ವಿಯೆಟ್ನಾಂ ಕಾಳುಮೆಣಸು ಆಮದು: ಹವಾಲಾ ದಂಧೆಯ ಶಂಕೆ:ಜೈ ಷಾ ವಿರುದ್ಧ ತನಿಖೆಗೆ ಆಗ್ರಹ

0
1
ಬೆಂಗಳೂರು- ವಿಯೆಟ್ನಾಂ ಕಾಳು ಮೆಣಸು ಆಮದು ವ್ಯವಹಾರದಲ್ಲಿ ಹವಾಲಾ ದಂಧೆಯ ಶಂಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಜಾರಿನಿರ್ದೇಶನಾಲಯ ಗೃಹ ಸಚಿವ ಅಮಿತ್ ಷಾ ಪುತ್ರ ಜೈಷಾ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಯೆಟ್ನಾಂನಿಂದ ಒಂದು ಕೆ.ಜಿ. ಕಾಳುಮೆಣಸಿಗೆ 500 ರೂ. ಕೊಟ್ಟು ಖರೀದಿಸಿ, ಅದನ್ನು ದೇಶದಲ್ಲಿ 300 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಎರಡು ವರ್ಷದಿಂದ ಸತತವಾಗಿ ಹೊರದೇಶದಿಂದ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 5 ಸಾವಿರ ಕೋಟಿ ರೂ. ಹವಾಲಾ ದಂಧೆಯ ಶಂಕೆ ವ್ಯಕ್ತವಾಗುತ್ತಿದೆ. ಹೊರದೇಶದಿಂದ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶದ ಕರಿಮೆಣಸು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ವಿಯೆಟ್ನಾಂನ ಕರಿಮೆಣಸನ್ನು ಯುರೋಪ್, ಅಮೆರಿಕಾ ಆಮದು ಮಾಡಿಕೊಳ್ಳದೇ ನಮ್ಮ ದೇಶದಿಂದ ಆಮದು ಮಾಡಿಕೊಳ್ಳುತ್ತಿವೆ.

ವಿಯೆಟ್ನಾಂನಿಂದ ಹೆಚ್ಚಿನ ಬೆಲೆಗೆ ಕರಿಮೆಣಸು ತಂದು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ಹಿಂದಿನ ರಹಸ್ಯ ಬಯಲಾಗಬೇಕು ಎಂದರು.
2015 ರಲ್ಲಿ ಜೈ ಷಾ ಆರಂಭಿಸಿರುವ ‘ಟೆಂಪಲ್ ಎಂಟರ್ ಪ್ರೈಸಸ್’ ಕಂಪನಿ ಕೃಷಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದು, ಈ ಹವಾಲಾ ದಂಧೆಯಲ್ಲಿ ಈ ಕಂಪನಿ ತೊಡಗಿಸಿಕೊಂಡಿದ್ದರ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಕಾಳುಮೆಣಸು ಬೆಳೆಗಾರರು ಇಡಿಗೆ ದೂರು ಸಲ್ಲಿಸಿದ್ದಾರಾದರೂ ಜಾರಿ ನಿರ್ದೇಶಾನಲಯ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜಕೀಯ ಪ್ರೇರಿತ ದಾಳಿಗಳಿಗೆ ಮಾತ್ರ ಇಡಿ ಬಳಕೆಯಾಗುತ್ತಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚಿದಂಬರಂ, ಡಿ.ಕೆ.ಶಿವಕುಮಾರ್ ಹೆಸರು ಹೇಳಿದರೆ ಮಾತ್ರ ಎಚ್ಚರಗೊಳ್ಳುತ್ತಾರೆಯೇ ವಿನಃ ಜನರ ಹಿತ ಕಾಪಾಡಲು ಅಲ್ಲ. ಕರಿಮೆಣಸು ಬೆಳೆಗಾರರ ದೂರಿನ ಬಗ್ಗೆ ತನಿಖೆ ನಡೆಸದ ಇಡಿ ಸತ್ತು ಹೋಗಿದೆ. ಈ ಸಂಸ್ಥೆಗಳು ಜನರ ನಂಬಿಕೆ ಉಳಿಸಿಕೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರಿಮೆಣಸು ಹವಾಲಾ ದಂಧೆಯ ಕಿಂಗ್ ಪಿನ್ ಅಮಿತ್ ಷಾ. ಹೀಗಾಗಿ ಇಡಿ ಅಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸಲು ಭಯಪಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸುವ ಇಡಿ, ಕರಿಮೆಣಸು ದಂಧೆಯ ಬಗ್ಗೆ ದೂರು ಕೇಳಿಬಂದರೂ ದೂರು ಏಕೆ ದಾಖಲಿಸಿಕೊಳ್ಳುತ್ತಿಲ್ಲ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.

ಸುಮಾರು 50 ಲಕ್ಷಕ್ಕೂ ಹೆಚ್ಚಿನ ಜನ ಈ ಬೆಳೆಯ ಮೇಲೆ ಅವಲಂಬಿತರಾಗಿದ್ದು, 70 ಸಾವಿರ ಟನ್ ಇದ್ದ ವಹಿವಾಟು ಇದೀಗ 50 ಸಾವಿರಕ್ಕೆ ಕುಸಿದಿದೆ. ಕೃಷಿಯನ್ನು ನಾಶ ಮಾಡಿದರೆ ಈ ದೇಶಕ್ಕೆ ಉಳಿಗಾಲವೇ ಇಲ್ಲ. ಕಾಳುಮೆಣಸುಗಾರರ ಬದುಕಿನ ಮೇಲೆ ಕೇಂದ್ರ ಸರ್ಕಾರ ಬರೆ ಎಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ದೇಶದ ವಿಜ್ಞಾನಿಗಳ ಮೇಲೂ ಒತ್ತಡ ಹೇರುತ್ತಿದ್ದು, ಅವರ ಪಾಡಿಗೆ ಅವರು ಕೆಲಸ ಮಾಡಲು ಬಿಡುತ್ತಿಲ್ಲ. ಚಂದ್ರಯಾನ-2 ವಿಕ್ರಂ ಲ್ಯಾಂಡರ್ ಚಂದ್ರನೊಂದಿಗೆ ಸಂಪರ್ಕ ಸಾಧಿಸುವಾಗಲೂ ಮೋದಿ ಮಾಡಿದ್ದು ಹೀಗೆ. ಇಸ್ರೋ ವಿಜ್ಞಾನಿಗಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕಿತ್ತು. ವಿಕ್ರಂ ಲ್ಯಾಂಡರ್ ಇಳಿಯುವ ಸಂದರ್ಭದಲ್ಲಿ ಇಸ್ರೋಗೆ ಮೋದಿ ಭೇಟಿ ನೀಡುವ ಅಗತ್ಯವೇನಿತ್ತು. ಆ ನಂತರವೂ ಅವರು ವಿಜ್ಞಾನಿಗಳನ್ನು ಅಭಿನಂದಿಸಬಹುದಿತ್ತು. ಅಭಿನಂದನೆ ನೆಪದಲ್ಲಿ ವಿಜ್ಞಾನಿಗಳ ಮೇಲೆ ಒತ್ತಡ ಹೇರಿದ್ದು ಸರಿಯಲ್ಲ ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

loading...