ಮುನಿಸಿದ ವರುಣ ಚಿಂತೆಗೀಡಾದ ರೈತ ಸಮೂಹ

0
33

-ರಾಮಣ್ಣಾ ನಾಯಿಕ

ಹುಕ್ಕೇರಿ :  ಮಳೆಯನ್ನೇ ಅವಲಂಬಿಸಿದ ರೈತ ಸಮೂಹಕ್ಕೆ ವರುಣ ಮುನಿಸಿಸದ್ದರಿಂದ ಅವರು ಚಾತಕ ಪಕ್ಷಿಯಂತೆ ಆಕಾಶದತ್ತ ಕಣ್ಣರಳಿಸಿ ಮಳೆಯ ಪ್ರತಿಕ್ಷೆಯಲ್ಲಿದ್ದಾರೆ. ಪ್ರತಿ ವರ್ಷ ಮುಂಗಾರು ಮಳೆ ಸಕಾಲಕ್ಕಾಗದೆ ಮಳೆಗಾಗಿ ರೈತರು ಗ್ರಾಮ ದೇವತೆಗಳಿಗೆ ಜಲಾಭಿಷೇಕ, ದಿಗ್ಬಂಧನ, ಕತ್ತೆಯ ಮೆರವಣಿಗೆ, ಕಪ್ಪೆಗಳ ವಿವಾಹ, ವಾರ ಪಾಲಿಸುವದು ಮುಂತಾದವುಗಳನ್ನು ಮಾಡುವ ಪರಿಸ್ಥಿತಿಯಿತ್ತು. ಈ ವರ್ಷ ಸಕಾಲಕ್ಕೆ ಮಳೆಯಾದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಬೀರಿತ್ತು. ರೈತ ತನ್ನ ಪರಿವಾರದೊಂದಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿ ಬಿತ್ತನೆ ಮಾಡಿದ ಆದರೆ ಕಳೆದ ನಾಲೈದು ದಿನಗಳಿಂದ ಮಳೆಯಾದ್ದರಿಂದ ರೈತ ಚಿಂತೆಗೀಡಾಗಿದ್ದಾನೆ. ಬಿತ್ತನೆ ನಂತರ ಮಳೆಯಾದರೆ ಬೀಜಗಳು ಮೊಳಕೆಯೊಡೆದು ಹೆಚ್ಚಿನ ಇಳುವರಿ ಪಡೆಯುವದು ಸಾಧ್ಯವಿದೆ. ಆಕಾಶದಲ್ಲಿ ಮೋಡ ಹಾಗೂ ಮಳೆ ಬರುವ ವಾತಾವರಣವಿದ್ದರೂ ಮಳೆ ಮಾತ್ರ ಆಗುತ್ತಿಲ್ಲ. ಬಿಸಿಲಿನಿಂದ ತತ್ತರಿಸಿದ ಜನರಿಗೆ ಮಾತ್ರ ವಾತಾವರಣ ಚೆನ್ನಾಗಿದೆ.

ಹುಕ್ಕೇರಿ ಸಂಕೇಶ್ವರ ಭಾಗದಲ್ಲಿ ಮಳೆ ಕಡಿಮೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಯಮಕನಮರಡಿ ಹೋಬಳಿಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದು ಬಿತ್ತನೆ ಕಾರ್ಯ ಜೋರಾಗಿ ನಡೆದು ಪ್ರತಿಶತ 75 ರಷ್ಟು ಬಿತ್ತನೆಯಾಗಿದೆ ಆದರೆ ಹುಕ್ಕೇರಿ ಮತ್ತು ಸಂಕೇಶ್ವರ ಭಾಗದಲ್ಲಿ ಅಲ್ಲಲ್ಲಿ ಮಳೆಯಾಗಿದ್ದು ತಕ್ಕ ಮಟ್ಟಿಗೆ ಬಿತ್ತನೆಯಾಗಿದೆ. ಇನ್ನೂ ಮಳೆಯ ಅವಶ್ಯಕತೆಯಿದ್ದು ತಾಲೂಕಿನಲ್ಲಿ ಬಿತ್ತನೆ ಕಾರ್ಯ ಬಿರುಸಿನಿಂದ ಸಾಗಿದೆ. ರಸ ಗೊಬ್ಬರದ ದಾಸ್ತಾನು ಸಮರ್ಪಕ ರೀತಿಯಲ್ಲಿದ್ದು ಮಹಾ ಮಂಡಳದಿಂದ ರಸ ಗೊಬ್ಬರಗಳನ್ನು ತರಿಸಿ ದಾಸ್ತಾನು ಮಾಡಲು ಎಲ್ಲ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಕೃಷಿ ಇಲಾಖೆ ಸೂಚಿಸಿದೆ.

ಸೋಯಾ ಹಾಗೂ ಮೆಕ್ಕೆ ಜೋಳ ಮಾರಾಟ: ತಾಲೂಕಿನಲ್ಲಿ ಇಲ್ಲಿಯ ವರೆಗೆ ಒಟ್ಟು 122.8 ಕ್ವಿಂಟಲ್ ಮೆಕ್ಕೆ ಜೋಳ, 6000 ಕ್ವಿಂಟಲ್ ಸೋಯಾ ಅವರೆ ಹಾಗೂ 25 ಕ್ವಿಂಟಲ್ ಜೋಳದ ಬೀಜಗಳನ್ನು  ಕೃಷಿ ಇಲಾಖೆ ವತಿಯಿಂದ ತಾಲೂಕಿನ ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ ರೈತ ಸಂಪರ್ಕ ಕೇಂದ್ರಗಳ ಸಹ 11 ಹೆಚ್ಚುವರಿ ಬೀಜ ವಿತರಣಾ ಕೇಂದ್ರಗಳಲ್ಲಿ ಮಾರಾಟ ಮಾಡಲಾಗಿದೆ.

ಬಿತ್ತನೆ:ಹೈಬ್ರಿಡ್ ಜೋಳ 3000 ಹೆಕ್ಟೇರ್, ಮೆಕ್ಕೆ ಜೋಳ 2200 ಹೆಕ್ಟೇರ್, ಸೊಯಾ ಅವರೆ 8000 ಹೆಕ್ಟೇರಗಳಲ್ಲಿ ಬಿತ್ತನೆಯಾಗಿವೆ ಇನ್ನಿತರ ಭಾಗಗಳಲ್ಲಿ ಬಿತ್ತನೆ ಕಾರ್ಯ ಮುಂದುವರೆದಿದ್ದು ಹವಾಮಾನ ಇಲಾಖೆ ವರದಿಯಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ನೀರೀಕ್ಷೆಯಿರುವದಾಗಿ ಕೃಷಿ ಸಹಾಯಕ ನಿರ್ದೇಶಕಿ ಜಯಶ್ರೀ ಹಿರೇಮಠ ಕನ್ನಡಮ್ಮಗೆ ತಿಳಿಸಿದರು.

ನಿಗದಿತ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲು ಸೂಚನೆ:ಈಗಾಗಲೇ ಎಲ್ಲಾ ಖಾಸಗಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರಸಗೊಬ್ಬರ ಮಾರಾಟಗಾರರ ಸಭೆ ಕರೆದು ನಿಗದಿತ ಬೆಲೆಯಲ್ಲಿ ರಸಗೊಬ್ಬರ ಮಾರಾಟ ಮಾಡಲು ಸೂಚಿಸಲಾಗಿದೆ. ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ, ದಡ್ಡಿ, ಪಾಶ್ಚಾಪೂರ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಬ್ಯಾಗುಗಳ ಮೇಲಿರುವ ಬೆಲೆಗೆ ರಸಗೊಬ್ಬರ ಮಾರಾಟ ಮಾಡಲು ಹಾಗೂ ರೇಟ ಬೋರ್ಡ ಹಾಕಲು ತಿಳಿಸಿ ನೋಟಿಸು ನೀಡಲಾಗಿದೆ. ಎಲ್ಲ ರೈತರಿಗೆ ನಿಗದಿತ ಕಂಪನಿಯ ನಿರ್ದಿಷ್ಟವಾದ ಗೊಬ್ಬರಗಳನ್ನು ಕೇಳದೆ ಯಾವದೇ ಕಂಪನಿಯ ಗೊಬ್ಬರವಿದ್ದರೂ ಸಹಿತ ಬ್ಯಾಗಿನ ಮೇಲಿನ ದರಕ್ಕೆ ಖರೀದಿ ಮಾಡಲು ಹಾಗೂ ಕಡ್ಡಾಯವಾಗಿ ಬಿಲ್ಲುಗಳನ್ನು ಪಡೆಯಬೇಕು ಒಂದು ವೇಳೆ ಗೊಬ್ಬರ ಮಾರಾಟಗಾರರು ತಮ್ಮಿಂದ ಹೆಚ್ಚಿನ ದರ ಕೇಳಿದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕಿ ಜಯಶ್ರೀ ಹಿರೇಮಠ ವಿನಂತಿಸಿಕೊಂಡಿದ್ದಾರೆ.

50 ಕೆ.ಜಿ ರಸಗೊಬ್ಬರಗಳ ಚೀಲದ ಗರಿಷ್ಟ ಮಾರಾಟ ಬೆಲೆ:ಯೂರಿಯಾ :  ರೂ. 279 ರಿಂದ 286, ಎಂ.ಓ.ಪಿ : ರೂ. 828 ರಿಂದ 846, ಡಿ.ಎ.ಪಿ : 1186 ರಿಂದ 1210, 20:20:0 :13 : ರೂ. 754 ರಿಂದ 999 10:26:26 : ರೂ. 1102 ರಿಂದ 1106, 12:32:16 : ರೂ. 1105 ರಿಂದ 1118, 20:20:0:13:0:3 : ರೂ. 452 ರಿಂದ 936, ಅಮೋನಿಯಂ ಸಲ್ಪೇಟ : ರೂ. 452 15:15:15 : ರೂ. 832, 20:20:0 : ರೂ. 763, 14:35:14 : ರೂ. 1156, 16:20:0:13 : ರೂ. 911, 28:28:00 : ರೂ. 1182, 14:28:14 : ರೂ. 1128, 19:19:19 : ರೂ. 884

loading...

LEAVE A REPLY

Please enter your comment!
Please enter your name here