ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿ, ಸೋಂಕಿತರ ಸಂಖ್ಯೆ 659ಕ್ಕೇರಿಕೆ

0
2

ಬೆಂಗಳೂರು:- ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ವಿಜಯಪುರದ 62 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇವರು ಉಸಿರಾಟದ ತೊಂದರೆ, ದೀರ್ಘ ಕಾಲದ ಸಿಓಪಿಡಿ ಮತ್ತು ಅಸ್ತಮ ಕಾಯಿಲೆಗಳೊಂದಿಗೆ ಮೇ3ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 3, ಬಾಗಲಕೋಟೆಯಲ್ಲಿ 2 ಸೇರಿ ರಾಜ್ಯದಲ್ಲಿ ಸೋಮವಾರ ಸಂಜೆಯಿಂದ 8 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 659ಕ್ಕೇರಿಕೆಯಾಗಿದೆ. 29 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 324 ಜನರು ಗುಣಮುಖರಾಗಿದ್ದಾರೆ.

ಜೊತೆಗೆ, ಬಳ್ಳಾರಿಯಲ್ಲಿ 1, ದಕ್ಷಿಣ ಕನ್ನಡದಲ್ಲಿ 1, ಉತ್ತರ ಕನ್ನಡದ ಭಟ್ಕಳದಲ್ಲಿ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು ನಗರದ 30 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇವರ ಸಂಪರ್ಕ ಮಾಹಿತಿಯನ್ನು ಪತ್ತೆಹಚ್ಚಲಾಗುತ್ತಿದೆ. 420ನೇ ರೋಗಿಯ ಸಂಪರ್ಕ ಹೊಂದಿದ್ದ 34 ವರ್ಷದ ವ್ಯಕ್ತಿ ಮತ್ತು ಜ್ವರದ ಲಕ್ಷಣಗಳನ್ನು ಹೊಂದಿದ್ದ 45 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಬಾಗಲಕೋಟೆಯಲ್ಲಿ 45 ವರ್ಷದ ವ್ಯಕ್ತಿ ಮತ್ತು 29 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಬಳ್ಳಾರಿಯ ಉತ್ತರಾಖಂಡಕ್ಕೆ ಪ್ರಯಾಣ ಬೆಳೆಸಿದ ಲಕ್ಷಣ ಹೊಂದಿರುವ 43 ವರ್ಷದ ವ್ಯಕ್ತಿ, ದಕ್ಷಿಣ ಕನ್ನಡದ 51 ವರ್ಷದ ವ್ಯಕ್ತಿ ಮತ್ತು ಉತ್ತರ ಕನ್ನಡ ಭಟ್ಕಳದ 28 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ.

loading...