ಮಾಹಿತಿ ತಂತ್ರಜ್ಞಾನ ಬೆದರಿಕೆ: ಟ್ರಂಪ್‍ ರಿಂದ ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ

0
10

ವಾಷಿಂಗ್ಟನ್:- ಅಮೆರಿಕದ ಕಂಪ್ಯೂಟರ್ ಜಾಲಗಳನ್ನು ವಿದೇಶಿ ಶತ್ರುಗಳಿಂದ ರಕ್ಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ರಾಷ್ಟ್ರೀಯ ತುರ್ತುಸ್ಥಿತಿ ಘೋಷಿಸಿದ್ದಾರೆ.
ರಾಷ್ಟ್ರೀಯ ಭದ್ರತಾ ಬೆದರಿಕೆಗಳನ್ನು ಒಡ್ಡುವ ಸಾಧ್ಯತೆ ಇರುವುದರಿಂದ ವಿದೇಶಿ ದೂರ ಸಂಪರ್ಕಗಳನ್ನು ಅಮೆರಿಕ ಕಂಪೆನಿಗಳು ಬಳಸದಂತೆ ನಿಷೇಧಿಸುವ ಆದೇಶಕ್ಕೆ ಟ್ರಂಪ್‍ ಸಹಿ ಹಾಕಿದ್ದಾರೆ ಎಂದು ಬಿಬಿಸಿ ನ್ಯೂಸ್ ವರದಿ ತಿಳಿಸಿದೆ.
ಅಮೆರಿಕದಲ್ಲಿ ತನ್ನ ವಹಿವಾಟು ನಿರ್ಬಂಧಿಸುವುದರಿಂದ ಅಮೆರಿಕ ಗ್ರಾಹಕರಿಗೆ ಮತ್ತು ಕಂಪೆನಿಗಳಿಗಷ್ಟೇ ನಷ್ಟ ಉಂಟಾಗಲಿದೆ ಎಂದು ಚೀನಾದ ತಂತ್ರಜ್ಞಾನ ದೈತ್ಯ ಹುವೈ ತಿಳಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಚೀನಾದ ಕಣ್ಗಾವಲು ವ್ಯವಸ್ಥೆಗೆ ಹುವೈ ಉತ್ಪನ್ನಗಳು ಬಳಕೆಯಾಗುತ್ತಿವೆ ಎಂದು ಅಮೆರಿಕ ಸೇರಿದಂತೆ ಅನೇಕ ದೇಶಗಳು ಕಳವಳ ವ್ಯಕ್ತಪಡಿಸಿದ್ದವು.
ಹುವೈನ ಹೊಸ ಪೀಳಿಗೆಯ 5 ಜಿ ಮೊಬೈಲ್ ಜಾಲವನ್ನು ನಿಷೇಧಿಸುವಂತೆ ತನ್ನ ಮಿತ್ರ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯಿಸುತ್ತಾ ಬಂದಿದೆ.

ಈ ಮಧ್ಯೆ ಬೆಳವಣಿಗೆಯೊಂದರಲ್ಲಿ ಅಮೆರಿಕ ವಾಣಿಜ್ಯ ಇಲಾಖೆಯು ಹುವೈಯನ್ನು ನಿಷೇಧಿತ ಕಂಪೆನಿಗಳ ಪಟ್ಟಿಗೆ ಸೇರಿಸಿದೆ. ಈ ಕ್ರಮದಿಂದ ಸರ್ಕಾರದ ಒಪ್ಪಿಗೆ ಇಲ್ಲದೆ ಅಮೆರಿಕ ಕಂಪೆನಿಗಳು ಹುವೈನಿಂದ ತಂತ್ರಜ್ಞಾನ ಪಡೆಯುವುದನ್ನು ನಿಷೇಧಿಸಲಾಗಿದೆ.

ಟ್ರಂಪ್‍ ಅವರ ಈ ಆದೇಶದಿಂದ ಅಮೆರಿಕ ಮತ್ತು ಚೀನಾ ನಡುವಿನ ಉದ್ವಿಗ್ನತೆ ಹದಗೆಡುವ ಸಾಧ್ಯತೆಯಿದೆ. ಅಮೆರಿಕ ಇತ್ತೀಚೆಗೆ ಚೀನಾ ಆಗುವ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಿದ್ದು, ಉಭಯ ದೇಶಗಳ ನಡುವಿನ ವಾಣಿಜ್ಯ ಸಮರ ತೀವ್ರಗೊಂಡಿದೆ.

loading...