ರಣಜಿ ಟ್ರೋಫಿ ಫೈನಲ್‌: ವಿದರ್ಭ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ ಅಕ್ಷಯ್‌ ಕರ್ನೆವರ್‌

0
3

ನಾಗ್ಪುರ,:- ಜಯದೇವ್‌ ಉನದ್ಕತ್‌(54 ಕ್ಕೆ 3) ಅವರ ಮಾರಕ ದಾಳಿಯ ನಡುವೆಯೂ ಅರಳಿದ ಅಕ್ಷಯ್‌ ಕರ್ನೆವರ್‌ (73 ರನ್‌, 160 ಎಸೆತಗಳು) ಅವರ ಅಜೇಯ ಅರ್ಧ ಶತಕದ ಬಲದಿಂದ ವಿದರ್ಭ ತಂಡ ರಣಜಿ ಟ್ರೋಫಿ ಫೈನಲ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಇಲ್ಲಿನ ವಿದರ್ಭ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 7 ವಿಕೆಟ್‌ ಕಳೆದುಕೊಂಡು 200 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಆರಂಭಿಸಿದ ವಿದರ್ಭ, 120.2 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 312 ರನ್ ದಾಖಲಿಸಿತು.

ನಿನ್ನೆ ಸೌರಾಷ್ಟ್ರ ಬೌಲರ್‌ಗಳ ಎದುರು ಹಿನ್ನಡೆ ಅನುಭವಿಸಿದ್ದ ವಿದರ್ಭ ತಂಡ, ಇಂದು ಅಕ್ಷಯ್‌ ಕರ್ನೆವರ್‌ (73 ರನ್‌ ) ಹಾಗೂ ಅಕ್ಷಯ್‌ ವಖಾರೆ (34 ರನ್) ಅವರ ಅತ್ಯಮೂಲ್ಯ ಬ್ಯಾಟಿಂಗ್‌ನಿಂದಾಗಿ ಸುಭದ್ರ ಸ್ಥಿತಿಗೆ ತಲುಪಿತು. ಇಂದು ಕ್ರೀಸ್‌ಗೆ ಆಗಮಿಸಿದ ಈ ಜೋಡಿ ಸೌರಾಷ್ಟ್ರ ಬೌಲರ್‌ಗಳನ್ನು ಮೆಟ್ಟಿ ನಿಂತಿತು. ಮುರಿಯದ ಎಂಟನೇ ವಿಕೆಟ್‌ಗೆ ಈ ಜೋಡಿಯ 78 ರನ್‌ ಗಳ ಜತೆಯಾಟ ತಂಡದ ಮೊತ್ತದ ಏರಿಕೆಗೆ ಕಾರಣವಾಯಿತು.

34 ರನ್‌ ಗಳಿಸಿ ಅಕ್ಷಯ್‌ ವಖಾರೆ ವಿಕೆಟ್‌ ಒಪ್ಪಿಸಿದ ಬಳಿಕ ಒಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿದ ಅಕ್ಷಯ್‌ ಕರ್ನೆವರ್‌ ಸೌರಾಷ್ಟ್ರ ಬೌಲರ್‌ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದರು. ಯಾವುದೇ ತಪ್ಪು ಹೊಡೆತಗಳಿಗೆ ಕೈ ಹಾಕದ ಅವರು, ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಎದುರಿಸಿದ 160 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಎಂಟು ಬೌಂಡರಿಯೊಂದಿಗೆ ಒಟ್ಟು 73 ರನ್ ಗಳಿಸಿ ಅಜೇಯರಾಗಿ ಉಳಿದರು. ಆದರೆ, ಮತ್ತೊಂದು ತುದಿಯಲ್ಲಿ ಯಾರು ಇವರಿಗೆ ಸಾಥ್‌ ನೀಡಲಿಲ್ಲ.

ಸೌರಾಷ್ಟ್ರ ಪರ ಉತ್ತಮ ದಾಳಿ ನಡೆಸಿದ ನಾಯಕ ಜಯದೇವ್‌ ಉನದ್ಕತ್‌ ಮೂರು ವಿಕೆಟ್‌ ಪಡೆದರೆ, ಚೇತನ್ ಸಕಾರಿಯ ಹಾಗೂ ಕಮಲೇಶ್‌ ಮಕ್ವಾನ ತಲಾ ಎರಡು ವಿಕೆಟ್‌ ಕಬಳಿಸಿದರು.

ಭೋಜನ ವಿರಾಮದ ಬಳಿಕ ಸೌರಾಷ್ಟ್ರ ಪ್ರಥಮ ಇನಿಂಗ್ಸ್‌ ಆರಂಭಿಸಲಿದೆ.

loading...