ವೇದಿಕೆಗಾಗಿ ಪ್ರಯತ್ನ

0
22

ಕಳೆದ ತಿಂಗಳು ನಡೆದ  ವಿಧಾನ ಸಭೆಯ ಚುನಾವಣೆಗಿಂತ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಹಾಗೂ ಮಾಜಿ ಸಚಿವ ಶ್ರೀರಾಮಲು ಪಕ್ಷದಿಂದ ಹೊರಗೆ ಹೋಗಿ  ತಮ್ಮದೇ ಆದ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಂಡು ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿ ಭಾಜಪ ಮತಗಳನ್ನು ವಿಭಜಿಸಿದ್ದರಿಂದ ಮೂರೂ ಪಕ್ಷಗಳು ಹೀನಾಯವಾದ ಸೋಲನ್ನು ಅನುಭವಿಸಿದ್ದವು ಇದೇ ರೀತಿ ಮುಂದಿನ ವರ್ಷ ನಡೆಯಲಿರುವ ಲೋಕಸಭೆಯ ಚುನಾವಣೆಯಲ್ಲಿ ಪ್ರತ್ಯೇಕವಾಗಿ  ಸ್ಪರ್ಧೆ ಮಾಡಿದರೆ ಸೋಲು ಅನುಭವಿಸುವದು ಖಚಿತವೆಂದು ಖಾತ್ರಿ ಪಡಿಸಿಕೊಂಡಿರುವ  ಭಾರತೀಯ  ಜನತಾ ಪಕ್ಷದ ರಾಜ್ಯ ನಾಯಕರು ಈಗ ಯಡಿಯೂರಪ್ಪ ಹಾಗೂ ಶ್ರೀ ರಾಮಲು ಅವರನ್ನು  ಪಕ್ಷಕ್ಕೆ ಮರಳಿ ಕರೆದುಕೊಂಡು ಬರುವ ನಿಟ್ಟಿನಲ್ಲಿ ಚುರುಕಿನ ಪ್ರಯತ್ನಗಳನ್ನು ಮಾಡತೊಡಗಿದ್ದಾರೆ. ಅವರಿಬ್ಬರೂ ಮರಳಿ ಪಕ್ಷಕ್ಕೆ ಬರುವಂತೆ ವೇದಿಕೆ ಸಿದ್ದ ಪಡಿಸುವ ಕಾರ್ಯ ಈಗ ನಡೆಯತೊಡಗಿದೆ.

            ಗುರುವಾರ ನಡೆದ ಪಕ್ಷದ ಉನ್ನರ ಮಟ್ಟದ ಸಭೆಯಲ್ಲಿ ಈ ಕುರಿತು ಸಮಗ್ರವಾಗಿ ಚರ್ಚೆ ಮಾಡಲಾಗಿದೆ. ಹಿರಿಯ ನಾಯಕ ಡಿ. ಬಿ.ಚಂದ್ರೇಗೌಡ ಅವರ ನೇತೃತ್ವದಲ್ಲಿ ಸಮಾನ ಮನಸ್ಕರ ತಂಡವನ್ನು ರಚಿಸಲಾಗಿದ್ದು ಈ ಕಾರ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಪ್ರಲ್ಲಾದ ಜೋಶಿ ಪೂರ್ಣ ಪ್ರಮಾಣದ ಸಹಕಾರವನ್ನು ನೀಡತೊಡಗಿದ್ದಾರೆ.  ಹೀಗಾಗಿ ಅನಂತಕುಮಾರ ಬಣಕ್ಕೆ ಮುಖಭಂಗವಾದಂತೆ ಆಗಿದೆ.

            ಒಂದು ಕಡೆಗೆ ಭಾಜಪ ನಾಯಕರು ಈ ಬಗೆಯ ಚಿಂತನೆಗಳನ್ನು ನಡೆಸುತ್ತಿದ್ದರೆ ಯಡಿಯೂರಪ್ಪ ಮಾತ್ರ ಗೊಂದಲದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ ತೃತೀಯ ರಂಗ ಸ್ಥಾಪನೆ ಮಾಡುವ ವಿಷಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೆ ರಹಸ್ಯ ಮಾತುಕತೆ ನಡೆಸಿರುವ ಯಡಿಯೂರಪ್ಪ  ಲೋಕಸಭೆಯ ಚುನಾವಣೆಯಲ್ಲಿ ತೃತೀಯ ರಂಗ ರಚಿಸಿಕೊಳ್ಳಬೇಕೆ ಅಥವಾ ಭಾಜಪಕ್ಕೆ ಮರಳಿ ಹೋಗಬೇಕೆ ಎಂಬ ಬಗ್ಗೆ ಗೊಂದಲದಲ್ಲಿ ಸಿಲುಕಿದ್ದು ಯಾವ ನಿರ್ಧಾರವನ್ನು  ಮಾಡಬೇಕು ಎಂಬುದನ್ನು ಇದುವರೆಗೆ ನಿರ್ಧರಿಸಿರುವುದಿಲ್ಲ.  ಶ್ರೀರಾಮಲು ಸಹ ಅದೇ ರೀತಿಯ ಗೊಂದಲದಲ್ಲಿ ಸಿಲುಕಿದ್ದಾರೆ. ಮೋದಿ ಅವರಿಗೆ ಭಾರತೀಯ ಜನತಾ ಪಕ್ಷದಲ್ಲಿ  ಉನ್ನತ ಸ್ಥಾನ ದೊರೆತಿರುವುದರಿಂದ ಯಡಿಯೂರಪ್ಪ ಮರಳಿ ಕಮಲದ ಮನೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ. ಲೋಕಸಭೆಯ ಚುನಾವಣೆಗೆ ಇನ್ನೂ ಒಂದು ವರ್ಷ ಕಾಲಾವಕಾಶ ಇರುವುದರಿಂದ ಮುಂದಿನ ಕೆಲವು ತಿಂಗಳಲ್ಲಿ ಈ ಬಗ್ಗೆ ಒಂದು ಸ್ಪಷ್ಟ ಚಿತ್ರ ಉಂಟಾಗುವುದಕ್ಕೆ ಸಾಧ್ಯವಾಗುತ್ತದೆ.

            ಯಡಿಯೂರಪ್ಪ ಮತ್ತು ಶ್ರೀರಾಮಲು ಭಾರತೀಯ ಜನತಾ ಪಕ್ಷದವರೇ ಆಗಿರುವುದರಿಂದ ಅವರ ಪಕ್ಷಗಳು ಕಳೆದ ತಿಂಗಳು ನಡೆದ ವಿಧಾನ ಸಭೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮತಗಳನ್ನೇ ಕಿತ್ತುಕೊಂಡಿದ್ದವು. ಇದರ ಪರಿಣಾಮವಾಗಿ ಭಾಜಪ ಮತ ಬ್ಯಾಂಕು ಒಡೆದು ಹೋಗಿ ಮೂರೂ ಪಕ್ಷಗಳು ತೀವ್ರ ಮುಖಭಂಗವನ್ನು ಎದುರಿಸಿದ್ದವು. ಇದರ ಲಾಭ ಪಡೆದು ಜೆಡಿಎಸ್ ಪಕ್ಷ ಎರಡನೇ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿತ್ತು. ಆದ್ದರಿಂದ ಲೋಕಸಭೆಯ ಚುನಾವಣೆಯಲ್ಲಿ ಆ ರೀತಿ ಆಗಬಾರದು ಎಂಬ ಕಾರಣದಿಂದ ಈಗ ಹೊಸ ಹೊಸ ಪ್ರಯತ್ನಗಳು ನಡೆಯತೊಡಗಿದೆ. ಯಾವ ಪ್ರಯತ್ನ ಎಷ್ಟರ ಮಟ್ಟಿಗೆ ಯಶ ಪಡೆಯುತ್ತದೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು  ಹೊಸ ಚಿತ್ರವನ್ನು ರಾಜ್ಯದ ರಾಜಕೀಯದಲ್ಲಿ ಸೃಷ್ಠಿಸುವ ಸಾಧ್ಯತೆ ಇವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ. ಏನೇ ಕಸರತ್ತು ಮಾಡಿದರೂ ರಜಕೀಯದಲ್ಲಿ ಏನ ಬೇಕಾದರೂ ಆಗಬಹುದು  ಆ ಪಕ್ಷಕ್ಕೆ ಸೇರುವದಿಲ್ಲ ಎಂದು ಹೇಳಿ ನಂತರ ಆ ಪಕ್ಷದ ಬಾಲ ಹಿಡಿದು ಹೋಗಿದವರ ಸಂಖ್ಯೆ ಇದೆ.

loading...

LEAVE A REPLY

Please enter your comment!
Please enter your name here