ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಮನವಿ

0
23

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ರೈತ ಹುತ್ಮಾತ ದಿನಾಚರಣೆ ಹಾಗೂ ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಗಜೇಂದ್ರಗಡ ತಹಸೀಲ್ದಾರ ಶ್ರೀಶೈಲ್‌ ತಳವಾರ ಮೂಲಕ ಸ್ಥಳೀಯ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.
ಈ ವೇಳೆ ಸಂಘನಟನೆ ತಾಲೂಕಾಧ್ಯಕ್ಷ ಭೀಮಣ್ಣ ಇಂಗಳೆ ಮಾತನಾಡಿ, ಮತ ನೀಡಿದ ಸರ್ಕಾರ ಹಾರಿಸಿದ ಗುಂಡಿಗೆ ಎದೆಯೊಡ್ಡಿ ರೈತರು ಹುತ್ಮಾತರಾಗಿ ಹಲವಾರು ದಶಕಗಳು ಗತಿಸಿವೆ. ಆದರೆ ದೇಶಕ್ಕೆ ಅನ್ನ ನೀಡುವ ರಾಜ್ಯದ ರೈತ ಸಮೂಹಕ್ಕೆ ಇಂದಿಗೂ ಸಹ ಕೆಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾತ್ರ ದೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಯೋಜನೆಗಳು ಜಾರಿಯಾಗದಿರುವುದು ವಿಪರ್ಯಾಸ ಎಂದ ಅವರು, ಮಹದಾಯಿ ಯೋಜನೆ ಅನುಷ್ಠಾನ ಮಾಡುವಂತೆ ಒತ್ತಾಯಿಸಿ ಕಳೆದ 1,101 ದಿನಗಳಿಂದ ನಡೆಸುತ್ತಿರುವ ಹೋರಾಟಗಾರರ ಮೇಲೆಯೂ ಸಹ ಸರ್ಕಾರಗಳು ಲಾಠಿ ಏಟು ಹಾಗೂ ಪ್ರಕರಣಗಳನ್ನು ದಾಖಲಿಸಿದ್ದು ಒಂದೆಡೆಯಾದರೆ ಇತ್ತ ರಾಜಕೀಯ ಪಕ್ಷಗಳು ಮಹದಾಯಿ ಹೋರಾಟವನ್ನು ದಾಳವನ್ನಾಗಿ ಮಾಡಿಕೊಂಡಿರುವುದು ಖಂಡನಾರ್ಹ. ಹೀಗಾಗಿ ಸರ್ಕಾರದ ಸಚಿವರು, ಶಾಸಕರು ಹಾಗೂ ಸಂಸದರು ಶೀಘ್ರದಲ್ಲಿಯೇ ಮಹದಾಯಿ ಯೋಜನೆಯನ್ನು ಬಗೆ ಹರಿಸಲು ಮುಂದಾಗದಿದ್ದರೆ ಉಗ್ರವಾದ ಹೋರಾಟವನ್ನು ಸಂಘಟನೆಯು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಪಟ್ಟಣದ ದುರ್ಗಾವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಜೋಡು ರಸ್ತೆ, ಶಿವಾಜಿ ವೃತ್ತ ಮೂಲಕ ಕೆ.ಕೆ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಗಜೇಂದ್ರಗಡದ ತಹಸೀಲ್ದಾರ್‌ ಶ್ರೀಶೈಲ್‌ ತಳವಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.
ಜಯ ಕರ್ನಾಟಕ ಸಂಘಟನೆ ಜಿಲ್ಲಾ ಸಂಚಾಲಕ ರಫೀಕ ತೋರಗಲ್‌, ಬಿ.ಎಸ್‌.ಶೀಲವಂತರ, ತಿರುಪತಿ ಕುರಿ, ರಮೇಶ ಮಡಿವಾಳರ ಸೇರಿ ಇತರರು ಪಾಲ್ಗೊಂಡಿದ್ದರು.

loading...