ಶರಣರ ದಾಸರ ಸಾಹಿತ್ಯಗಳು ನಿರಂತರವಾಗಿ ಉಳಿಯುತ್ತವೆ: ಪಾಟೀಲ

0
15

ಮುಂಡಗೋಡ: ದಾಸ ಸಾಹಿತ್ಯ ಪ್ರಾಮುಖ್ಯವಾದುದು. ಕನಕ ಒಬ್ಬ ಮಹಾನ್‌ ವ್ಯಕ್ತಿ. ಶರಣರ ದಾಸರ ಸಾಹಿತ್ಯಗಳು ಸೂರ್ಯ ಚಂದ್ರ ಇರುವವರೆಗೂ ಈ ಭೂಮಿಯ ಮೇಲೆ ನಿರಂತರವಾಗಿ ಉಳಿಯುತ್ತವೆ. ಮುಂದೆ ಗುರಿ ಹಿಂದೆ ಗುರು ಇದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಜಿ.ಪಂ. ಸದಸ್ಯ ಎಲ್‌.ಟಿ. ಪಾಟೀಲ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಟೌನ್‌ ಹಾಲ್‌ನಲ್ಲಿ ಜಿಲ್ಲಾಡಳಿತ ಉತ್ತರ ಕನ್ನಡ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ 531ನೇ ಭಕ್ತ ಕನಕದಾಸ ಹಾಗೂ ಮಹಾಯೋಗಿ ವೇಮನ ಜಯಂತ್ಯುತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಛಲದಿಂದ ಕನಕ ಒಬ್ಬ ಶೇಷ್ಠ ದಾಸರಾದರು. 84ಲಕ್ಷ ಜೀವರಾಶಿಯಲ್ಲಿ ಮಾನವ ಜಾತಿ ಶ್ರೇಷ್ಠ. ಮಾನವನ ಹುಟ್ಟು ಆಕಸ್ಮಿಕ ಸಾವು ನಿಶ್ಚಿತ ಇವೆರಡರ ನಡುವೆ ನಾವು ಸಾಧಿಸಿದ್ದು ಶಾಶ್ವತ ಎಂದರು.
ಶಿರಸಿಯ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮಾತನಾಡಿ ಅಗಾಧ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಶಾಂತಿ, ನೆಮ್ಮದಿ ಮತ್ತು ತಾಳ್ಮೆಯಿಂದ ನಮ್ಮ ಜನರು ಬದುಕಬೇಕಾದರೆ ದಾಸ ಶರಣರ ಚಿಂತನೆಗಳು, ತತ್ವಗಳ ಕೊಡುಗೆಯೇ ಕಾರಣ ಎನ್ನಬಹುದು. ಅವು ನಮ್ಮ ನಿಮ್ಮ ರಕ್ತದಲ್ಲಿ ಹರಿಯುತ್ತಿವೆ ಎಂದು ಹೇಳಿದರು. ಕರ್ನಾಟಕ ಕಂಡ ಮತ್ತು ಕನ್ನಡ ನಾಡಿನ ಜನತೆಯ ಜೀವನವನ್ನು ಪ್ರಭಾವಿಸಿದ ಇಬ್ಬರು ದಾರ್ಶನಿಕರು. ಕಳೆದ 5000ವರ್ಷಗಳ ಇತಿಹಾಸವನ್ನು ನೋಡಿದರೆ ಬುದ್ಧ, ಮಹಾವೀರ, ಬಸವಣ್ಣ, ಶಂಕರಾಚಾರ್ಯ, ಕನಕದಾಸರು, ಪುರಂದರದಾಸರು, ವಾದಿರಾಜರು, ಈ ನೆಲದಲ್ಲಿ ಹುಟ್ಟಿ ತಮ್ಮ ಚಿಂತನೆಗಳನ್ನು ಪ್ರಸ್ತುತಪಡಿಸಿ ಬದುಕಿ ಬಾಳಿ ಹೋಗಿದ್ದಾರೆ. ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ದಾರ್ಶನಿಕರು ಬಂದು ಹೋಗಿಲ್ಲ. ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಮನುಷ್ಯನಿಂದಲೇ ಪ್ರಪಂಚಕ್ಕೆ ಕೇಡು ಬರುತ್ತದೆಯೇ ಹೊರತು ಪ್ರಾಣಿ ಪಕ್ಷಿಗಳಿಂದಲ್ಲ. ನಾವು ನಮ್ಮ ಜೀವನದಲ್ಲಿ ಸಾಧ್ಯವಾದಷ್ಟು ಚಿಂತನೆಗಳನ್ನು ರೂಪಿಸಿಕೊಳ್ಳುವ ಮೂಲಕ ನಿಜವಾದ ನಮನವನ್ನು ಅವರಿಗೆ ಸಲ್ಲಿಸಬೇಕು ಎಂದು ಹೇಳಿದರು. ಶಿಕ್ಷಕ ದಯಾನಂದ ನಾಯ್ಕ ಉಪನ್ಯಾಸ ನೀಡಿ ವೇಮನರು ಆಂಧ್ರದ ಕಡಪ ಜಿಲ್ಲೆಯ ಕುಮಾರಗಿರಿಯಲ್ಲಿ ಜನಿಸಿದರು. ಜನನದಿಂದಲೇ ಇವರಿಗೆ ತಂದೆ-ತಾಯಿ, ಬಂಧು ಬಳಗದಿಂದ ದೊರೆಯುವ ಪ್ರೀತಿ ದೊರೆಯಲಿಲ್ಲ. ಬಾಲ್ಯದಲ್ಲಿಯೇ ದುಶ್ಚಟಗಳ ದಾಸನಾಗಿ ಎಲ್ಲರಿಂದ ಹೀಯಾಳಿಸಿಕೊಂಡ ಬದುಕಿದ ವ್ಯಕ್ತಿ. ಭೋಗ ಜೀವನಕ್ಕೆ ಅಂಟಿಕೊಂಡವರಾಗಿರುತ್ತಾರೆ. ಪರಸ್ತ್ರೀಯರ ಸಂಗಕ್ಕೆ ತೊಡಗಿಸಿಕೊಳ್ಳುತ್ತಾರೆ. ಆದರೆ ಸಕಾಲಕ್ಕೆ ಅತ್ತಿಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಉಪದೇಶದ ಜ್ಞಾನೋದಯದಿಂದ ವೈರಾಗಿಯಾಗಿ ತಾಯಿಯ ಗರ್ಭದಿಂದ ಬರುವಾಗಲೂ ವಸ್ತ್ರವಿಲ್ಲ. ತುದಿಗೆ ಹೋಗುವಾಗಲೂ ವಸ್ತ್ರವಿಲ್ಲ. ನಡುವೆ ಮಾತ್ರ ಏಕೆ ಈ ಉಡುಗೆ ಎಂದು ತಮ್ಮ ಜೀವಮಾನವೆಲ್ಲ ವಸ್ತ್ರವನ್ನೇ ತೊಡದೇ ವೈರಾಗಿಯಾಗಿ ಸತ್ಯದ ಅನ್ವೇಷಣೆಗೆ ತೊಡಗುತ್ತಾರೆ. ಅವರು ಕಂಡುಕೊಂಡ ತತ್ವದರ್ಶನವನ್ನು 146ಪದ್ಯಗಳನ್ನು ಒಳಗೊಂಡ ವೇಮನ ಶತಕ ಎಂಬ ಶತಕದಲ್ಲಿ ನಾವು ನೋಡಬಹುದಾಗಿದೆ. ತೆಲುಗಿನಿಂದ ಕನ್ನಡಕ್ಕೂ ಕೂಡ ಭಾಷಾಂತರ ಮಾಡಲಾಗಿದೆ. ಕನಕದಾಸರ ಆದರ್ಶ ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ. ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ? ಎಂದಿದ್ದಾರೆ ಎಂದರು. ತಾ.ಪಂ. ಅಧ್ಯಕ್ಷೆ ದಾಕ್ಷಾಯಣಿ ಸುರಗಿಮಠ ಅಧ್ಯಕ್ಷತೆ ವಹಿಸಿದ್ದರು, ಜಿ.ಪಂ.
ಸದಸ್ಯೆ ಜಯಮ್ಮ ಹಿರೇಹಳ್ಳಿ, ಕುರುಬರ ಸಮಾಜದ ಪ್ರಕಾಶ ಹುದ್ಲಮನಿ, ಶಿವಾನಂದ ಕುರುಬರ ಇದ್ದರು. ತಹಸೀಲ್ದಾರ ಅಶೋಕ ಗುರಾಣಿ ಸ್ವಾಗತಿಸಿದರು. ಬಾಲಚಂದ್ರ ಹೆಗಡೆ ನಿರೂಪಿಸಿದರು. ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಕೃಷ್ಣ ವಂದಿಸಿದರು.

loading...