ಮಧ್ಯಪ್ರಾಚ್ಯದಲ್ಲಿನ ಅಹಿತಕರ ಸ್ಥಿತಿ : ಪಾಕಿಸ್ತಾನ ಮತ್ತು ಅಮೆರಿಕದ ವಿದೇಶಾಂಗ ಸಚಿವರ ಚರ್ಚೆ

0
1

ವಾಷಿಂಗ್ಟನ್:- ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಅವರು ವಾಷಿಂಗ್ಟನ್‌ನಲ್ಲಿ ಶುಕ್ರವಾರ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಅವರನ್ನು ಭೇಟಿ ಮಾಡಲಿದ್ದಾರೆ.
ಇಬ್ಬರು ಉನ್ನತ ರಾಜತಾಂತ್ರಿಕರ ನಡುವಿನ ಅಧಿಕೃತ ಮಾತುಕತೆಗಳು ಮಧ್ಯಪ್ರಾಚ್ಯ ಮತ್ತು ಕೊಲ್ಲಿ ಪ್ರದೇಶದಲ್ಲಿನ ಇತ್ತೀಚಿನ ಉದ್ವಿಗ್ನತೆ ಕುರಿತಂತೆ ನಡೆಯಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ನಿರ್ದೇಶನದ ಮೇರೆಗೆ ಇಸ್ಲಾಮಾಬಾದ್ ನ ರಾಜತಾಂತ್ರಿಕ ಕಾರ್ಯಕ್ರಮದ ಭಾಗವಾಗಿ ಈ ಭೇಟಿ ನಡೆಯಲಿದೆ.
ಪೊಂಪಿಯೊ, ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ’ಬ್ರಿಯೆನ್ ಮತ್ತು ಇತರ ಅಮೆರಿಕದ ಆಡಳಿತ ಅಧಿಕಾರಿಗಳೊಂದಿಗೆ ಖುರೇಷಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಪ್ರದೇಶದಲ್ಲಿನ ಉದ್ವಿಗ್ನತೆ ನಿವಾರಣೆಗೆ, ರಾಜಕೀಯ ವಿಧಾನಗಳ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕಾದ ಪ್ರಾಮುಖ್ಯತೆಯನ್ನು ಖುರೇಷಿ ಒತ್ತಿ ಹೇಳುವ ನಿರೀಕ್ಷೆಯಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಖುರೇಷಿ ಅಫಘಾನ್ ಶಾಂತಿ ಪ್ರಕ್ರಿಯೆ, ಜಮ್ಮು ಮತ್ತು ಕಾಶ್ಮೀರ ವಿವಾದದಂತಹ ಇತರ ಪ್ರಾದೇಶಿಕ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಪಾಕಿಸ್ತಾನವು ಯಾವುದೇ ಸಂಘರ್ಷದ ಭಾಗವಾಗುವುದಿಲ್ಲ ಎಂದು ವಾಷಿಂಗ್ಟನ್, ಟೆಹ್ರಾನ್ ಮತ್ತು ರಿಯಾದ್ ಅಧಿಕಾರಿಗಳಿಗೆ ತಿಳಿಸುವುದಾಗಿ ಗುರುವಾರ ಖುರೇಷಿ ತಂತ್ರಗಾರಿಕೆ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

loading...