ವಿಶ್ವವಿದ್ಯಾಲಯದ ಸೌಲಭ್ಯ ಬಳಸಿಕೊಂಡು ಅಧ್ಯಯನ ಮಾಡಿ: ಹೊಸಮನಿ

0
29

ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಣಿ ಚನ್ನಮ್ಮ ವಿಶ್ವದ್ಯಾಲಯದಲ್ಲಿರುವ ಸೌಲಭ್ಯಗಳನ್ನು ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ತಮ್ಮ ಅಧ್ಯಯನಕ್ಕೆ ಉಪಯೋಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಗ್ರಂಥಾಲಯ ಸೇರಿದಂತೆ ಕಲಿಕೆಗೆ ಪೂರಕವಾಗುವ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಬಿ. ಹೊಸಮನಿ ಸಲಹೆ ನೀಡಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬ್ರಹ್ಮಪುತ್ರ ಮತ್ತು ಮುಖ್ಯ ಕಟ್ಟಡದಲ್ಲಿ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಶುದ್ಧ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆನರಾ ಬ್ಯಾಂಕಿನ ಕಾರ್ಯ ಶ್ಲಾಘನೀಯವಾದದ್ದು. ವಿದ್ಯಾರ್ಥಿಗಳ ಅಧ್ಯಯನದ ಹಿತದೃಷ್ಠಿಯಿಂದ ಇನ್ನು ಅನೇಕ ಯೋಜನೆಗಳನ್ನು ರೂಪಿಸುವ ಯೋಚನೆಯಿದೆ. ವಸತಿನಿಲಯಗಳಲ್ಲಿ ಅನೇಕ ಸುಧಾರಣಾ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದ್ದು, ವಸತಿ ನಿಲಯದ ಭೋಜನಾ ಕೊಠಡಿಯನ್ನು ಉನ್ನತಿಕರಿಸಲಾಗಿದೆ ಎಂದರು.
ಕೆನರಾ ಬ್ಯಾಂಕಿನ ವಿಭಾಗೀಯ ಜನರಲ್ ಮ್ಯಾನೇಜರ ಎಸ್.ಎಸ್. ಬಿರಾದಾರ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ನಮ್ಮ ಬ್ಯಾಂಕಿನ ವತಿಯಿಂದ ಅಳವಡಿಸಿರುವ ಶುದ್ಧ ನೀರಿನ ಘಟಕಗಳ ಯೋಜನೆ ಇದು ಚಿಕ್ಕ ಪ್ರಯತ್ನವಾಗಿದೆ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬೇರೆ ಬೇರೆ ಯೋಜನೆಗಳನ್ನು ಮಾಡುವ ಪ್ರಯತ್ನದಲ್ಲಿದ್ದೇವೆ. ರಾಣಿ ಚನ್ನಮ್ಮ ವಿಶ್ವದ್ಯಾಲಯದ ಸಹಭಾಗಿತ್ವದಲ್ಲಿ ಬಂಬರಗಾ ಮತ್ತು ಭೂತರಾಮನಹಟ್ಟಿ ಹಳ್ಳಿಗಳಲ್ಲಿ ಅನೇಕ ವಿಸ್ತರಣಾ ಚಟುವಟಿಕೆಗಳನ್ನು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಹಮ್ಮಿಕೊಳ್ಳಲು ಕೆನರಾಬ್ಯಾಂಕ ಉತ್ಸುಕವಾಗಿದೆ. ಇದಲ್ಲದೆ ಬ್ಯಾಂಕಿಂಗ್ ವಲಯದಲ್ಲಿ ಹಲವಾರು ಹುದ್ದೆಗಳು ಲಭ್ಯವಿದ್ದು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಬ್ಯಾಂಕಿನ ಪರೀಕ್ಷೆಯ ತರಬೇತಿ ನೀಡಲು ತಾವು ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ. ಸಿದ್ದು ಆಲಗೂರ, ಮೌಲ್ಯಮಾಪನ ಕುಲಸಚಿವ ಡಾ. ರಂಗರಾಜ ವನದುರ್ಗ, ಸಿಂಡಿಕೇಟ ಸದಸ್ಯರಾದ ಡಾ. ಸರಜೂ ಕಾಟ್ಕರ್, ಸಂದೀಪ ಬೆಳಗಲಿ ಮತ್ತು ಕೆನರಾ ಬ್ಯಾಂಕಿನ ಅಧಿಕಾರಿಗಳಾದ ಎಸ್. ಕೆ. ಕುಲಕರ್ಣಿ, ಪರ್ವತಿಕರ, ಎಲಿಗಾರ, ಡಾ. ಪ್ರಕಾಶ ಕಟ್ಟಿಮನಿ ಮತ್ತು ಗೀತಾ ಮಾಳಿ ಮತ್ತಿತರರು ಉಪಸ್ಥಿತರಿದ್ದರು.

loading...