ವಿಶ್ವಕಪ್: ಆರಂಭಿಕರ ಮೇಲೆ ಬೆಟ್ಟದಷ್ಟು ನಿರೀಕ್ಷೆ

0
4

ನವದೆಹಲಿ:- ಇಂಗ್ಲೆಂಡ್ ನಲ್ಲಿ ಸ್ವಿಂಗ್ ಹಾಗೂ ಬೌನ್ಸ್ ಪಿಚ್ ಗಳಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಕಣಕ್ಕೆ ಇಳಿಯಲಿದ್ದು, ಭಾರತದ ಆರಂಭಿಕರ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳು ಇವೆ

ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ಸದ್ಯ ವಿಶ್ವದ ಉತ್ತಮ ಆರಂಭಿಕ ಜೋಡಿಗಳಲ್ಲಿ ಒಂದು. ಈ ಇಬ್ಬರು ಲಯ ಕಂಡುಕೊಂಡಿದ್ದು ಎದುರಾಳಿಗಳ ನಿದ್ದೆಗೆಡಿಸಿದೆ. ಈ ಜೋಡಿ ಬಹು ವರ್ಷಗಳಿಂದ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದು, ಒಬ್ಬರ ಆಟ ಇನ್ನೊಬ್ಬರು ಚೆನ್ನಾಗಿ ಬಲ್ಲರು.

ಭಾರತ ತಂಡದ ಉಪನಾಯಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ 264 ರನ್ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್ ನಲ್ಲಿ ಮೂರು ದ್ವಿಶತಕ ಬಾರಿಸಿದ ಹೆಗ್ಗಳಿಕೆ ಹಿಟ್ ಮ್ಯಾನ್ ಅವರದ್ದು. ಇವರು 206 ಪಂದ್ಯಗಳಲ್ಲಿ 8010 ರನ್ ಸಿಡಿಸಿದ್ದು, 22 ಶತಕ, 41 ಅರ್ಧಶತಕ ಸೇರಿವೆ. 22 ಶತಕಗಳಲ್ಲಿ 13 ಶತಕಗಳನ್ನು ರೋಹಿತ್ ವಿದೇಶಿ ನೆಲದಲ್ಲಿಯೇ ಬಾರಿಸಿರುವುದು ವಿಶೇಷ. ಇಂಗ್ಲೆಂಡ್ ನಲ್ಲಿ ರೋಹಿತ್ ಎರಡು ಶತಕ ಬಾರಿಸಿದ್ದಾರೆ.

ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ 128 ಏಕದಿನ ಪಂದ್ಯಗಳಲ್ಲಿ 16 ಶತಕ, 27 ಅರ್ಧಶತಕ ಬಾರಿಸಿದ್ದು 5355 ರನ್ ಕಲೆ ಹಾಕಿದ್ದಾರೆ. ಶಿಖರ್ ಅವರ 16 ಶತಕಗಳಲ್ಲಿ 11 ಶತಕಗಳು ವಿದೇಶಿ ನೆಲದಲ್ಲೇ ದಾಖಲಾಗಿವೆ. ಇಂಗ್ಲೆಂಡ್ ನಲ್ಲಿ ಇವರು ಮೂರು ಬಾರಿ ಮೂರಂಕಿ ಮುಟ್ಟಿ ಸಾಧನೆ ಮಾಡಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ಐಪಿಎಲ್ ನಲ್ಲಿ ಉಭಯ ಆರಂಭಿಕರು ಚೇತೋಹಾರಿ ಆಟ ಆಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್ ಮಾಡಿದ ಶಿಖರ್ 16 ಪಂದ್ಯಗಳಿಂದ 521 ರನ್ ಬಾರಿಸಿದ್ದಾರೆ. ಇವರ ಅಮೋಘ ಪ್ರದರ್ಶನದ ಬಲದಿಂದ ಡೆಲ್ಲಿ ತಂಡ ಆರು ವರ್ಷಗಳ ಬಳಿಕ ಪ್ಲೇ ಆಫ್ ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿದೆ.

ಇನ್ನು ಪ್ರಸಕ್ತ ಸಾಲಿನ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ 15 ಪಂದ್ಯಗಳಿಂದ 405 ರನ್ ಸಿಡಿಸಿದ್ದಾರೆ. ರನ್ ಕಲೆ ಹಾಕುವಲ್ಲಿ ರೋಹಿತ್ ಕೊಂಚ ಹಿನ್ನಡೆ ಅನುಭವಿಸಿದರೂ, ಇಂಗ್ಲೆಂಡ್ ನಲ್ಲಿ ಅಬ್ಬರಿಸಲು ರೆಡಿ ಆಗಿದ್ದಾರೆ.

ಮೂರನೇ ಆರಂಭಿಕರಾಗಿ ಕಾಣಿಸಿಕೊಳ್ಳುವ ಕೆ.ಎಲ್ ರಾಹುಲ್ ಐಪಿಎಲ್ ನಲ್ಲಿ 14 ಪಂದ್ಯಗಳಿಂದ 593 ರನ್ ಸಿಡಿಸಿದ್ದು, ಗರಿಷ್ಠ ರನ್ ಸಾಧಕರ ಪಟ್ಟಿಯಲ್ಲಿ ಡೇವಿಡ್ ವಾರ್ನರ್ ನಂತರದ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್ ಇತಿಹಾಸವನ್ನು ನೋಡಿದರೆ, ರೋಹಿತ್ ಹಾಗೂ ಶಿಖರ್ ಉತ್ತಮ ಆರಂಭಿಕರಾಗಿದ್ದಾರೆ. ಈ ಇಬ್ಬರು 101 ಏಕದಿನ ಪಂದ್ಯಗಳಿಂದ 45.41 ಸರಸಾರಿಯಲ್ಲಿ 4541 ರನ್ ಕಲೆಹಾಕಿದ್ದು, 15 ಶತಕ ಹಾಗೂ 13 ಅರ್ಧಶತಕಗಳ ಕಾಣಿಕೆಯನ್ನು ತಂಡಕ್ಕೆ ನೀಡಿದ್ದಾರೆ. ಈ ಇಬ್ಬರು ಆರಂಭಿಕರಾಗಿ ಕಣಕ್ಕಿಳಿಯುತ್ತಾ ಏಳು ವರ್ಷ ಕಳೆದಿವೆ. ಈ ಬಾರಿ ಈ ಇಬ್ಬರು ಆಟಗಾರರ ಬಳಿ ಭಾರತಕ್ಕೆ ಮತ್ತೊಮ್ಮೆ ವಿಶ್ವಕಪ್ ಮುಕುಟ ತೊಡಿಸುವ ಸುವರ್ಣ ಅವಕಾಶ ಇದೆ. ಇಂಗ್ಲೆಂಡ್ ಪಿಚ್ ಗಳಲ್ಲಿ ಉತ್ತಮ ಆರಂಭದ ಅನಿವಾರ್ಯತೆ ಇದೆ.

loading...