ವಾಲ್ಮೀಕಿ ಭವನ ನಿರ್ಮಾಣಕ್ಕೆ 3 ಕೋಟಿ : ಸಚಿವ ಪಾಟೀಲ

0
215

ಬಾಗಲಕೋಟ : ನವನಗರದ ಸೆಕ್ಟರ ನಂ.7ರಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಆರ್.ಪಾಟೀಲ ಹೇಳಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನವನಗರದ ಸೆಕ್ಟರ ನಂ.7 ರಲ್ಲಿ 1.30 ಎಕರೆ ಜಾಗೆಯಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ 19 ವಾಲ್ಮೀಕಿ ಭವನಗಳಲ್ಲಿ 7 ಭವನಗಳು ಪೂರ್ಣಗೊಂಡಿದ್ದು, ಉಳಿದ ಭವನಗಳು ಪ್ರಗತಿಯ ಹಂತದಲ್ಲಿವೆ ಎಂದರು.
ಮಹಾಗ್ರಂಥವಾದ ರಾಮಾಯನದ ಕತೃ ಮಹರ್ಷಿ ವಾಲ್ಮೀಕಿಯವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ರತ್ನಾಕರನು ವಾಲ್ಮೀಕಿಯಾಗಿ ಬದಲಾದಂತೆ ನಮ್ಮನ್ನು ನಾವು ಸದ್ಗುಣಿಗಳಾಗಿ ಪರಿವರ್ತನೆಯಾಗಬೇಕು. ಇದು ಶಿಕ್ಷಣದಿಂದ ಮಾತ್ರ ಸಾದ್ಯವಾಗುತ್ತಿದ್ದು, ವಾಲ್ಮೀಕಿ ಜನಾಂಗದವರು ಶಿಕ್ಷಣ ಪಡೆಯುವ ಮೂಲಕ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಡರಾದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾದ್ಯ ಎಂದರು.
ಈ ಜನಾಂಗ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ಗುರುವಿಗೆ ಕಾಣಿಕೆ ನೀಡಿದ ಏಕಲವ್ಯ, ರಾಮಾಯಣದ ಷಬರಿ, ಭಕ್ತ ಪರಕಾಷ್ಟೆ ಮೇರೆದ ಬೇಡರ ಕಣ್ಣಪ್ಪ, ಮದಕರಿ ನಾಯಕ, ಸುರಪುರದ ವೆಂಕಟಪ್ಪ ನಾಯಕ, ವಿಜಯನಗರ ಸಾರ್ಮಾಜ್ಯ ನಿರ್ಮಾಪಕರಾದ ಹಕ್ಕ-ಬುಕ್ಕರು, ಸಿಂದೂರ ಲಕ್ಷ್ಮಣ ಅಲ್ಲದೇ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹಲಗಲಿಯ ಬೇಡರು ಕೂಡ ಈ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ಜನಾಂಗ ಕಾಡಿನಿಂದ ನಾಡಿಗೆ ಬಂದು ನಾಡ ನುಡಿಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ ಎಂದರು.
ಈ ಜಾಂಗಕ್ಕೆ ಸರಕಾರ ವಿಶೇಷ ಸೌಲಭ್ಯಗಳನ್ನು ನೀಡಿದ್ದು, ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ ವಧುವರರಿಗೆ ರೂ.50 ಸಾವಿರ, ಶೈಕ್ಷಣಿಕ ದೃಷ್ಟಿಯಿಂದ ಮುಂದೆ ಬರಲು ಪಿಯುಸಿ ದ್ವಿತೀಯ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ 20 ಸಾವಿರ, ಪದವಿಯಲ್ಲಿ 25 ಸಾವಿರ, ಸ್ನಾತಕೋತ್ತರದಲ್ಲಿ 30 ಸಾವಿರ ಹಾಗೂ ಪ್ರೋಬೇಷನರಿ ಕೋರ್ಸಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದವರಿಗೆ 35 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾದ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಬಸವಂತಪ್ಪ ಮೇಟಿ ಮಾತನಾಡಿ ವಾಲ್ಮೀಕಿಯವರು ಎಲ್ಲ ಜನಾಂಗಕ್ಕೆ ದಾರಿದೀಪವಾಗಿದ್ದು, ಬದುಕಿನ ಮೌಲ್ಯಗಳನ್ನು ನೀಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನಲ್ಲಿ ನಡೆಯಬೇಕೆಂದರು. ವಿಧಾನ ಪರಿಷತ್ ಸದಸ್ಯರಾದ ನಾರಾಯಣಸಾ ಭಾಂಡಗೆ ಮಾತನಾಡಿ ವಾಲ್ಮೀಕಿ ವಿರಚಿತ ರಾಮಾಯಣ ಸೂರ್ಯ ಚಂದ್ರ ಇರುವವರೆಗೂ ಅಜರಾಮರವಾಗಿದ್ದು, ಅವರ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆದಾಗ ಮಾತ್ರ ಈ ಸಮಾಜ ಸುಧಾರಣೆ ಸಾದ್ಯವೆಂದರು. ಇದೇ ಸಂದರ್ಭದಲ್ಲಿ ಪಿಯುಸಿ ಹಾಗೂ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್‍ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ವಾಯ್.ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಬ್ಬಳ್ಳಿಯ ವಾ.ಕ.ರಾ.ಸಾ.ಸಂಸ್ಥೆಯ ಅಧ್ಯಕ್ಷ ಎಂ.ಬಿ.ಸೌದಾಗರ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಎಸ್‍ಪಿ ಯಡಾ ಮಾರ್ಟಿನ್, ಜಿ.ಪಂ ಸಿಇಓ ಎಂ.ಜಿ.ಹಿರೇಮಠ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ನಗರಸಭೆ ಆಯುಕ್ತ ರುದ್ರೇಶ, ತಹಶೀಲ್ದಾರ ಚಾಮರಾಜ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಕಿ ಬಿ.ವಿ.ಚೈತ್ರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉಸ್ತುವಾರಿ ಸಚಿವರಾದ ಎಸ್.ಆರ್.ಪಾಟೀಲ ಚಾಲನೆ ನೀಡಿದರು. ಮೆರವಣಿಗೆ ತಹಶೀಲ್ದಾರ ಆವರಣದಿಂದ ಪ್ರಾರಂಭಗೊಂಡು ಹಳೆ ಆರ್.ಟಿ.ಓ ಕಛೇರಿ ಮುಖಾಂತರ ಅಂಬೇಡ್ಕರ ಭವನಕ್ಕೆ ತಲುಪಿತು. ಮೆರಣಿಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಅಲ್ಲದೇ ಪೂರ್ಣಕುಂಬ ಹೊತ್ತ ಮಹಿಳೆಯರು ಮೆರವಣಿಗೆಯ ಆಕರ್ಷ ಕೇಂದ್ರವಾಗಿದ್ದರು. ಮೆರವಣಿಗೆಯಲ್ಲಿ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು, ಸಮಾಜ ಮುಖಂಡರುಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here