ಮಕ್ಕಳ ಸಾವಿಗೆ ನ್ಯಾಯ ಕೊಡಿಸುವವರು ಯಾರು….?

0
3
 

ಕೊಪ್ಪಳ: ಬಾರದ ಭಾಷೆ, ಕಿತ್ತು ತಿನ್ನುವ ಬಡತನ, ಗೇಣು ಹೊಟ್ಟೆ ಹೊರೆಯಲು ಇದ್ದಿಲು ತಯಾರಿಕೆಯಂತಹ ಅಪಾಯಕಾರಿ ಕೆಲಸಕ್ಕೆ ಬಂದು ಮೂವರು ಮುದ್ದು ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಹೇಳ ತೀರದು.
ಶವಗಳನ್ನು ಊರಿಗೆ ಕೊಂಡೊಯ್ದು ಶವಸಂಸ್ಕಾರ ಮಾಡಲಾಗದ ಅಸಹಾಯಕರಾದ ಪಾಲಕರ ದುಃಖ ಕಂಡು ನೆರೆದಿದ್ದ ಜನರ ಕಣ್ಣುಗಳು ನೀರಾದವು. ಜಾಲಿಮರಗಳು ಬೆಳೆಯುವ ಪ್ರದೇಶ ಕಂಡರೆ ಏನೋ ‘ನಿಧಿ’ ದೊರೆತವರ ಹಾಗೆ ಸಂಭ್ರಮಿಸುವ ಈ ಬಡವರಿಗೆ ಅಲ್ಲಿ ಠಿಕಾಣಿ ಹೂಡಿ, ಮರಗಳನ್ನು ಕಡಿದು ಇದ್ದಿಲು ತಯಾರಿಸಿ ಮಧ್ಯವರ್ತಿಗಳ ಮೂಲಕ ಸಾಗಿಸಿದರೆ ಸಾಕು, ಹೇಗೂ ದಿನದ ದುಡಿಮೆ ಹಣ ದೊರೆತು, ಊಟ ಸಿಕ್ಕರೆ ಸಾಕು ಎಂಬ ಸಾರ್ಥಕಭಾವ.

ಆದರೆ ಈ ಬಡವರ ‘ಭಾಗ್ಯ’ ಬುಧವಾರ ಎಂದಿನಂತೆ ಇರಲಿಲ್ಲ. ಇದ್ದಿಲು ತಯಾರಿಕೆ ಧಾವಂತದಲ್ಲಿ ಇದ್ದ ಪಾಲಕರಿಗೆ ತಮ್ಮ ಮಕ್ಕಳು ಆಟವಾಡಲು ಹೋಗಿ ಹೆಣವಾಗಿ ಬರುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ. ವಿಧಿಯ ದುರ್ದೈವ ಮಕ್ಕಳನ್ನು ಬಲಿ ಪಡೆದುಕೊಂಡು ಹೆತ್ತವರ ಸಂಕಟವನ್ನು ಹೆಚ್ಚಿಸಿತು. ತಾಲ್ಲೂಕಿನ ನವಲಿ ಗ್ರಾಮದಲ್ಲಿ ಮಹಾರಾಷ್ಟ್ರ ರಾಜ್ಯದ ರಾಯಗಢ ಜಿಲ್ಲೆಯ ಪಾಲಿ ಗ್ರಾಮದಿಂದ ಬಂದಿದ್ದ ಆದಿವಾಸಿ ೨೫ ಕುಟುಂಬಗಳು ಇಲ್ಲಿ ಇದ್ದವು.
ಆಟವಾಡಲು ಹೋದ ಸವಿತಾ, ಕವಿತಾ, ಸೋನಂ ಎಂಬ ಮೂವರು ಹೆಣ್ಣು ಮಕ್ಕಳು ಮರಳಿನ ದಿಬ್ಬದ ಕೆಳಗೆ ಆಟದ ಸಂಭ್ರಮದಲ್ಲಿ ಮೈಮರೆತು ‘ಗುಬ್ಬಿಗೂಡು’ ಕಟ್ಟಿ ಸಂಭ್ರಮ ಪಡುತ್ತಿದ್ದಾಗ, ದೊಪ್ಪೆಂದು ಗಡುಸಾದ ಹರಳು ಮಿಶ್ರಿತ ಮರಳು ಬಿದ್ದು, ಉಸಿರುಗಟ್ಟಿ ಕ್ಷಣಾರ್ಧದಲ್ಲಿಯೇ ವಿಲವಿಲ ಒದ್ದಾಡಿ ಜೀವ ಬಿಟ್ಟವು. ಮಕ್ಕಳು ಬಾರದೇ ಇರುವುದನ್ನು ಕಂಡು ಮರಳಿನ ದಿಬ್ಬದ ಸಮೀಪ ಬಂದಾಗ ಮಕ್ಕಳು ಹೆಣವಾಗಿದ್ದರು.

ತುತ್ತು ಅನ್ನಕ್ಕೆ ‘ಗಡಿ’ ದಾಟಿ ಬಂದವರ ಪೈಕಿ ಓದಿದವರು ತೀರ ವಿರಳ. ಬಹುತೇಕ ಕುಟುಂಬಗಳು ಅನಕ್ಷರಸ್ಥರು. ಸುರಕ್ಷಿತ ವಲ್ಲದ ಜಾಗದಲ್ಲಿ ಬದುಕು ಕಟ್ಟಿಕೊಳ್ಳಲು ಉದ್ಯೋಗ ಅರಸಿ ಬಂದವರಿಗೆ ತಮ್ಮ ಮಕ್ಕಳ ಗೋರಿ ಕಟ್ಟುವಂತ ಸ್ಥಿತಿ ಒದಗಿ ಬಂದಿದ್ದು ವಿಪರ್ಯಾಸ.
ಇದ್ದಿಲು ತಯಾರಿಕೆ ಬಹುತೇಕ ಪೂರ್ಣಗೊಂಡಿದ್ದರಿಂದ ೮ ಕುಟುಂಬಗಳು ಮಾತ್ರ ಇಲ್ಲಿ ವಾಸವಾಗಿದ್ದವು. ಅಲ್ಲದೆ ಶಾಲೆಗೆ ಹೋಗಬೇಕಾದ ಮಕ್ಕಳ ಅಧಿಕೃತ ದಾಖಲೆಯೂ ಕೆಲವರ ಬಳಿ ಇಲ್ಲ. ಶೆಡ್ ನಿರ್ಮಿಸಿಕೊಂಡು, ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ದುಡಿಯುತ್ತಿದ್ದರು. ಇಬ್ಬರು ಮಕ್ಕಳನ್ನು ಕಳೆದುಕೊಂಡ ಲತಾ, ಅರ್ಜುನ ದಂಪತಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

ಅರ್ಜುನ ಎಂಬುವರಿಗೆ ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಈಗ ಎರಡು ಹೆಣ್ಣುಮಕ್ಕಳು ದುರಂತದಲ್ಲಿ ಜೀವ ಕಳೆದುಕೊಂಡಿದ್ದಾರೆ. ಸೋನಂ (೮) ಎಂಬ ಬಾಲಕಿ ಜನಿಸಿ ಎರಡೇ ವರ್ಷದಲ್ಲಿ ತಾಯಿಯನ್ನು ಕಳೆದುಕೊಂಡು ತಂದೆ ಜೊತೆಗೆ ವಲಸಿ ಬಂದಿದ್ದಳು.
ಅಕ್ರಮ ಮರಳು ದಂಧೆಕೋರರ ವಿರುದ್ಧ ಕಠಿಣ ಕ್ರಮ ಕಂದಾಯ, ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದ ಜನತೆ ಮಕ್ಕಳ ಸಾವು ಸಮಗ್ರ ತನಿಖೆಗೆ ಒತ್ತಾಯ. ಈ ಮಕ್ಕಳ ದಾರುಣ ಸಾವಿಗೆ ಕಾರಣವಾದ ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು.

ಸರೋಜಾ ಬಾಕಳೆ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಉಪಹಾರ ನೀಡಿ ಸಂತೈಸಿದ ಜನತೆ ಮೃತಪಟ್ಟ ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು. ಮನೆಯಂಗಳದಲ್ಲಿ ಆಟವಾಡಿ ಬೆಳೆಯಬೇಕಾಗಿದ್ದ ಮಕ್ಕಳನ್ನು ಆ ದೇವರು ಕರುಣೆ ಇಲ್ಲದೆ ಕಸಿದುಕೊಂಡ ಎಂದು ಪಾಲಕರು ಗೋಳಾಡಿ ಅಳುತ್ತಿದ್ದ ದೃಶ್ಯ ಕಂಡು ಜನರು ಮಮ್ಮಲ ಮರುಗಿದರು. ಕನ್ನಡ ಬಾರದ ಅವರ ಹೃದಯದ ಭಾಷೆಯಲ್ಲಿ ಅರ್ಥ ಮಾಡಿಕೊಂಡ ನವಲಿ, ನವಲಿ ತಾಂಡಾದ ಸುತ್ತಮುತ್ತಲಿನ ಜನತೆ ಬಿಸ್ಕಿಟ್, ಉಪಾಹಾರ ನೀಡಿದರು. ಮಕ್ಕಳೆ ಇಲ್ಲದೆ ಮೇಲೆ ತಿಂದು ಸಾಧಿಸುವುದಾದರೂ ಏನು ಎಂದು ತಮ್ಮ ಭಾಷೆಯಲ್ಲಿ ರೋಧಿಸಿದ ಪಾಲಕರು ಉಪಾಹಾರದ ಪೊಟ್ಟಣಗಳನ್ನು ಬದಿಗೆ ಸರಿಸಿ ತಲೆ ಮೇಲೆ ಕೈ ಹೊತ್ತುಕೊಂಡು ಪೊಲೀಸರು ಕೇಳುವ ಪ್ರಶ್ನೆಗೆ ಆತಂಕದಿಂದಲೇ ಉತ್ತರಿಸುತ್ತಿರುವುದು ಕಂಡು ಬಂತು.
ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಷ್ ವರಿಷ್ಠಾಧಿಕಾರಿ ರೇಣುಕಾ.ಕೆ.ಸುಕುಮಾರನ್ ಹೇಳಿದರು.

ಸಮೀಪದ ನವಲಿ ಗ್ರಾಮದಲ್ಲಿ ಬುಧವಾರ ಮರಳು ದಿಬ್ಬ ಕುಸಿದು ಮೂವರು ಮಕ್ಕಳ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರ ಜತೆಗೆ ಅವರು ಮಾತನಾಡಿದರು.
ಅಕ್ರಮ ಮರಳು ದಂಧೆಗೆ ಹೊಲವನ್ನು ಗುತ್ತಿಗೆ ನೀಡಿದ ಹಾಗೂ ಗುತ್ತಿಗೆ ಪಡೆದವರು ಹಾಗೂ ನಿರಂತರವಾಗಿ ಈ ದಂಧೆ ನಡೆಯುತ್ತಿದ್ದರೂ ಈ ಕಡೆಗೆ ಗಮನ ಹರಿಸದ ಕಂದಾಯ, ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಸಂಶಯ ಬೇಡ ಎಂದು ಅವರು ತಿಳಿಸಿದರು.

ಮೇಲ್ನೋಟಕ್ಕೆ ಮೂರು ಇಲಾಖೆಗಳ ಅಧಿಕಾರಿಗಳ ಕರ್ತವ್ಯಲೋಪ ಕಂಡು ಬಂದಿದೆ. ಬಹಳ ವರ್ಷಗಳ ಕಾಲ ಈ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‘ಕೆಲ ಪತ್ರಕರ್ತರು ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದು, ಸಮಗ್ರವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗುವುದು’ ಎಂದರು

loading...