ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಖರ್ಗೆ

0
40

ಬೆಂಗಳೂರು: ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲು ಮುಂದಾಗಿದ್ದ ವಿಷಯ ಬೆಳಕಿಗೆ ಬಂದಿದೆ.
ಅಂದ ಹಾಗೇ ಬಡ್ತಿ ಮೀಸಲಾತಿ ಕಾಯ್ದೆ ಜಾರಿ ವಿಚಾರದಲ್ಲಿ ಬೇಸರಗೊಂಡು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದರು ಎನ್ನಲಾಗಿದೆ. ಅಲ್ಲದೆ, ಸಚಿವ ಪ್ರಿಯಾಂಕ್ ಖರ್ಗೆ ಈ ನಿರ್ಧಾರದಿಂದ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ದಂಗಾಗಿ ಹೋಗಿದ್ದರು ಎಂದು ತಿಳಿದು ಬಂದಿದೆ.
ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಡ್ತಿ ಮೀಸಲಾತಿ ವಿವಾದವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಅನಗತ್ಯವಾಗಿ ಬಡ್ತಿ ಮೀಸಲು ಕಾಯ್ದೆ ಅನುಷ್ಠಾನಕ್ಕೆ ತರಲು ತಡ ಮಾಡಲಾಗುತ್ತಿದೆ. ನಮ್ಮ ಮೇಲೆ ಭರವಸೆ ಇಟ್ಟುಕೊಂಡು ಬಂದಿರುವ ದೀನ ದಲಿತ ವರ್ಗದ ಹಿತ ಕಾಪಾಡಲು ಸಚಿವನಾಗಿ ಸಾಧ್ಯವಾಗಲಿಲ್ಲವೆಂದರೆ ಅಧಿಕಾರದಲ್ಲಿ ಏಕಿರಬೇಕು..? ಬಡ್ತಿ ಮೀಸಲು ಕಾಯ್ದೆ ಜಾರಿಗೆ ತರದ ಈ ಸರ್ಕಾರದಲ್ಲಿ ನನಗೆ ಅಧಿಕಾರವೇ ಬೇಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಸಿಎಂ, ಡಿಸಿಎಂಗೆ ಸಂಪುಟ ಸಭೆಯಲ್ಲಿ ತಿಳಿಸಿದ್ದರು.
ಹೀಗಾಗಿ ಇದರಿಂದ ಗಲಿಬಿಲಿಗೊಂಡ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಅವರು ಸಚಿವ ಖರ್ಗೆ ಅವರನ್ನು ಸಮಾಧಾನಪಡಿಸಿ ಆದಷ್ಟು ಬೇಗ ಕಾಯ್ದೆ ಜಾರಿಗೆ ತರುವ ಭರವಸೆ ನೀಡಿದರೆಂದು ತಿಳಿದುಬಂದಿದೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡ್ತಿ ಮೀಸಲು ಕಾಯ್ದೆ ಜಾರಿ ಮಾಡದಿರುವ ಬಗ್ಗೆ ತಮಗೆ ಅಸಮಾಧಾನ ಇದೆ. ಸಚಿವ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಒತ್ತಡ ಹಾಕಿರುವುದಾಗಿ ತಿಳಿಸಿದರು. ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರವಾಗಿರುವ, ರಾಷ್ಟ್ರಪತಿಗಳಿಂದ ಅನುಮೋದನೆಗೊಂಡಿರುವ ಕಾಯ್ದೆ ಜಾರಿಗೆ ತರಲು ಅಧಿಕಾರಿಗಳಿಗೆ ತೊಂದರೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ಬಡ್ತಿ ಮೀಸಲು ಕಾಯ್ದೆ ಜಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ಅದು ಅನುಷ್ಟಾನಕ್ಕೆ ಬರುವ ಬಗ್ಗೆ ಎದುರು ನೋಡುತ್ತಿರುವುದಾಗಿ ಹೇಳಿದರು.

loading...