ವಚನ ಸಿಂಚನ-36

0
68

ಭಕ್ತನೆಂತೆಂಬೆನಯ್ಯಾ? ಭವಿಯ ಸಂಗ ಬಿಡದನ್ನಕ್ಕ

 

ಮಾಹೇಶ್ವರನೆಂತೆಂಬೆನಯ್ಯಾ? ಪರಸ್ತ್ತ್ರೀ ಪರಧನದಾಸೆ ಬಿಡದನ್ನಕ್ಕ.

ಪ್ರಸಾದಿಯೆಂತೆಂಬೆನಯ್ಯಾ? ಆಧಿವ್ಯಾಧಿ ನಷ್ಟವಾಗದನ್ನಕ್ಕ.

ಪ್ರಾಣಲಿಂಗಿಯೆಂತೆಂಬೆನಯ್ಯಾ? ಪ್ರಾಣ ಸ್ವಸ್ಥಿರವಾಗದನ್ನಕ್ಕ.

ಶರಣನೆಂತೆಂಬೆನಯ್ಯಾ? ಪಂಚೇಂದ್ರಿಯ ನಾಶವಾಗದನ್ನಕ್ಕ.

ಐಕ್ಯನೆಂತೆಂಬೆನಯ್ಯಾ? ಜನನ ಮರಣ  ವಿರಹಿತವಾಗದನ್ನಕ್ಕ.

ಇಂತಪ್ಪ ಭಾಷೆ ವ್ರತ ನೇಮಂಗಳ ನಾನರಿಯೆನಯ್ಯಾ,

ಅಘಟಿತಘಟಿತ ವರ್ತಮಾನವ ನಾನರಿಯೆನಯ್ಯಾ,

ನಿಮ್ಮ ಶರಣರ ತೊತ್ತುಭೃತ್ಯಾಚಾರವ ಮಾಡುವೆ

ಕೂಡಲಸಂಗಮದೇವಾ.

ಷಟ್ಸ್ಥಲ ಸಾಧನಾ ಮಾರ್ಗದಲ್ಲಿ ಮುನ್ನಡೆವ ಸಾಧಕನು ಯಾವ ಸ್ಥಲಗಳಲ್ಲಿ ಯಾವ ಯಾವ ದೋಷಗಳಿಂದ ಮುಕ್ತನಾಗಬೇಕು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತ ಲಿಂಗಾಯತ ಧರ್ಮದ ಪಂಚಾಚಾರಗಳಲ್ಲಿ ಒಂದಾದ ಭೃತ್ಯಾಚಾರದ ಮಹತ್ವವನ್ನು ತಿಳಿಸುವ ಈ ವಚನ ಧರ್ಮಗುರು ಬಸವಣ್ಣನವರದು.

ಷಟ್ಸ್ಥಲಗಳಲ್ಲಿ ಮೊದಲನೆಯದು ಭಕ್ತಸ್ಥಲ. ಭಕ್ತನಾಗುವವನಿಗೆ ಪರಶಿವತತ್ವದಲ್ಲಿ ಸಂಪೂರ್ಣವಾದ ಶ್ರದ್ದೆ ವಿಶ್ವಾಸವಿರಬೇಕು. ಅಹಂಕಾರ ಮಮಕಾರಗಳನ್ನು ತ್ಯಾಗ ಮಾಡಿ ವಿನಯವಂತಿಕೆಯನ್ನು ರೂಢಿಸಿಕೊಳ್ಳಬೇಕು. ಭಕ್ತನಾದವನು ಪರಶಿವತತ್ವವನ್ನು ಅರಿತುಕೊಳ್ಳುವ ಮಹಾನ್ ಗುರಿಯನ್ನು ಹೊಂದಿರುವುದರಿಂದ ಭವಿಯ ಸಂಗವನ್ನು ಬಿಡಬೇಕಾದುದು ಅತ್ಯವಶ್ಯ. ಹಾಗಾದರೆ ಭವಿ ಎಂದರೆ ಯಾರು ಎಂಬ ಪ್ರಶ್ನೆ ಸಹಜವಾಗಿಯೇ ನಮ್ಮೆದುರಿಗೆ ಬರುವುದು. ಲಿಂಗವನ್ನು ಧರಿಸದವರು ಭವಿ ಎಂಬುದು ಸಾಮಾನ್ಯ ಅರ್ಥ. ಇಲ್ಲಿ ನಾವು ಗ್ರಹಿಸಬೇಕಾದುದು-ಭವಿ ಎಂದರೆ ಹುಟ್ಟು ಸಾವುಗಳೆಂಬ ಭವಚಕ್ರದಲ್ಲಿ ಸಿಲುಕಿದವರು. ಅಂದರೆ ದುರ್ಗುಣ, ದುರಾಚಾರ, ದುರ್ವ್ಯಸನಗಳಿಗೆ ಬಲಿಯಾದವರು. ಆಶೆ-ಆಮಿಷಗಳಿಗೆ ದಾಸರಾದವರು. ಕಾಮ, ಕ್ರೌಧ, ಲೋಭ, ಮೋಹ, ಮದ, ಮತ್ಸರಗಳಿಂದ ವ್ಯಾಕುಲಕ್ಕೊಳಗಾಗಿ ಅನಂತ ದುಃಖವನ್ನು ಅನುಭವಿಸುವವರು. ಇಂತಹ ವ್ಯಕ್ತಿಗಳ ಸಂಗದಿಂದ ವಿಮುಖನಾಗದೆ ಯಾವನೂ ಭಕ್ತನಾಗಲಾರನು. ಲಿಕೂಡಲಸಂಗಮದೇವರನರಿವೊಡೆ ಶರಣರ ಸಂಗವೆ ಮೊದಲುಳಿ ಎಂದು ಹೇಳುವ ಮೂಲಕ ಧರ್ಮಗುರು ಬಸವಣ್ಣನವರು ಪರಶಿವತತ್ವವನ್ನರಿತು ಆಚರಿಸಬೇಕಾದ ಭಕ್ತರು ದುರ್ಜ ನರ ಸಂಗ (ಭವಿಸಂಗ)ವನ್ನು ತೊರೆದು ಶರಣರ ಸಂಗದ ಲ್ಲಿರಬೇಕೆಂಬುದನ್ನು ಸೂಚಿಸುತ್ತಾರೆ.

ಎರಡನೆಯದಾದ ಮಾಹೇಶ್ವರ ಸ್ಥಲದಲ್ಲಿ ಸಾಧಕನ ಭಕ್ತಿಶ್ರದ್ದೆಗಳು ನಿಷ್ಠೆಯಲ್ಲಿ ಪರಿವರ್ತನೆಗೊಳ್ಳಬೇಕು. ಪರಶಿ ವತತ್ವವೊಂದನ್ನುಳಿದು ಪರದೈ ವಂಗಳಿಗೆರಗಬಾರದು. ಲಿನಂಬಬಲ್ಲ ಭಕ್ತನಿಗೆ ದೇವನೊಬ್ಬನೇಳಿ ಎಂಬುದನ್ನು ಅರಿತಿರಬೇಕು. ಹಿಡಿದ ಭಕ್ತಿಯ ಬಿಡೆನೆಂಬ ಛಲಬೇಕು. ನೈತಿಕ ನಿಯಮಗಳನ್ನು ಪರಿಪಾಲಿಸುವಲ್ಲಿಯೂ ಛಲ(ನಿಷ್ಠೆ) ಬೇಕು. ಅವುಗಳಲ್ಲಿ ಪರಧನ ಮತ್ತು ಪರಸ್ತ್ತ್ರೀಯರಿಗೆ ಆಶೆ ಮಾಡದಿರುವುದನ್ನು ಒಂದು ವ್ರತ ಎಂಬಂತೆ ಸಾಧಿಸಬೇಕು. ಷಟ್ಸ-್ಥಲ ಸಾಧನೆಯಲ್ಲಿ ತೊಡಗಿದವರು ಪರಧನ ಮತ್ತು ಪರಸ್ತ್ತ್ರೀಯರಿಗೆ ಆಶೆಪಟ್ಟರೆ ಅವರು ಭಕ್ತಸ್ಥಲಕ್ಕೂ ಅರ್ಹರೆನಿಸುವುದಿಲ್ಲ. ಹಾಗೆಯೇ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಹರಿವ ಹಾವಿಂಗಂಜೆ, ಉರಿವ ನಾಲಗೆಗಂಜೆ, ಒಂದಕ್ಕಂಜುವೆ ಒಂದಕ್ಕಳುಪುವೆ, ಪರಧನ ಪರಸ್ತ್ತ್ರೀ ಎಂಬ ಜೂಬಿಂಗಂಜುವೆ ಎಂದು ಬಸವಣ್ಣನವರು ಮತ್ತೊಂದೆಡೆ ಅದರ ಮಹತ್ವವನ್ನು ತಿಳಿಸಿರುವುದು ಸರ್ವವಿದಿತವಾಗಿದೆ.

ನಿಷ್ಠೆಯನ್ನು ಮೈಗೂಡಿಸಿಕೊಂಡು ಪ್ರಸಾದಿಸ್ಥಲದಲ್ಲಿ ನಿಂದ ಸಾಧಕನು ಅಧಿವ್ಯಾಧಿ ಅಂದರೆ ಮಾನಸಿಕ ಮತ್ತು ದೈಹಿಕ ರೋಗಗಳಿಂದ ಮುಕ್ತನಾಗಿರಬೇಕು. ಮನೋವಿಕಾರವನ್ನು ಕಳೆದುಕೊಳ್ಳದೆ ಮನದಲ್ಲಿ ಲಿಂಗನೆಲೆಗೊಳ್ಳದು, ದೇಹವಿಕಾರವಿದ್ದರೆ ಪ್ರಸಾದ ಕಾಯವಾಗದು. ಒಂದರ್ಥದಲ್ಲಿ ಪ್ರಸಾದಿಯು ನಿಷ್ಕಾಮಕರ್ಮಿಯಾಗಿರುವನು. ಸತತ ಕಾಯಕಜೀವಿಯಾಗಿದ್ದರೂ ಅದಕ್ಕೆ ಅತೀತವಾಗಿರುವ ನಿರ್ಲಿಪ್ತತೆಯನ್ನು ರೂಢಿಸಿಕೊಂಡಿರುವನು. ಅಧಿವ್ಯಾಧಿಗಳಿಂದ ಮುಕ್ತನಾಗದಿದ್ದರೆ ನಿರ್ಲಿಪ್ತತೆ ಸಾಧ್ಯವಾಗುವುದಿಲ್ಲ. ಪರಶಿವತತ್ವದಲ್ಲಿ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದು ಸಾಧಕನಿಂದಾಗದು. ಆದ್ದರಿಂದ ಪ್ರಸಾದಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಬಲನಾಗಬೇಕಾಗಿರುವುದು ಅತ್ಯವಶ್ಯ.

ಪ್ರಾಣಲಿಂಗಿಸ್ಥಲದಲ್ಲಿ ಸಾಧಕನು ಲಿಂಗದಲ್ಲಿ ಪ್ರಾಣವನ್ನು, ಪ್ರಾಣದಲ್ಲಿ ಲಿಂಗವನ್ನು ನೆಲೆಗೊಳಿಸಬೇಕು. ಅಂತಃಶಕ್ತಿಗಳನ್ನು ಜಾಗೃತಗೊಳಿಸುವ ಯೋಗವನ್ನು ಅನುಭಾವ ಭಕ್ತಿಯಿಂದ ಸಾಧಿಸಬೇಕು. ಶರಣಸ್ಥಲದಲ್ಲಿ ತನ್ನ ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಹೊಂದಬೇಕು. ಅಷ್ಟೇ ಅಲ್ಲ ಪಂಚೇಂದ್ರಿಯ ವಿರಹಿತನಾಗಿ ಪರಶಿವತತ್ವವನ್ನು ಅಗಲದಂತಿರಬೇಕು. ದೇಹವನ್ನು ಧರಿಸಿದ್ದರೂ ನಿರ್ದೇಹಿಯಾಗಿರಬೇಕು. ನುಡಿದರೂ ನಿಶ್ಶಬ್ದವಾಗಿರಬೇಕು, ನಡೆದರೂ ನಿರ್ಗಮನಿಯಾಗಿರಬೇಕು. ಅದು ಶರಣತ್ವದ ಲಕ್ಷಣವೆನಿಸುವುದು.

ಐಕ್ಯಸ್ಥಲದಲ್ಲಿ ಸಾಧಕನು ತನ್ನನ್ನು ಸಂಪೂರ್ಣವಾಗಿ ಪರಶಿವತತ್ವ ಅಂದರೆ ಲಿಂಗದಲ್ಲಿ ಸಮರಸಗೊಳಿಸಿಕೊಳ್ಳುವನು. ಆತನ ತನು ಮನ ಪ್ರಾಣಗಳು ಲಿಂಗಸ್ವರೂಪವಾಗುತ್ತವೆ. ಹಾಗೆ ಸಮರಸಗೊಂಡಾಗ ಸಾಧಕನು ಜನನ ಮರಣಗಳಿಂದ ಮುಕ್ತನಾಗುವನು. ಆದರೆ ಅವನು ಜನನ ಮರಣಕ್ಕೊಳಗಾಗಿದ್ದರೆ ಅವನಿಗೆ ಐಕ್ಯಸ್ಥಲ ಸಿದ್ದಿಸಿಲ್ಲ ಎಂದೇ ಹೇಳಬೇಕು. ಹೀಗೆ ಒಂದೊಂದು ಸ್ಥಲದಲ್ಲಿ ಒಂದೊಂದು ಮಹತ್ವದ ಸಾಧನೆಯನ್ನು ಕೈಕೊಳ್ಳಬೇಕಾಗುವುದು. ಆದರೆ ಬಸವಣ್ಣನವರು ಸದುವಿನಯದ ಸಾಕಾರಮೂರ್ತಿಯಾಗಿರುವುದರಿಂದ ಷಟ್ಸ-್ಥಲ ಸಾಧನೆಯಲ್ಲಿ ನಿರತನಾಗಿ ಭವಿಸಂಗ ತೊರೆದೆನೆಂಬ, ಪರಧನ ಪರಸ್ತ್ತ್ರೀಯರಿಂದ ದೂರವಾಗಿರುವೆನೆಂಬ ಅಹಂಕಾರವೂ ತಮಗಿರಬಾರದೆಂದು ಬಯಸುತ್ತಾರೆ. ಅದಕ್ಕಾಗಿ ಅವರು ಆಯ್ದುಕೊಂಡ ಮಾರ್ಗವೆಂದರೆ ಶರಣರ ಸೇವೆ. ಷಟ್ಸ-್ಥಲವನ್ನು ಸಾಧಿಸಿರುವ ಶರಣರ ಸೇವೆಯಲ್ಲಿಯೇ ಕೃತಕೃತ್ಯರಾಗ ಬಯಸುವ ಅವರ ಬದುಕೇ ಒಂದು ಆದರ್ಶ. ಆ ಆದರ್ಶವನ್ನು ಸಂತೃಪ್ತ ಬದುಕನ್ನು ಬಯಸುವ ಎಲ್ಲರೂ ರೂಢಿಸಿಕೊಳ್ಳಬೇಕೆಂಬ ಆಶಯ ಈ ವಚನದಲ್ಲಿರುವುದು ಅತ್ಯಂತ ಸ್ಪಷ್ಟ.

 

loading...

LEAVE A REPLY

Please enter your comment!
Please enter your name here