ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಪಂತ್ ಆಸೆಗೆ ಪೆಟ್ಟು

0
3

ನವದೆಹಲಿ:- ಭಾರತದ ಆಯ್ಕೆ ಸಮಿತಿ, ಯುವ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಜುಲೈ 11 ರಿಂದ ವಿಂಡೀಸ್ ಪ್ರವಾಸ ಬೆಳೆಸಲಿರುವ ಭಾರತ ‘ಎ’ ತಂಡದಲ್ಲಿ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದು, ಈ ಮೂಲಕ ರಿಷಭ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಆಸೆ ಕಮರಿದಂತಾಗಿದೆ.

ಭಾರತ ವಿಶ್ವಕಪ್ ತಂಡದ ಸದಸ್ಯ ಕೇದಾರ್ ಜಾದವ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಐಪಿಎಲ್ ಆಡುವ ವೇಳೆ ಕೇದಾರ್ ಜಾದವ್ ಅವರಿಗೆ ಗಾಯವಾಗಿತ್ತು. ಇದರಿಂದ ಅವರು ಐಪಿಎಲ್ ನ ಉಳಿದ ಪಂದ್ಯಗಳಿಂದ ದೂರ ಉಳಿದಿದ್ದರು. ಆಯ್ಕೆ ಸಮಿತಿ ಮೇ 23ರವರೆಗೆ ಜಾದವ್ ಫಿಟ್ನೆಸ್ ಬಗ್ಗೆ ಕಾಯಲಿದೆ. ಐಸಿಸಿ ವಿಶ್ವಕಪ್ ಗೆ ಮೇ 23 ರಂದು ತಂಡಗಳು ತಮ್ಮ ಆಟಗಾರರ ಹೆಸರುಗಳನ್ನು ಅಂತಿಮಗೊಳಿಸಬೇಕಿದೆ.

ಕೇದಾರ್ ಜಾದವ್ ಅವರ ಫಿಟ್ನೆಸ್ ಬಗ್ಗೆ ಮೇ 23 ರ ವರೆಗೆ ಕಾಯಲು ಬಿಸಿಸಿಐ ತೀರ್ಮಾನಿಸಿದೆ. ಆಯ್ಕೆ ಸಮಿತಿ ವಿಶ್ವಕಪ್ ತಂಡಕ್ಕಾಗಿ ರಿಷಭ್ ಪಂತ್, ಅಂಬಟಿ ರಾಯುಡು, ನವದೀಪ್ ಸೈನಿ ಮೂರು ಪರ್ಯಾಯ ಆಟಗಾರರನ್ನು ಕಾಯ್ದಿರಿಸಿದೆ.

ವಿಂಡೀಸ್ ಪ್ರವಾಸ ಬೆಳೆಸಲಿರುವ ಭಾರತ ‘ಎ’ ತಂಡದಲ್ಲಿ ಪಂತ್ ಅವರಿಗೆ ಏಕದಿನ ವಿಕೆಟ್ ಕೀಪರ್ ಆಗಿ ಆಯ್ಕೆ ಸಮಿತಿ ಸ್ಥಾನ ನೀಡಿದೆ. ತಂಡ ಈ ಪ್ರವಾಸದ ವೇಳೆ ಜು.11, 14, 16, 19 ಹಾಗೂ 21 ರಂದು ಏಕದಿನ ಪಂದ್ಯಗಳನ್ನು ಆಡಲಿದೆ. ವಿಶ್ವಕಪ್ ಫೈನಲ್ ಜುಲೈ 14 ರಂದು ನಡೆಯಲಿದೆ. ಇದರಿಂದ ಪಂತ್ ಅವರಿಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸುವ ಆಸೆ ದೂರ ಸರೆದಿದೆ.

loading...