ಮುಗಿದ ಬಾಂಧವ್ಯ

0
26

  ಕರ್ನಾಟಕದಲ್ಲಿ ಕಳೆದ 40 ವರ್ಷಗಳಿಂದ ಭಾರತೀಯ  ಜನತಾ ಪಕ್ಷವನ್ನು ಕಟ್ಟಿ ಬೆಳೆಸಿ  ಅದಕ್ಕೆ ಅಧಿಕಾರ ತಂದು ಕೊಟ್ಟಿದ್ದ ಪ್ರಭಾವಿ ನಾಯಕ ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ  ಶುಕ್ರವಾರ  ತಮ್ಮ ಶಿಕಾರಿಪುರ ಶಾಸಕ ಸ್ಥಾನಕ್ಕೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಳೆದ 40 ವರ್ಷಗಳಿಂದ  ಹೊಂದಿದ್ದ ತಮ್ಮ ಬಾಂಧವ್ಯವನ್ನು ಕಡಿದು ಕೊಂಡಿದ್ದಾರೆ.

ಶುಕ್ರವಾರ ಮುಂಜಾನೆ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿದ ಅವರು ಪ್ರೀಡಂ ಪಾರ್ಕದಲ್ಲಿ  ಸಭೆ ನಡೆಸಿ  ನಂತರ ಗಾಂಧಿ ಅಂಬೇಡ್ಕರ, ಬಸವೇಶ್ವರ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿ ನಂತರ ಸಾವಿರಾರು ಬೆಂಬಲಿಗರೊಂದಿಗೆ  ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ವಿಧಾನ ಸೌಧಕ್ಕೆ ಆಗಮಿಸಿ ವಿಧಾನ ಸಭೆಯ ಅಧ್ಯಕ್ಷ ಕೆ.ಜಿ. ಬೋಪಯ್ಯನವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಬೋಪಯ್ಯನವರು ಆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದರ ಜೊತೆಗೆ ಬಾಜಪ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ರಾಜೀನಾಮೆ ಪತ್ರವನ್ನು ಪ್ಯಾಕ್ಸ ಮೂಲಕ ಪಕ್ಷದ ರಾಷ್ಟ್ತ್ರೀಯ ಅಧ್ಯಕ್ಷ ನೀತೀನ್ ಗಡ್ಕರಿ ಅವರಿಗೆ ಸಲ್ಲಿಸಿದ್ದಾರೆ. ನಂತರ ಕೆಜೆಪಿ ಸದಸ್ಯ ಸ್ಥಾನವನ್ನು ಪಡೆದುಕೊಂಡು ಖಾಸಗಿ ಹೊಟೇಲಿನಲ್ಲಿ ತಮ್ಮ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಯಡಿಯೂರಪ್ಪನವರ ರಾಜೀನಾಮೆ ನೀಡುವ ಸಂದರ್ಭದಲ್ಲಿ ಐವರು ಶಾಸಕರು ಮೂವರು ವಿಧಾನ ಪರಿಷತ್ ಸದಸ್ಯರು  ಇಬ್ಬರು ಸಂಸದರು ಉಪಸ್ಥಿತರಿದ್ದರು. ತಮ್ಮ ಭಾಷಣ ಮತ್ತು ಸುದ್ದಿಗೋಷ್ಠಿಯಲ್ಲಿ ಅವರು ನಾನು 40 ವರ್ಷಗಳಿಂದ ಕಟ್ಟಿ ಬೆಳೆಸಿದ ಪಕ್ಷವನ್ನು ಬಿಡುತ್ತಿರುವುದಕ್ಕೆ ನೋವಾಗಿದೆ. ಇದು ನನ್ನ ಜೀವನದಲ್ಲಿಯೇ ಅತ್ಯಂತ ನೋವಿನ ದಿನವಾಗಿದೆ. ನನ್ನ ಪಕ್ಷದವರೇ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಒಂದು ವರ್ಷದಿಂದ ಆ ನೋವನ್ನು ಸಹಿಸಿಕೊಂಡು ಇದೀಗ ರಾಜೀನಾಮೆ ನೀಡುವ ಕಾರ್ಯ ಮಾಡಿದ್ದೇನೆ. ಇನ್ನು ಮುಂದೆ ರಾಜ್ಯದಲ್ಲಿ ಪ್ರವಾಸ ಮಾಡಿ ಕೆಜೆಪಿ ಪಕ್ಷವನ್ನು ಕಟ್ಟಿ ಬೆಳೆಸುತ್ತೇನೆ . ಡಿಸೆಂಬರ 9 ರಂದು ಹಾವೇರಿಯಲ್ಲಿ ನಡೆಯಲಿರುವ ಐತಿಹಾಸಿಕ ಸಮಾವೇಶಕ್ಕೆ ನನ್ನ ಬೆಂಬಲಿಗರು ಸ್ವಂತ ಖರ್ಚಿನಲ್ಲಿ ಬುತ್ತಿ ಕಟ್ಟಿಕೊಂಡು ಬರಬೇಕು ಎಂದು ಹೇಳಿದ್ದಾರೆ.

ಯಡಿಯೂರಪ್ಪ ಸಾವಿರಾರು ಬೆಂಬಲಿಗರನ್ನು ಕರೆದುಕೊಂಡು ಮೆರವಣಿಗೆಯಲ್ಲಿ ವಿಧಾನ ಸೌಧಕ್ಕೆ ತೆರಳಿದ್ದರಿಂದ ಮೊದಲೇ ಟ್ರಾಫಿಕ್ ಜಾಮ್ದಿಂದ ತೊಂದರೆ ಅನುಭವಿಸುತ್ತಿರುವ ಬೆಂಗಳೂರಿನ ಜನ ಗಂಟೆ ಗಟ್ಟಲೆ ಕಾಲ, ಮತ್ತಷ್ಟು ಟ್ರಾಫಿಕ್ ಜಾಮ್ ಅನುಭವಿಸಿದರು. ಅಷ್ಟೇ ಅಲ್ಲ ಯಡಿಯೂರಪ್ಪನವರಿಗೆ  ಹಿಡಿ ಶಾಪ ಹಾಕಿದರು.

ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದು ನಿಜವಾದ ಸಂಗತಿಯಾಗಿದೆ. ತಮ್ಮ ರಾಜಕೀಯ ಜೀವನದ 40 ವರ್ಷದ ಅವಧಿಯಲ್ಲಿ ಉಪ ಮುಖ್ಯ ಮಂತ್ರಿಯಾಗಿ , ಮುಖ್ಯ ಮಂತ್ರಿಯಾಗಿ ಐದು ವರ್ಷ ಕಾಲ ಆಡಳಿತ ಮಾಡಿದ್ದನ್ನು ಬಿಟ್ಟರೆ ಉಳಿದ 35 ವರ್ಷ ಅವರು ವಿರೋಧಿ ಪಕ್ಷದಲ್ಲಿಯೇ ಇದ್ದರು. ಶಾಸನ ಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಪಕ್ಷದ ಬಲವನ್ನು 121 ಸದಸ್ಯ ಬಲಕ್ಕೆ ಹೆಚ್ಚಿಸಿ ಸರಕಾರ ರಚನೆ ಮಾಡಿದ್ದರು. ಅಲ್ಲದೆ ಶಾಲಾ ಮಕ್ಕಳಿಗೆ ಸೈಕಲ್ ನೀಡಿ ಬಡ ಹೆಣ್ಣು ಕೂಸುಗಳಿಗೆ ಭಾಗ್ಯ ಲಕ್ಷ್ಮೀಯ ಯೋಜನೆಯ ಅಡಿಯಲ್ಲಿ ಹಣಕಾಸಿನ ನೆರವು ಒದಗಿಸಿದ್ದರು. ಜೊತೆಗೆ ಬೆಳಗಾವಿಯಲ್ಲಿ ಸುವರ್ಣ ವಿಧಾನ ಸೌಧ ಧಾರವಾಡ ಮತ್ತು ಗುಲ್ಬರ್ಗಾಗಳಲ್ಲಿ ಶ್ರೇಷ್ಠ ನ್ಯಾಯಾಲಯದ ಸಂಚಾರಿ ಪೀಠಗಳನ್ನು ನಿರ್ಮಾಣ ಮಾಡಿದ್ದರು. ತಾವು ಅಧಿಕಾರಕ್ಕೆ ಬಂದ ನಂತರ ನಡೆದ ಬಹುತೇಕ ಉಪ ಚುನಾವಣೆಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷ ಗೆಲ್ಲುವಂತೆ ಮಾಡಿದ್ದರು.  ಆದರೆ ಅನೇಕ ಅಕ್ರಮಗಳಲ್ಲಿ ಬಾಗಿಯಾದ ಆರೋಪಗಳಿಂದಾಗಿ ಅಧಿಕಾರ ಕಳೆದುಕೊಂಡರು. ಈ ರೀತಿ ಆರೋಪಗಳಿಗೆ ಅವರು ಒಳಗಾಗದಿದ್ದರೆ ಅವರ ಮುಖ್ಯಮಂತ್ರಿಯ ಸ್ಥಾನ ಗಟ್ಟಿ ಯಾಗಿ ಉಳಿಯುತ್ತಿತ್ತು. ಅಧಿಕಾರ ಹೋಗಿರುವುದಕ್ಕೆ ಅವರೇ ಕಾರಣವಾಗಿದ್ದಾರೆ.

 

loading...

LEAVE A REPLY

Please enter your comment!
Please enter your name here