ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿ: ವೀರೇಶ

0
42

ಕನ್ನಡಮ್ಮ ಸುದ್ದಿ-ಗುಳೇದಗುಡ್ಡ: ಮಕ್ಕಳು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳನ್ನು ಪಠ್ಯದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪಾಲಕರು ಹಾಗೂ ಶಿಕ್ಷಕರು ಪ್ರೇರಣೆ ನೀಡಬೇಕು. ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಮಹತ್ವ ಹೊಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರೇಶ ಜೀವರಗಿ ಹೇಳಿದರು.
ಅವರು ಸಮೀಪದ ನೀರಲಕೇರಿ ಗ್ರಾಮದಲ್ಲಿನ ಎಮ್‌.ಆರ್‌. ಗಾಣಿಗೇರ ಅಂತಾರಾಷ್ಟ್ರೀಯ ಪಬ್ಲಿಕ್‌ ಶಾಲೆಯಲ್ಲಿ ಸ್ಪಂದನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಗಳಿಂದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ಪ್ರೋತ್ಸಾಹ ದೊರೆಯುತ್ತದೆ ಎಂದರು. ಸಂಸ್ಥೆಯ ಆಡಳಿತಾಧಿಕಾರಿ ಪಿ. ಎಸ್‌. ಯರಗಲ್‌ ಮಾತನಾಡಿ, ಓದು, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಯ ವ್ಯಕ್ತಿತ್ವನ್ನು ಸುಂದರವಾಗಿ ರೂಪಿಸುತ್ತವೆ. ವಿದ್ಯಾರ್ಥಿಗಳು ಕೇವಲ ಓದಿಗಷ್ಟೇ ಗಮನ ನೀಡಿದೆ ಇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಪಿ.ಎಮ್‌. ಗಾಣಿಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಕೆ.ಎ. ಬನಹಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರನ್ನು ಸನ್ಮಾನಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪಾಲಕರು ಭಾಗವಹಿಸದ್ದರು. ಸಹನಾ ಮೋಕಾಶಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪಾಚಾರ್ಯ ಸೈಕತ್‌ ಘೋಷ ಸ್ವಾಗತಿಸಿದರು. ಶಿರಿನ್‌ ಪಠಾಣ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಗಡ್ಡಿ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಿತು.

loading...