ಮೇ.೨೭ರಂದು ಸರ್ಕಾರದ ವಿರುದ್ಧ ಪ್ರತಿಭಟನೆ: ಜೈನೆಖಾನ

0
3

ಬೆಳಗಾವಿ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ .ಕೆ.ಜಿ. ಮತ್ತು ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಆದೇಶ ನೀಡಿರುವ ಸರ್ಕಾರದ ವಿರುದ್ಧ ರಾಜ್ಯಾಧ್ಯಂತ ಮೇ.೨೭ರಂದು ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಎಂ.ಜೈನೆಖಾನ್ ಅವರು ಎಚ್ಚರಿಸಿದರು.
ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಸಭೆ ನಡೆಸಿ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಜಿ.ಎಂ.ಜೈನೆಖಾನ್ ಅವರು ಮಾತನಾಡಿದರು. ಸರ್ಕಾರ ಒಂದು ಸಂಸ್ಥೆಯನ್ನು ಸಬಲಗೊಳಿಸಿ ಮತ್ತೊಂದು ಸಂಸ್ಥೆಯನ್ನು ಬಲಹೀನಗೊಳಿಸುವುದು ನ್ಯಾಯ ಸಮ್ಮುತವಲ್ಲ, ಸರ್ಕಾರವು ಮೇ.೧೭ ೨೦೧೭ರಂದು ಹೊರಡಿಸಿರುವ ಆದೇಶದ ಪ್ರಕಾರ ಅಂಗನವಾಡಿ ಕೇಂದ್ರಗಳನ್ನು ಆಯ್ದ ೪೧೦೦ ಸರ್ಕಾರಿ ಶಾಲೆಗಳ ಆವರಣಕ್ಕೆ ಸ್ಥಳಾಂತರಿಸಿ ಬಾಲಸ್ನೇಹಿ ಕೇಂದ್ರಗಳನ್ನಾಗಿ ಬಲವರ್ಧಿಸಿ, ಹಂತ ಹಂತವಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಯುಕೆಜಿ ತರಗತಿಗಳನ್ನು ಪ್ರಾರಂಭಿಸುವ ಕುರಿತು ಆದೇಶ ಹೊರಡಿಸಿದೆ ಇದನ್ನು ಅಂಗನವಾಡಿ ನೌಕರರ ಸಂಘವು ವಿರೋಧಿಸುತ್ತದೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ ಮತ್ತು ಯುಕೆಜಿ ಆರಂಭಿಸಬೇಕು, ಅಂಗನವಾಡಿ ಕೇಂದ್ರದಲ್ಲಿ ಕಲಿತ ಮಕ್ಕಳಿಗೆ ಮುಂದಿನ ಪ್ರಾಥಮಿಕ ಶಿಕ್ಷಣ ಪಡೆಯಲು ಇಲ್ಲಿಂದಲೇ ಟಿಸಿ ವರ್ಗಾಯಿಸಬೇಕು ಮತ್ತು ಅಂಗನವಾಡಿ ಕಾರ್ಯಕರ್ತೆಯರಲ್ಲಿ ಎಸ್ಸೆಸ್ಸೆಲ್ಸಿ ಉನ್ನತ ವ್ಯಾಸಾಂಗ ಪಡೆದವರು ಇರುತ್ತಾರೆ. ಆದ್ದರಿಂದ ಇವರಿಗೆ ಶಾಸನ ಬದ್ಧ ಕನಿಷ್ಠ ಕೂಲಿ ನಿಗದಿ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬಳಿಕ ಅಧ್ಯಕ್ಷೆ ದೊಡ್ಡವ್ವ ಪೂಜಾರಿ ಮಾತನಾಡಿ ರಾಜ್ಯದಲ್ಲಿ ೩ ವರ್ಷದೊಳಗಿನ ಮಕ್ಕಳು ೨೩ ಲಕ್ಷ ಮತ್ತು ೩ರಿಂದ ೬ ವರ್ಷದೊಳಗಿನ ೧೬ ಲಕ್ಷ ಮಕ್ಕಳು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಫಲಾನುಭವಿಗಳಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ೬೫೯೧೧ ಅಂಗನವಾಡಿಗಳಿದ್ದು, ಇದರಲ್ಲಿ ೩೩೩೧ ಮಿನಿ ಅಂಗನವಾಡಿ ಕೇಂದ್ರಗಳಿವೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್.ಕೆ.ಜಿ, ಯುಕೆಜಿ ಆರಂಭಿಸಿದರೆ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ. ಆದ್ದರಿಂದ ಕೂಡಲೇ ಸರ್ಕಾರ ತನ್ನ ಆದೇಶ ರದ್ಧು ಪಡಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೋದಾವರಿ ರಾಜಾಪುರೆ, ಸರಸ್ವತಿ ಮಾಳಶೆಟ್ಟಿ, ಮುನಿರಾ ಮುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...