ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬದ್ಧ : ಮೋದಿ – ಟ್ರಂಪ್

0
1

ಹ್ಯೂಸ್ಟನ್, -ಭಯೋತ್ಪಾದನೆ ಮತ್ತದರ ಪ್ರತಿಪಾದಕರ ವಿರುದ್ಧ ಹೋರಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಅಮೆರಿಕದ ಟೆಕ್ಸಾಸ್ ನಲ್ಲಿನ ಹ್ಯೂಸ್ಟನ್‌ ನಲ್ಲಿರುವ ಎನ್‌ಆರ್‌ಜಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ಉಪಟಳ ಕೊನೆಗಾಣಿಸಬೇಕಿದ್ದು ಈ ಹೋರಾಟಕ್ಕೆ ಟ್ರಂಪ್ ಸಹಕಾರ ನೀಡಿದ್ದಾರೆ ಎಂದರು. ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಬೃಹತ್ ವೇದಿಕ ಹಂಚಿಕೊಂಡು ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದರು. ಈ ವಿಶೇಷ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಅಧಿಕ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಪಾಲ್ಗೊಂಡಿದ್ದರು.
ಭಯೋತ್ಪಾದನೆಗೆ ಆರ್ಥಿಕ ನೆರವು ಕೊಟ್ಟು, ಕುಮ್ಮಕ್ಕು ನೀಡುತ್ತಿರುವ ದೇಶ ಯಾವುದು ಎಂಬುದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಪಾಕಿಸ್ತಾನದ ಹೆಸರು ಉಲ್ಲೇಖ ಮಾಡದೇ ಟೀಕಿಸಿದರು.
ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿರುವ ನಿರ್ಧಾರದಿಂದ ಕೆಲವರಿಗೆ ತೊಂದರೆಯಾಗಿದ್ದು , ತಮ್ಮ ದೇಶವನ್ನೇ ಸೂಕ್ತ ರೀತಿಯಲ್ಲಿ ನಿಭಾಯಿಸಲಾಗದವರು ಈ ನಿರ್ಧಾರ ವಿರೋಧಿಸಿದ್ದಾರೆ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಏಕತೆ ಮತ್ತು ಸಮಗ್ರತೆ ಭಾರತ ಹಾಗೂ ದೇಶದ ಸಂವಿಧಾನದ ಶಕ್ತಿಯಾಗಿದೆ. ಹಲವಾರು ಶತಮಾನಗಳಿಂದ ಉದಾರವಾದ ಸಾಮಾಜಿಕ ವ್ಯವಸ್ಥೆಯನ್ನು ಒಳಗೊಂಡಿರುವ ದೇಶ ಭಾರತ ಎಂದರು.
ಭಾರತ ಪ್ರಗತಿಶೀಲ ದೇಶವಾಗಿದ್ದು, ಕೇವಲ ಬದಲಾವಣೆಯಲ್ಲ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕ ದೇಶವಾಗಿ ಹೊರಹೊಮ್ಮುವ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು
ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ಲಾಮಿಕ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಬದ್ಧ. ಎರಡೂ ದೇಶಗಳಿಗೂ ಗಡಿಭದ್ರತೆ ಪ್ರಧಾನ ಆದ್ಯತೆಯಾಗಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳು ಭಾರತ ಉತ್ತಮ ಆರ್ಥಿಕತೆ ಹೊಂದಲು ಪೂರಕವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಶ್ಲಾಘಿಸಿದರು.
ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಹ್ಯೂಸ್ಟನ್ ನಲ್ಲಿ ಮಹಾತ್ಮಾ ಗಾಂಧಿ ವಸ್ತು ಸಂಗ್ರಹಾಲಯ, ಗುಜರಾತ್ ಸಮಾಜ ಕೇಂದ್ರ, ಸಿದ್ಧ ವಿನಾಯಕ ದೇವಸ್ಥಾನ ಉದ್ಘಾಟಿಸಿದರು. ಬಳಿಕ ನ್ಯೂಯಾರ್ಕ್  ನತ್ತ ಪ್ರಯಾಣ ಬೆಳೆಸಿದರು.

loading...