ರೈತರ ಹಿತ ಕಾಪಾಡುವುದೇ ಸರಕಾರದ ಗುರಿ: ಸಚಿವ ತಿಮ್ಮಾಪುರ

0
41

ಕನ್ನಡಮ್ಮ ಸುದ್ದಿ-ಮುಧೋಳ 20: ರಾಜ್ಯದಲ್ಲಿ ರೈತರ ಹಿತ ಕಾಪಾಡುವುದೇ ಕಾಂಗ್ರೆಸ್ ಸರಕಾರದ ಮುಖ್ಯಗುರಿಯಾಗಿದ್ದು ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೈತರ 50 ಸಾವಿರ ರೂಪಾಯಿಗಳನ್ನು ಮನ್ನಾ ಮಾಡುವುದರೊಂದಿಗೆ ರೈತರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದಾರೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಮುಗಳಖೋಡ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಸಹಕಾರ ಸಂಘಗಳ ಮೂಲಕ ಸಾಲ ನೀಡುವಿಕೆ, ಸಾಲ ಮನ್ನಾ ಮುಂತಾದ ಸೌಲಭ್ಯಗಳನ್ನು ಸರಕಾರ ನೀಡುವುದರೊಂದಿಗೆ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರ ದೀನ-ದಲಿತರ ಕಡುಬಡವರಿಗಾಗಿ ಜಾರಿಗೆ ತಂದಿರುವ ಹಲವಾರು `ಭಾಗ್ಯ’ ಯೋಜನೆಗಳು ರಾಜ್ಯದಲ್ಲಿ ಜನಪ್ರಿಯಗೊಂಡಿದ್ದು ಹೆಮ್ಮೆಯ ವಿಷಯ.

ನೂತನ ಮಳಿಗೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಗೋವಿಂದ ಕಾರಜೋಳ ಅವರು, ಸಹಕಾರ ಸಂಘಗಳು ಅಸ್ತಿತ್ವ ಕಾಯ್ದುಕೊಂಡು ಅಭಿವೃದ್ಧಿ ಪಥದಲ್ಲಿ ಮುಂದೆ ಬರಲು ರೈತರ ಸಹಕಾರ ಮುಖ್ಯವಾಗಿದ್ದು ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಸಮಯದಲ್ಲಿ ಮರುಪಾವತಿಸಬೇಕೆಂದು ಸಲಹೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮುಖ್ಯ ಅತಿಥಿಯಾಗಿ ಮಾತನಾಡಿ, ಈ ಸಂಘವು ಒಂದು ಕೋಟಿ ರೂಪಾಯಿ ದುಡಿಯುವ ಬಂಡವಾಳದಿಂದ ಆರಂಭಗೊಂಡು 7 ಕೋಟಿ ರೂ.ವರೆಗೆ ಬಂಡವಾಳ ಹೊಂದಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ರೈತರ ಸಹಕಾರವೇ ಕಾರಣವೆಂದು ತಿಳಿಸಿ ನೂತನ ಮಳಿಗೆಗಳ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕಿನಿಂದ 2 ಲಕ್ಷ ರೂ. ನಿಧಿಯನ್ನು ನೀಡುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಈ ಸಹಕಾರಿ ಸಂಘದ ಅಧ್ಯಕ್ಷ ಲಕ್ಕಪ್ಪ ಸುನಗದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಹಾಗೂ ಹಿರಿಯ ನಿರ್ದೇಶಕ ರಾಮಣ್ಣ .ಎಸ್. ತಳೇವಾಡ ಅವರು ರೈತರ ಅಭಿವೃದ್ಧಿಗಾಗಿ ಹೈನುಗಾರಿಕೆ, ಪೈಪ್‍ಲೈನ್‍ಗಾಗಿ 1 ಕೋಟಿ ರೂ. ಸಾಲ ನೀಡಿ ರೈತರ ವಿಕಾಸಕ್ಕಾಗಿ ಶ್ರಮಿಸಿದ್ದಾರೆಂದು ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ನಿರುಪಾದಿಶ್ವರ ಮಹಾಸ್ವಾಮಿಗಳು ಮರೇಗುದ್ದಿ ಇವರು ಆರ್ಶಿವಚನ ನೀಡಿದರು. ಸಂಜೀವ ನಾಯಕ, ಪರಪ್ಪ ಜನವಾಡ, ಗ್ರಾಪಂ ಅಧ್ಯಕ್ಷ ಮಲ್ಲಪ್ಪ ಮಂಟೂರ, ಸಂಗಪ್ಪ ವಡೆಯರ, ರಂಗಪ್ಪ ಸುಣಗಾರ, ಸಹಕಾರಿ ಇಲಾಖಾಧಿಕಾರಿ ಎಸ್.ಆರ್.ಬಾಡಗಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರುಪಾಧೀಶ್ವರ ಮಹಾಸ್ವಾಮಿಗಳು ಹಾಗೂ ಚಿನ್ಮಯಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಕಲ್ಲಪ್ಪ ಅಂಬೋಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಂಗರಾಜ ಗುಡಿ ವಂದಿಸಿದರು.

loading...