ವ್ಯವಹಾರದಲ್ಲಿ ನಷ್ಟ ಶಂಕೆ: ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ

0
1

ಗುಂಡ್ಲುಪೇಟೆ- ವ್ಯವಹಾರದಲ್ಲಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಕಳೆದ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಓಂಪ್ರಕಾಶ್ (37), ಪತ್ನಿ ನಿಖಿತಾ, ಪುತ್ರ ಆರ್ಯ ಕೃಷ್ಣ, ತಾಯಿ ಹೇಮಲತಾ, ತಂದೆ ನಾಗರಾಜ ಭಟ್ಟಾಚಾರ್ಯ ಆತ್ಮಹತ್ಯೆ ಮಾಡಿಕೊಂಡವರು. ಐವರೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಯಾರು ಗುಂಡಿಕ್ಕಿದ್ದಾರೆ ಎಂಬುದು ಸ್ಪಷ್ಟಗೊಂಡಿಲ್ಲ.
ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾದ ಓಂಪ್ರಕಾಶ್ ಡಾಟಾ ಬೇಸ್, ಅನಿಮೇಷನ್ ಕಂಪನಿ ನಡೆಸುತ್ತಿದ್ದರು. ವ್ಯವಹಾರದಲ್ಲಿ ಕೋಟ್ಯಂತರ ರೂ. ನಷ್ಟವಾಗಿತ್ತು. ಬಳಿಕ ರಿಯಲ್ ಎಸ್ಟೇಟ್ ಉದ್ಯಮವನ್ನೂ ನಡೆಸುತ್ತಿದ್ದರು. ಅದರಲ್ಲೂ ನಷ್ಟವಾಗಿತ್ತು ಎನ್ನಲಾಗಿದೆ.
ಮಧ್ಯರಾತ್ರಿ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದ ಓಂ ಪ್ರಕಾಶ್, ನಾನು ಜೀವನದಲ್ಲಿ ಸೋತಿದ್ದೇನೆ, ನಂಬಿದವರು ಕೈಕೊಟ್ಟಿದ್ದಾರೆ, ಗುಂಡ್ಲುಪೇಟೆ ಬಳಿ ಕಾರು ನಿಲ್ಲಿಸಿದ್ದೇವೆ. ಅದನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದ್ದರು.

ಇಲ್ಲಿನ ನಂದಿ ಲಾಡ್ಜ್​ನಲ್ಲಿ ಕೊಠಡಿ ಕಾಯ್ದಿರಿಸಿಕೊಂಡಿದ್ದ ಓಂಪ್ರಕಾಶ್​ ಕುಟುಂಬ ರಾತ್ರಿ ಅಲ್ಲಿಯೇ ಉಳಿದುಕೊಂಡಿತ್ತು. ಇಡೀ ಕುಟುಂಬ ರಾತ್ರಿ ಗುಂಡ್ಲುಪೇಟೆ ಹೊರವಲಯದಲ್ಲಿರುವ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರ ಗುರು ಅವರ ಸಂಬಂಧಿಕರಿಗೆ ಸೇರಿದ ಜಮೀನಿನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

loading...