಹಿಸಿ ಮಧ್ಯಾಹ್ನ ಹನ್ನೆರಡು ಗಂಟೆ ಸಮಯಕ್ಕೆ ಕೊಠಡಿಯ ಬಾಗಿಲು ಹಾಕಿ ಇಲಾಖೆಯ ಮಿಟಿಂಗ್ ಇದೆ ಎಂದು ಸುಳ್ಳು ನೆಪ ಹೇಳಿ ತಮ್ಮ ವಯಕ್ತಿಕ ಕೆಲಸದ ನಿಮಿತ್ಯ ಹೋಗಿರುವುದಕ್ಕೆ ಸಾರ್ವಜನಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ ನಮ್ಮ ಕನ್ನಡಮ್ಮ ಪ್ರತಿನಿಧಿ ಈ ಬಗ್ಗೆ ಆಸ್ಪತ್ರೆಯಲ್ಲಿನ ಸಿಬ್ಬಂಧಿಗಳನ್ನು ವಿಚಾರಿಸಿದಾಗ ವೈದ್ಯರು ಇಲಾಖೆಯ ಮಿಟಿಂಗಿಗೆ ಹೋಗಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ನಂತರ ವೈದ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅರ್ಧದಿನ ಸೇವೆ ಸಲ್ಲಿಸಿ ಉಳಿದ ಅರ್ಧದಿನದ ಅವಧಿಗೆ ರಜೆಯ ಮೇಲೆ ತೆರಳಿರುವೆನೆಂದು ಸುಳ್ಳು ಹೇಳಿದ್ದಾರೆ.
ಈ ಬಗ್ಗೆ ಇನ್ನು ಸಮಗ್ರವಾಗಿ ವಿಚಾರಿಸಿದಾಗ ಆರೋಗ್ಯ ಸರಿಯಿಲ್ಲದ್ದರಿಂದ ಹುಬ್ಬಳ್ಳಿಗೆ ಆಸ್ಪತ್ರೆಗೆ ಹೋಗಿರುವೆನೆಂದು ಹಾಗೂ ಇಲಾಖಾಧಿಕಾರಿಗಳ ಗಮನಕ್ಕೆ ತಂದಿಲ್ಲವೆಂದು ಸಮಜಾಯಿಸಿ ನೀಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ. ಈ ರೀತಿ ವೈದ್ಯರು ಮಾಡುವ ಎಡವಟ್ಟಿನಿಂದಾಗಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದ್ದು, ಮೇಲಾಧಿಖಾರಿಗಳು ಈ ಬಗ್ಗೆ ಪರಶೀಲಿಸಿ ತಪ್ಪಿತಸ್ಥ ವೈದ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಗೆ ಸೇರಿದ ತುರ್ತು ಚಿಕಿತ್ಸಾ ವಾಹನವು ಕಳೆದೊಂದು ವರ್ಷದ ಹಿಂದೆಯೇ ಕೆಟ್ಟು ನಿಂತಿದ್ದು ಈ ವರೆಗೂ ಸಹ ದುರಸ್ಥಿಗೊಂಡಿಲ್ಲ ಹಾಗೂ ಆಸ್ಪತ್ರೆಯಲ್ಲಿನ ಗುಮಾಸ್ತ ಹುದ್ದೆಗೆ ಕಾಯಂ ಆಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯಿಲ್ಲದ್ದರಿಂದ ಕಳೆದೆರಡು ವರ್ಷಗಳಿಂದಲೂ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಭತ್ಯೆಗಳು ಸೇರಿದಂತೆ ಯಾವ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಸರಿಯಾಗಿ ನಮಗೆ ದೊರಕುತ್ತಿಲ್ಲವೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಯಿದ್ದರೂ ಸಹ ಇಲಾಖಾಧಿಕಾರಿಗಳು ಮಾತ್ರ ತಮ್ಮ ಜವಾಬ್ದಾರಿ ಮರೆತು ಕಣ್ಮುಚ್ಚಿ ಕುಳಿತಿರುವುದು ಇಲ್ಲಿನ ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿದೆ. ಮೂವತ್ತಕ್ಕೂ ಅಧಿಕ ಹಳ್ಳಿಗಳು ಈ ಆಸ್ಪತ್ರೆಯ ವ್ಯಾಪ್ತಿಗೆ ಬರುತ್ತಿದ್ದು, ಕೇವಲ ಮೂರು ಜನ ನರ್ಸ್‍ಗಳು ಮಾತ್ರ ಇಲ್ಲಿದ್ದು ಇನ್ನು ಒಬ್ಬಳು ನರ್ಸ್‍ನ್ನು ಈ ಆಸ್ಪತ್ರೆಯ ಕರ್ತವ್ಯಕ್ಕೆ ನೇಮಿಸಬೇಕೆಂದು ಸಾರ್ವಜನಿಕರು ಈ ಸಂದರ್ಭದಲ್ಲಿ ದೂರಿದರು.
ಒಟ್ಟಾರೆ ಈ ಆಸ್ಪತ್ರೆಯು ಸಮಸ್ಯೆಗಳ ಆಗರವಾಗಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಈಗಲಾದರೂ ಸಹ ಎಚ್ಚೆತ್ತುಕೊಂಡು ಕ್ರಮಕೈಗೊಳ್ಳಬೇಕಿದೆ.

ಬಾಕ್ಸ್:

ಈ ಕುರಿತು ನನಗೆ ಮಾಹಿತಿ ಇಲ್ಲ. ವಿಚಾರಿಸಿ ತಪ್ಪಿತಸ್ಥ ವೈದ್ಯಾಧಿಕಾರಿ ವಿರುದ್ದ ಸೂಕ್ತ ಕ್ರಮಕೈಗೊಳ್ಳುತ್ತೆನೆ.
-ಪಾಂಡುರಂಗ ಕಬಾಡಿ. ಜಿಲ್ಲಾ ಆರೋಗ್ಯಾಧಿಕಾರಿಗಳು ಗದಗ
ಬಾಕ್ಸ್:
ಈ ಬಗ್ಗೆ ನಾನು ವಿಚಾರಿಸಿ ಮುಂದೆ ಹೀಗಾಗದಂತೆ ಎಚ್ಚರಿಕೆ ನೀಡುವೆನು. ಹಾಗೂ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸುವೆನು.
-ಶ್ರೀಕಾಂತ ಕಾಟೇವಾಲೆ. ತಾಲೂಕಾ ಆರೋಗ್ಯಾಧಿಕಾರಿಗಳು ಶಿರಹಟ್ಟಿ

loading...