ರೈತರ ಖಾತೆಯಿಂದ ಹಣ ವಾಪಸ್‌; ಜೂನ್ 14ರಂದು ಬ್ಯಾಂಕರ್‌ಗಳ ಸಭೆ ಕರೆದ ಮುಖ್ಯಮಂತ್ರಿ

0
10

ಬೆಂಗಳೂರು:- ಲೋಕಸಭಾ ಚುನಾವಣೆಗೂ ಮುನ್ನ ರೈತರ ಖಾತೆಗಳಿಗೆ ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಮೆಯಾದ ಹಣ, ಬ್ಯಾಂಕ್‌ ಅಧಿಕಾರಿಗಳು ವರ್ಗೀಕರಣ ಮಾಡುವಾಗ ಉಂಟಾದ ಲೋಪದಿಂದ ವಾಪಸ್ ಹೋಗಿದೆ. ಇದರಿಂದ ರೈತರಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಜೂನ್ 14ರಂದು ಮಧ್ಯಾಹ್ನ 2.30 ಗಂಟೆಗೆ ರಾಜ್ಯ ಮಟ್ಟದ ಬ್ಯಾಂಕರುಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ

ಯಾದಗಿರಿ ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲಗಳ ವರ್ಗೀಕರಣ ಮಾಡುವಲ್ಲಿ ಆಗಿರುವ ಲೋಪದಿಂದಾಗಿ ಈ ಗೊಂದಲ ಉಂಟಾಗಿದೆ. ಪ್ರತಿ ಸಾಲ ಮನ್ನಾ ನಂತರ ರಾಜ್ಯ ಸರ್ಕಾರ ನಡೆಸುವ ಆಡಿಟ್ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ವರೆಗೆ 13,988 ರೈತರ ಸಾಲ ಖಾತೆಗಳಲ್ಲಿ ಈ ಗೊಂದಲ ಉಂಟಾಗಿದೆ. ಸ್ಥಳೀಯ ಬ್ಯಾಂಕುಗಳು ತಮ್ಮಿಂದ ಆಗಿರುವ ಲೋಪದ ಕುರಿತು ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ
ರೈತರ ಸಾಲ ಮನ್ನಾ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರವು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸರ್ಕಾರದಿಂದ ಈ ಗೊಂದಲ ಉಂಟಾಗಿಲ್ಲ. ಹಾಗೂ ಚುನಾವಣೆಗೂ ಈ ಗೊಂದಲಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ
ಮಾಧ್ಯಮಗಳು ಇಂತಹ ವಿಷಯಗಳನ್ನು ಅಧಿಕೃತ ಮಾಹಿತಿ ಪಡೆದುಕೊಂಡ ನಂತರವೇ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

loading...