ಯಡಿಯೂರಪ್ಪ ಭೇಟಿಯಾದ ಸುಮಲತಾ: ಬಿಜೆಪಿ ಸೇರ್ಪಡೆ ಸದ್ಯಕ್ಕಿಲ್ಲ

0
3

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ಮಂಡ್ಯ ಕ್ಷೇತ್ರದಲ್ಲಿ ಜಯಗಳಿಸಿರುವ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಸುನಾಮಿ ರೀತಿ ಬಿಜೆಪಿ ದೇಶದಲ್ಲಿ ಗೆದ್ದಿದೆ. ತಮಗೂ ಬಿಜೆಪಿ ಬೆಂಬಲ ಸೂಚಿಸಿತ್ತು. ಹೀಗಾಗಿ ಕೃತಜ್ಞತೆ ತಿಳಿಸಲು ಬಂದಿದ್ದೇನೆ ಎಂದರು.
ಬಿಜೆಪಿ ಸೇರ್ಪಡೆಯಾಗುತ್ತೀರಾ ಎಂಬ ಪ್ರಶ್ನೆಗೆ, ಮೊದಲಿಗೆ ನಾನು ಕ್ಷೇತ್ರದ ನಾಯಕರನ್ನು ಕೇಳಿ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಸದ್ಯಕ್ಕೆ ನಾನು ಬಿಜೆಪಿ ಸೇರುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.
ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದೇನೆ, ಈ ವೇಳೆ ಬಿಜೆಪಿಗೆ ಬೆಂಬಲ ಸೂಚಿಸಬಹುದು, ಬದಲಾಗಿ ಪಕ್ಷ ಸೇರ್ಪಡೆ ಸಾಧ್ಯವಿಲ್ಲ ಎಂಬ ಮಾಹಿತಿ ಇದೆ. ಹೀಗಾಗಿ ಕ್ಷೇತ್ರದ ಜನರ ಅಭಿಪ್ರಾಯ ಆಧಾರದಲ್ಲಿ ಕೆಲಸ ಮಾಡುತ್ತೇನೆ ಎಂದರು.
ನನ್ನ ಗೆಲುವು ಒಂದು ರೀತಿ ಇತಿಹಾಸ. ಮಂಡ್ಯದ ಜನ ಇತಿಹಾಸ ಸೃಷ್ಟಿಸಿದ್ದಾರೆ. ಎಲ್ಲಾ ಪಕ್ಷದವರು ನನಗೆ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಮಂಡ್ಯದ ಪ್ರತಿಯೊಂದು ತಾಲೂಕಿಗೆ ಹೋಗಿ ಜನರಿಗೆ ಕೃತಜ್ಞತೆ ಹೇಳಬೇಕಿದೆ. ಸದ್ಯಕ್ಕೆ ನನ್ನ ಗುರಿ ಮಂಡ್ಯದ ಅಭಿವೃದ್ಧಿ. ನಾನು ಏನು ಮಾಡಬೇಕು ಎಂಬುದನ್ನು ಜನರೇ ಹೇಳುತ್ತಾರೆ ಎಂದರು.
ರೈತರ ನಾಲೆಗಳಿಗೆ ನೀರು ಹರಿಸುವ ಜವಾಬ್ದಾರಿ ಮಂಡ್ಯ ಸಂಸದರದ್ದು ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಮಂಡ್ಯ ಜಿಲ್ಲೆಯ ರೈತರು ನನ್ನ ಮೊದಲ ಆದ್ಯತೆ. ಮಂಡ್ಯ ರೈತರ ಬೆಳೆಗೆ ನಾಲೆ ಮೂಲಕ ನೀರು ಹರಿಸಲು ಶ್ರಮಿಸುವೆ. ರೈತರಿಗಾಗಿ ಎಷ್ಟು ಬೇಕಾದರೂ ಶ್ರಮಿಸಲು ನಾನು ಸದಾ ಸಿದ್ಧ ಹೇಳಿದರು
ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಸುಮಲತಾ ಗೆಲುವು ಮಂಡ್ಯ ಜಿಲ್ಲೆಯಲ್ಲಿ ಎಲ್ಲರಿಗೂ ಸಮಾಧಾನ, ತೃಪ್ತಿ ತಂದಿದೆ. ಪಕ್ಷ ಭೇದ ಮರೆತು ಎಲ್ಲರೂ ಸಹಕಾರ ನೀಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪುತ್ರನ ಗೆಲುವಿಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದರೂ ಸುಮಲತಾ ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಮೈಸೂರಿನ ಸಮಾವೇಶದಲ್ಲಿ ಸುಮಲತಾ ವಿಚಾರ ಪ್ರಸ್ತಾಪ ಮಾಡಿದ್ದರು. ಬಿಜೆಪಿ ಕೂಡ ಮೊದಲ ಬಾರಿಗೆ ಯಾವುದೇ ಅಭ್ಯರ್ಥಿ ಹಾಕದೆ ಬೇಷರತ್ ಬೆಂಬಲ ಸೂಚಿಸಿತ್ತು. ಆ ಕಾರಣಕ್ಕೆ ಅವರು ಇಂದು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಸೇರ್ಪಡೆ ಬಗ್ಗೆ ಕ್ಷೇತ್ರದ ಜನರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

loading...