ಮುಖ್ಯಮಂತ್ರಿ, ಬಿಜೆಪಿ ನಾಯಕರಿಂದ ಅಟಲ್ ಬಿಹಾರಿ ವಾಜಪೇಯಿ ಸ್ಮರಣೆ

0
1

ಬೆಂಗಳೂರು-ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಮೊದಲನೇ ಪುಣ್ಯಸ್ಮರಣೆ ಅಂಗವಾಗಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಕವನ ವಾಚನದ ಮೂಲಕ ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ್ , ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಕವಿತೆ ವಾಚನದ ಮೂಲಕ ಅವರ ಗುಣಗಾನ ಮಾಡಿದರು.

ಬಳಿಕ ಅರುಣ ಕುಮಾರ್ ಮಾತನಾಡಿ, ಅಜಾತಶತ್ರುವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿ ಆಗಿರುವ ಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಹಲವಾರು ಕನಸುಗಳನ್ನು ಕಂಡಿದ್ದರು, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಕನಸನ್ನು ನನಸು ಮಾಡುವಲ್ಲಿ ಶ್ರಮಪಟ್ಟಿದ್ದವರಲ್ಲಿ ಅಟಲ್ ಜೀ ಅವರೂ ಒಬ್ಬರು. ರಾಜಕೀಯ ಜೀವನದಲ್ಲಿ ಅವರ ಶ್ರಮ ಅಪಾರವಾಗಿದೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮಾ.ನಾಗರಾಜ್ ಮಾತನಾಡಿ, ಕೇವಲ ಒಂದೇ ಒಂದು ಮತದ ಕೊರತೆಯಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಾಗ ವಾಜಪೇಯಿ ಅವರು ಆಡಿದ ಮಾತುಗಳನ್ನು ಸ್ಮರಿಸಿಕೊಂಡರು.
ಬಿಜೆಪಿ ಪ್ರಕಾಶನ ಪ್ರಕೋಷ್ಠದ ಸಂಚಾಲಕ ನರಸಿಂಹಮೂರ್ತಿ, ವಾಜಪೇಯಿ ಅವರು ರಚಿಸಿದ ಕವನಗಳನ್ನು ಸಾದರಪಡಿಸಿ ವಾಜಪೇಯಿ ಅವರ ಕೊಡುಗೆ ಸ್ಮರಿಸಿಕೊಂಡರು.
ರಾಜ್ಯ ಬಿಜೆಪಿ ಕಾರ್ಯಾಲಯ ಕಾರ್ಯದರ್ಶಿ ಗಣೇಶ ಯಾಜಿ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಶಾಂತಾರಾಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಕ್ಷದ ಕಾರ್ಯಕರ್ತರು, ಕಾರ್ಯಾಲಯ ಸಿಬ್ಬಂದಿ ವರ್ಗದವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ತಮ್ಮ ನೆಚ್ಚಿನ ನಾಯಕನ ಸಾಧನೆಗಳನ್ನು ಸ್ಮರಿಸಿದರು.
ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಯಡಿಯೂರಪ್ಪ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಥಮ ಪುಣ್ಯತಿಥಿಯಂದು ಶ್ರದ್ಧಾಪೂರ್ವಕ ನಮನಗಳು. ಅತ್ಯುತ್ತಮ ಸಂಸದೀಯ ಪಟು, ಕವಿ, ವಾಗ್ಮಿಯಾಗಿದ್ದ ವಾಜಪೇಯಿ ಪಕ್ಷಾತೀತವಾಗಿ ಎಲ್ಲರ ಗೌರವಕ್ಕೆ ಪಾತ್ರರಾದವರು. ನಮ್ಮ ಅಚ್ಚು ಮೆಚ್ಚಿನ ಪ್ರಧಾನಿಯಾಗಿ ಛಾಪು ಉಳಿಸಿದವರು ಎಂದು ಸ್ಮರಿಸಿದ್ದಾರೆ.

loading...