ಮಹಾಮಳೆಗೆ 90 ಬಲಿ: ಕೇಂದ್ರದ ವಿರುದ್ಧ ಅಸಮಾಧಾನ ಹೊರಹಾಕಿದ ಪಿಣರಾಯಿ

0
3

ತಿರುವನಂತಪುರಂ:-ಕೇರಳದಲ್ಲಿ ಮಹಾಮಳೆ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ಈಗ 90 ಕ್ಕೆ ಏರಿಕೆಯಾಗಿದೆ. ರಾಜ್ಯಕ್ಕೆ ಆರ್ಥಿಕ ನೆರವು ನೀಡುವ ವಿಚಾರದಲ್ಲಿ ಕೇಂದ್ರದ ಮೋದಿ ಸರಕಾರ ಬಿಜೆಪಿಯೇತರ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೂರಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಈ ವಿಷಯ ತಿಳಿಸಿದ್ದಾರೆ. ಇನ್ನು ಹಲವರು ಕಾಣೆಯಾಗಿದ್ದಾರೆ ಈ ನಡುವೆ ಇನ್ನು ಕೆಲವು ಜಿಲ್ಲೆಗಳಲ್ಲಿ ಎರಡು ದಿನ ಮತ್ತೆ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಳೆ ಸೃಷ್ಟಿಸಿದ ಅನಾಹುತ ವೀಕ್ಷಣೆಗಾಗಿ ವಯನಾಡ್ ಮತ್ತು ಮಲಪ್ಪುರಂಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿದ ಅವರು, ಜನರ ಕಷ್ಟ ನಿವಾರಿಸಲು ರಾಜ್ಯ ಸರಕಾರ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವ ಭರವಸೆ ನೀಡಿದರು.
‘ನಿಮ್ಮ ನೋವು ಮತ್ತು ಸಂಕಟ ಸರಕಾರಕ್ಕೆ ಅರ್ಥವಾಗಿದೆ . ನಾವು ನಿಮ್ಮೊಂದಿಗೆ ಇರುತ್ತೇವೆ. ಶೀಘ್ರದಲ್ಲೇ ಈ ದುರಂತದಿಂದ ಹೊರಬರುತ್ತೇವೆ ಎಂದು ಸಂತ್ರಸ್ತರು ತಮ್ಮ ಸಂಕಟಗಳನ್ನು ವಿವರಿಸುತ್ತಿದ್ದಂತೆ ಅವರು ಜನರಿಗೆ ಭರವಸೆ ನೀಡಿದರು.
ವಯನಾಡ್ ಭೂಕುಸಿತದಲ್ಲಿ ಕಾಣೆಯಾದವರ ಸಂಬಂಧಿಕರು ಈಗ ನಡೆಯುತ್ತಿರುವ ರಕ್ಷಣಾ ಕಾರ್ಯ ಚುರುಕುಗೊಳಿಸುವಂತೆ ಮನವಿ ಮಾಡಿದರು. ಭಾರಿ ಮಳೆ , ಭೂಕುಸಿತದ ಅವಶೇಷ ಗಳನ್ನು ಸ್ವಚ್ಚಗೊಳಿಸುವ ಕೆಲಸ ತೀವ್ರಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಭಗ್ನಾವಶೇಷಗಳ ಅಡಿಯಲ್ಲಿ 40 ಜನರು ಸಿಕ್ಕಿಹಾಕಿಕೊಂಡಿದ್ದು ಅವರ ರಕ್ಷಣೆಗೂ ತೀವ್ರ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು.
ಬಂಗಾಳಕೊಲ್ಲಿಯಲ್ಲಿನ ವಾಯಭಾರ ಕುಸಿತದಿಂದ ಮತ್ತೆ ದಕ್ಷಿಣ ಭಾರತದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ವರ್ಷದ ಮಹಾಮಳೆಗೆ ರಾಜ್ಯದಲ್ಲಿ 475 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.ಈ ನಡುವೆ ಕೇಂದ್ರ ಸರಕಾರ ವಿರೋಧ ಪಕ್ಷದ ಆಡಳಿವಿರುವ ರಾಜ್ಯಗಳನ್ನು ನಿರ್ಲಕ್ಷಿಸುತ್ತಿದೆ . ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು,ಭಾನುವಾರ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು ಆದರೆ ಅವರು ಹೆಚ್ಚು ತೊಂದರೆಗೆ ಒಳಗಾದ ಕೇರಳವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದಾರೆ ಎಂದು ಅವರು ದೂರಿದರು.

loading...