ಮಾನವನಲ್ಲಿ ಸಂಗೀತ ಕಲೆಗಳ ಅಭಿರುಚಿ ಇರಲಿ: ವಿಶ್ವೇಶ್ವರ ಭಟ್‌

0
24

ಕನ್ನಡಮ್ಮ ಸುದ್ದಿ-ಗಂಗಾವತಿ: ಮನುಷ್ಯ ಎಷ್ಟೇ ಶ್ರೀಮಂತನಾಗಿರಲಿ, ಬಲಶಾಲಿಯಾಗಿರಲಿ, ಬುದ್ಧಿವಂತನಾಗಿರಲಿ ಅವನಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ಬಗ್ಗೆ ಅಭಿರುಚಿ ಇರಬೇಕು. ಇಲ್ಲದಿದ್ದರೆ ಏನೆಲ್ಲಾ ಇದ್ದರೂ ಅವನು ಗೌಣ. ಭತ್ತದ ನಾಡು ಗಂಗಾವತಿಯಲ್ಲಿ ಸಾಹಿತ್ಯ ಪ್ರೇಮಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿರುವುದು ಸಂತೋಷ ತಂದಿದೆ. ರಾಜ್ಯ ಸರಕಾರಗಳು ವಿದ್ಯಾರ್ಥಿಗಳ ಸಂಖ್ಯೆಯ ಕೊರತೆ ನೆಪದಲ್ಲಿ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್‌ ಹೇಳಿದರು.
ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನನದ ನಿಮಿತ್ತ ಜೂನಿಯರ್‌ ಕಾಲೇಜ್‌ ಮೈದಾನದಲ್ಲಿ ನಿರ್ಮಿಸಲಾಗಿದ್ದ ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್‌ ನಮಗೆ ಅನಿವಾರ್ಯವಲ್ಲ. ಕನ್ನಡ ಭಾಷೆ ನೆಲ, ಜಲ ನಮ್ಮ ಅಭಿಮಾನವಾಗಬೇಕು. ಅಕ್ಷರ ಪ್ರೇಮ, ಕನ್ನಡ ಪ್ರೇಮ ನಮ್ಮೆಲ್ಲರ ಮೂಲಮಂತ್ರವಾಗಬೇಕು ಎಂದು ತಿಳಿಸಿದರು.
ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಇಲ್ಲಿಯ ಜನ ಕನ್ನಡ ಭಾಷಾಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರು, ಕನ್ನಡ ಪ್ರೇಮಿಗಳು ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯುದ್ದಕ್ಕೂ ಜನ ತೋರಿದ ಪ್ರೀತಿ, ಆದರ ಕನ್ನಡಾಭಿಮಾನ ಸಾಕ್ಷಿ. ತಾಲೂಕುಮಟ್ಟದ ಸಮ್ಮೇಳನಗಳು ಇಷ್ಟು ದೊಡ್ಡಮಟ್ಟದಲ್ಲಿ ಆಯೋಜಿಸುವುದಕ್ಕೆ ಈ ನೆಲದ ಜನರ ಸಹಕಾರ ಪ್ರೀತಿಯೇ ಕಾರಣ. ಇದು ಜನರ ಹಾಗೂ ಕನ್ನಡಾಭಿಮಾನಿಗಳ ಕನ್ನಡ ಜಾತ್ರೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲಿಂಗಾರೆಡ್ಡಿ ಆಲೂರು ಕನ್ನಡಧ್ವಜವನ್ನು ಸಮ್ಮೇಳನಾಧ್ಯಕ್ಷ ಬಿ.ಪ್ರಾಣೇಶ್‌ ಅವರಿಗೆ ಹಸ್ತಾಂತರಿಸಿ ಮಾತನಾಡಿದರು. ಪವನ್‌ಕುಮಾರ್‌ ಗುಂಡೂರು ಪ್ರಾಣೇಶರವರ ಕಿರುಪರಿಚಯ ಮಾಡಿದರು. ಇದೇ ವೇಳೆ ಪ್ರಾಣೇಶರವರ ಶಿಷ್ಯವೃಂದ ನರಸಿಂಹ ಜ್ಯೋಷಿ ಅವರ ನೇತೃತ್ವದಲ್ಲಿ ಪ್ರಾಣೇಶರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಲಾಯಿತು.
ಇದಕ್ಕೂ ಮುನ್ನ ನಗರಸಭೆ ಅಧ್ಯಕ್ಷೆ ಹುಲಿಗೆಮ್ಮ ದೇವಪ್ಪ ಕಾಮದೊಡ್ಡಿ ವಿವಿಧ ಲೇಖಕರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ಹಾಸ್ಯ ಕಲಾವಿದ ಗಂಗಾವತಿ ಬಿ.ಪ್ರಾಣೇಶ್‌ ಮಾತನಾಡಿ, ರಾಜ್ಯದಲ್ಲಿ 25800 ಕನ್ನಡ ಶಾಲೆಗಳನ್ನು ಸರಕಾರ ವಿಲೀನಗೊಳಿಸುತ್ತಿರುವುದು ಆಘಾತಕಾರಿ ಸಂಗತಿ. ಜನ ಕನ್ನಡಾಭಿಮಾನ ತೋರದಿದ್ದರೆ ಕನ್ನಡ ಭಾಷೆಗೆ ಆಪತ್ತು. ನಮ್ಮ ನಡೆ, ನುಡಿ, ಬರಹಗಳಲ್ಲಿ ಕನ್ನಡ ಭಾಷೆಯನ್ನು ಬಳಸದಿದ್ದರೆ ಮುಂದಿನ ದಿನಮಾನಗಳಲ್ಲಿ ಕನ್ನಡ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಗಂಗಾವತಿಯ ಗಲ್ಲಿ, ಗಲ್ಲಿಗಳಲ್ಲಿ ತಿರುಗಾಡುತ್ತಾ ಬೆಳೆದ ಒಬ್ಬ ಸಾಮಾನ್ಯ ಯುವಕನನ್ನು ಜನ ಈ ಮಟ್ಟಿಗೆ ಆದರಿಸಿ ಗೌರವಿಸುತ್ತಿರುವುದು ಇಲ್ಲಿಯ ಜನರ ಹೃದಯವಂತಿಕೆ ತೋರುತ್ತದೆ. ಈ ಭಾಗದ ಜನರ ಅಭಿಮಾನ ದೊಡ್ಡದು ಎಂದರು.
ಇದಕ್ಕೂ ಮುನ್ನ ಬೆಳಗ್ಗೆ ಶಾಸಕ ಪರಣ್ಣ ಮುನವಳ್ಳಿ ತಾಲೂಕು ಸಮ್ಮೇಳನದ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಪರಿಷತ್‌ ಧ್ವಜಾರೋಹಣ, ಕಸಾಪ ತಾಲೂಕು ಅಧ್ಯಕ್ಷ ಎಸ್‌.ಬಿ. ಗೊಂಡಬಾಳ ಕನ್ನಡ ಧ್ವಜಾರೋಹಣ ನೆರವೇರಿಸಿದರು. ನಂತರ ನಗರಸಭೆ ಅಧ್ಯಕ್ಷೆ ಪಥಸಂಚಲನ ಉದ್ಘಾಟನೆ ಮಾಡಿದರು.
ಸಿದ್ದಾಪುರ ಹಾಗೂ ಕೇಸರಹಟ್ಟಿ ಶಾಲೆಯ ವಿದ್ಯಾರ್ಥಿಗಳು ಪಥಸಂಚಲನ ನಡೆಸಿದರು. ನಂತರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಜಾನಪದ ಕಲಾತಂಡಗಳು, ವಿವಿಧ ಶಾಲೆಯ ಮಕ್ಕಳು ಹಾಗೂ ಸಾವಿರಾರು ಸಂಖ್ಯೆಯ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು. ಛದ್ಮ ವೇಷಧಾರಿ ಮಕ್ಕಳು, ಡೊಳ್ಳು ಕುಣಿತ, ವೇಷಗಾರರ ಹಾವಬಾವಗಳು ಮೆರವಣಿಗೆಗೆ ಮೆರಗು ನೀಡಿದವು. ಮೆರವಣಿಗೆ ನಗರದ ಎಪಿಎಂಸಿಯಿಂದ ಆರಂಭಗೊಂಡು ಶ್ರೀ ಚನ್ನಬಸವಸ್ವಾಮಿ ವೃತ್ತ, ಮೇದಾರ ಕೇತಯ್ಯ ವೃತ್ತ, ಮಹಾವೀರ ವೃತ್ತ, ಗಾಂಧಿವೃತ್ತ, ಬಸವಣ್ಣ ವೃತ್ತ, ವಾಸವಿ ವೃತ್ತ, ಅಂಬೇಡ್ಕರ್‌ ವೃತ್ತ, ಬಾಬುಜಗಜೀವನ್‌ರಾವ್‌ ವೃತ್ತ, ಶ್ರೀಕೃಷ್ಣದೇವರಾಯ ವೃತ್ತದ ಮೂಲಕ ವೇದಿಕೆ ಬಳಿ ಸಮಾವೇಶಗೊಂಡಿತು.

loading...