ರೆಪೋ ದರ ಯಥಾಸ್ಥಿತಿ ಕಾಪಾಡಿಕೊಂಡ ಆರ್ ಬಿ ಐ

0
3

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ತನ್ನ ರೆಪೋ ದರವನ್ನು ಯಥಾಸ್ಥಿತಿ ಕಾಯ್ದುಕೊಂಡಿದೆ.
ಐದನೇ ದ್ವೈ ಮಾಸಿಕ ನೀತಿ ಪ್ರಕಟಿಸಿದ ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್, “ಹೆಚ್ಚುತ್ತಿರುವ ಹಣದುಬ್ಬರದ ಹಿನ್ನೆಲೆಯಲ್ಲಿ ಹಣಕಾಸು ನೀತಿ ಪರಾಮರ್ಶೆಗೆ ಇದು ಸೂಕ್ತ ಕಾಲ” ಎಂದರು.
ಹಣದುಬ್ಬರ ಮಿತಿಯೊಳಗಿರುವುದನ್ನು ಖಾತರಿಪಡಿಸಿಕೊಂಡು ಆರ್ಥಿಕ ಪುನಶ್ಚೇತನಕ್ಕೆ ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಆರ್ ಬಿ ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಕುಸಿಯುತ್ತಿರುವ ಭಾರತದ ಆರ್ಥಿಕತೆಗೆ ಚೇತರಿಕೆ ನೀಡಲು ಆರ್ ಬಿ ಐ ಸತತ ಐದು ಬಾರಿ ರೆಪೋ ದರ ಇಳಿಕೆ ಮಾಡಿದರೂ ಕೂಡ ಚೇತರಿಸಿಕೊಂಡಿಲ್ಲ.
ಪ್ರಸಕ್ತ ಸಾಲಿನ ಜೂನ್ – ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಶೇ 4.5 ರಷ್ಟಿದ್ದು ಕಳೆದ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ.
ಕುಸಿದ ಬೇಡಿಕೆ ಚೇತರಿಕೆಗೆ ಸರ್ಕಾರ ನೆರವು ಪ್ರಕಟಿಸಿದರೂ ಖಾಸಗಿ ಹೂಡಿಕೆ ಸಾಧ್ಯವಾಗಿಲ್ಲ ಎಂಬುದನ್ನು ಕಳೆದ ತಿಂಗಳು ಪ್ರಕಟವಾದ ಒಟ್ಟು ಆಂತರಿಕ ಉತ್ಪನ್ನ ಜಿಡಿಪಿಯ ಮಾಹಿತಿ ತಿಳಿಸಿದೆ.
ಸೆಪ್ಟೆಂಬರ್ ತಿಂಗಳಲ್ಲಿ ಕೈಗಾರಿಕಾ ಉತ್ಪಾದನೆ ಶೇ 4.3 ರಷ್ಟು ಇಳಿಕೆ ಕಂಡಿದ್ದು ಆಗಸ್ಟ್ ನಲ್ಲಿ ಶೇ 1.4 ರಷ್ಟು ಇಳಿಕೆಯಾಗಿತ್ತು.
ಅಕ್ಟೋಬರ್ ನಲ್ಲಿ ನೀತಿ ಪರಾಮರ್ಶೆ ಸಂದರ್ಭದಲ್ಲಿ ಆರ್ ಬಿ ಐ ಪ್ರಸಕ್ತ ಸಾಲಿನ ಪ್ರಗತಿ ಅಂದಾಜನ್ನು ಶೇ 6.1 ಕ್ಕೆ ಇಳಿಕೆ ಮಾಡಿತ್ತು. ಇದೀಗ ಈ ಬಾರಿಯ ಸಭೆಯಲ್ಲಿ ಪ್ರಗತಿ ಅಂದಾಜನ್ನು ಶೇ 6.1 ರಿಂದ ಶೇ 5 ಕ್ಕೆ ಇಳಿಕೆ ಮಾಡಲಾಗಿದೆ.
ಹಣಕಾಸು ನೀತಿ ಸಮಿತಿಯ ಎಲ್ಲಾ ಸದಸ್ಯರು ಈ ನಿರ್ಧಾರ ಬೆಂಬಲಿಸಿದ್ದಾರೆ.

loading...