ಮತ್ತೆ ಸಚಿವ ಸಿ.ಟಿ.ರವಿ ಕಾಲೆಳೆದ ಸಿದ್ದರಾಮಯ್ಯ: ಮುಂದುವರೆದ ಟ್ವೀಟ್ ವಾರ್

0
11

ಬೆಂಗಳೂರು- ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಸಿ.ಟಿ.ರವಿ ನಡುವಿನ ಟ್ವೀಟ್ ವಾರ್ ಮುಂದುವರೆದಿದೆ.
ಕುಡಿದ ಮತ್ತಿನಲ್ಲಿ ಅಪಘಾತ ಮಾಡುವವರ ಬಗ್ಗೆ ತಾವು ಮಾತನಾಡಿದರೆ ಸಚಿವರು ಏಕೆ ತಮ್ಮ ಹೆಗಲು ಮುಟ್ಟಿನೋಡಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ ಎನ್ನುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.
ಸಿದ್ದರಾಮಯ್ಯ ಒಳ್ಳೆಯ ವಕೀಲರಾಗಲು ಲಾಯಕ್ಕಿಲ್ಲ ಎಂಬ ಸಿ.ಟಿ.ರವಿ ಟ್ವೀಟ್ ಗೆ ಟ್ವಿಟ್ಟರ್ ಮೂಲಕವೇ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ತಾವು ಒಳ್ಳೆಯ ವಕೀಲರಾಗಿರುವ ಕಾರಣಕ್ಕಾಗಿಯೇ ಆರೋಪಿಯನ್ನು ಹೆಸರಿಸಿಲ್ಲ. ಪ್ರತಿಕ್ರಿಯಿಸುವ ಮೊದಲು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅರಿವಿರಬೇಕು ಎಂದು ತಿರುಗೇಟು ನೀಡಿದ್ದಾರೆ.
ವಿ.ಡಿ.ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವುದಾದರೆ ಕುಡಿದ ಮತ್ತಿನಲ್ಲಿ ಅಪಘಾತ ಮಾಡುವವರಿಗೆ ಕನಿಷ್ಠ ಪಕ್ಷ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನಾದರೂ ಕೊಡಬೇಕು ಎನ್ನುವ ಮೂಲಕ ಸಿದ್ದರಾಮಯ್ಯ ಅವರು ಸಿ.ಟಿ.ರವಿ ಅವರನ್ನು ಟ್ವೀಟ್ ಮೂಲಕ ಕುಟುಕಿದ್ದರು.
ಅದೇ ರೀತಿ ಆರೋಗ್ಯ ಸಚಿವ ಶ್ರೀರಾಮುಲು ವಿರುದ್ಧ ಟ್ವಿಟ್ಟರ್ ನಲ್ಲಿ ಹರಿಹಾಯ್ದಿರುವ ಸಿದ್ದರಾಮಯ್ಯ, ಸಿದ್ದರಾಮಯ್ಯ ಭೂಮಿ‌ ಮೇಲೆ ಇರಬಾರದು’ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ.” ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ” ಎಂದು ನಯವಾಗಿ ತಿವಿದಿದ್ದಾರೆ.

ಇತ್ತ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಕೂಡ ಚಾಮರಾಜನಗರದಲ್ಲಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದು, ಸಾವರ್ಕರ್ ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶಪ್ರೇಮಿಯಾಗಿದ್ದರು. ಅವರ ಇತಿಹಾಸದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಅರಿವಿಲ್ಲ. ಸಿದ್ದರಾಮಯ್ಯ ಇತಿಹಾಸ ಓದಿ ತಿಳಿದುಕೊಳ್ಳುವುದು ಅಗತ್ಯ ಎಂದು ತಿರುಗೇಟು ನೀಡಿದ್ದಾರೆ.

 

loading...