ಮೂಲಿಮನಿ ಕುಟುಂಬಸ್ಥರ ಮದುವೆಯಲ್ಲಿ ೧೫೦೦ ಸಸಿ ವಿತರಣೆ

0
14

ಮುಂಡಗೋಡ: ಜೂನ್ ತಿಂಗಳು ಮುಗಿಯುತ್ತಾ ಬಂತು. ಆದರೆ ಸಮರ್ಪಕವಾದ ಮಳೆ ಮಾತ್ರ ಈವರೆಗೂ ಆಗಿಲ್ಲ. ಇದಕ್ಕೆಲ್ಲ ಅರಣ್ಯ ಸಂಪತ್ತಿನ ನಾಶವೇ ಕಾರಣ. ಕಾಡಿದ್ದರೆ ನಾಡು, ಗಿಡಗಳನ್ನು ನೆಟ್ಟು ಪೋಷಣೆ ಮಾಡುವಲ್ಲಿ ನಮ್ಮೆಲ್ಲರ ಪಾತ್ರ ಬಹು ಮುಖ್ಯ ಎಂದು ಹಳೇಹುಬ್ಬಳ್ಳಿಯ ವೀರ ಭಿಕ್ಷಾವರ್ತಿ ನೀಲಕಂಠ ಮಠದ ೧೦೦೮ ಶಿವಶಂಕರ ಶಿವಾಚಾರ್ಯರು ಹೇಳಿದರು.
ಮುಂಡಗೋಡ ಪಟ್ಟಣದ ಹುಬ್ಬಳ್ಳಿ ರಸ್ತೆಯ ದೈವಜ್ಞ ಸಭಾ ಭವನದಲ್ಲಿ ಬುಧವಾರ ಜರುಗಿದ ಮೂಲಿಮನಿ(ಕುರುಹಿನಶೆಟ್ಟಿ) ಕುಟುಂಬಸ್ಥರ ಮದುವೆ ಸಮಾರಂಭದಲ್ಲಿ ಅಂಧತ್ವ ನಿವಾರಣೆ ಹಾಗೂ ಪರಿಸರ ಜಾಗೃತಿ ಮೂಡಿಸುವ ಸಾಮಾಜಿಕ ಕಾರ್ಯಕ್ರಮದಲ್ಲಿ ಅವರು ಸಾನಿಧ್ಯ ವಹಿಸಿ ಮಾತನಾಡಿದರು. ಹೊಸ ಬಾಳಿನ ಹೊಸ್ತಿಲಲ್ಲಿ ಕಾಲಿಟ್ಟಿರುವ ನೂತನ ವಧು-ವರರು ಸ್ವಯಂ ಪ್ರೆÃರಣೆಯಿಂದ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಣೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಡಾ.ರಾಘವೇಂದ್ರ ಮಾತನಾಡಿ ಜಗತ್ತಿನಲ್ಲಿ ೪ಲಕ್ಷಕ್ಕೂ ಹೆಚ್ಚು ಅಂಧರಿದ್ದಾರೆ. ಭಾರತದಲ್ಲಿ ೧.೫೦ಲಕ್ಷ ಕಾರ್ನಿಯಾ ಅಂಧತ್ವ ಹೊಂದಿದವರಿದ್ದಾರೆ. ಎಲ್ಲಾ ವಯಸ್ಸಿನವರೂ ನೇತ್ರದಾನ ಮಾಡಬಹುದು. ಮರಣ ಹೊಂದಿದವರು ಮಾತ್ರ ನೇತ್ರದಾನ ಮಾಡಬಹುದು. ಮಣ್ಣಲ್ಲಿ ಮಣ್ಣಾಗಿ ಹೋಗುವ ಕಣ್ಣುಗಳನ್ನು ದಾನ ಮಾಡಿದರೆ ಅಂಧರ ಬಾಳಿಗೆ ಬೆಳಕಾಗುವುದು. ಇದೇ ರೀತಿ ಕಾರ್ಯಕ್ರಮಗಳಲ್ಲಿ ನೇತ್ರದಾನದ ಅರಿವು ಮೂಡಿಸಿದರೆ ಕಾರ್ನಿಯಾ ಅಂಧತ್ವ ನಿವಾರಣೆಗೆ ಎಲ್ಲರೂ ಕೈಜೋಡಿಸಬಹುದು ಎಂದರು.
ಈ ವೇಳೆ ಉಪವಲಯ ಅರಣ್ಯಾಧಿಕಾರಿ ಅರುಣಕುಮಾರ ಕಾಶಿ, ಸಿಬ್ಬಂದಿ ಪ್ರಕಾಶ ಮೊಸಳಗಿ, ರಾಕೇಶ ರಾಯ್ಕರ ಹಾಗೂ ಇತರರಿದ್ದರು.
ನವ ದಂಪತಿಗಳಿಂದ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಲಾಯಿತು. ವಿವಾಹ ಸಮಾರಂಭಕ್ಕೆ ಆಗಮಿಸಿದ ಸರ್ವ ಬಂಧು-ಮಿತ್ರರಿಗೆ ಸಸಿ ವಿತರಣೆ ಮಾಡಲಾಯಿತು. ಮದುವೆ ಸಮಾರಂಭದಲ್ಲಿ ದಂಪತಿ ಸಮೇತ ಸುಮಾರು ೩೦೦ಕ್ಕೂ ಹೆಚ್ಚಿನ ಬಂಧು-ಮಿತ್ರರು ನೇತ್ರದಾನ ವಾಗ್ದಾನ ಮಾಡಿದರು. ಸುಮಾರು ೧೫೦೦ ಸಸಿಗಳನ್ನು ವಿತರಣೆ ಮಾಡಲಾಯಿತು.

loading...