ಶಳ್ಳಗಿಯಲ್ಲಿ ಕುಡಿಯುವ ನೀರಿನ ಅಭಾವ : ಸಚಿವರಿಗೆ ದೂರು

0
48

ತಾಳಿಕೋಟೆ 11,  ಶಳ್ಳಗಿ ಗ್ರಾಮದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರರಿಗೆ ಕುಡಿಯುವ ನೀರಿನ ಅಭಾವ ತಲೆದೋರಿದ್ದರೂ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಲು ಯಾವ ಅಧಿಕಾರಿಗಳೂ ಮುಂದೆ ಬಂದಿಲ್ಲಾ ಇದರಿಂದ ಗ್ರಾಮಸ್ಥರರಿಗೆ ಬಹಳೇ ತೊಂದರೆಯುಂಟಾಗಿದೆ ಎಂದು ಶಳ್ಳಗಿ ಗ್ರಾಮದ ಛಲವಾದಿ ಹಾಗೂ ಮಾದರ ಸಮಾಜದವರು ಜಿಲ್ಲಾ ಉಸ್ತುವರಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ಪತ್ರ ಬರೆದು ದೂರಿದ್ದಾರೆ.

ಸಾರ್ವಜನಿಕರಿಗೆ ಕುಡಿಯಲು ಈ ಗ್ರಾಮದಲ್ಲಿ ಭಾವಿಯೊಂದಿದ್ದು ಅದರಲ್ಲಿ ಅಂತರ್ಜಲಮಟ್ಟ ಕುಸಿದಿದೆ ಇದು ಅಲ್ಲದೇ ಛಲವಾದಿ ಹಾಗೂ ಮಾದರ ಸಮಾಜದವರು ವಾಸಿಸುತ್ತಿರುವ ಬಢಾವಣೆಯಲ್ಲಿಯೂ ಸಹ ಕುಡಿಯುವ ನೀರು ಪೂರೈಸುತ್ತಿದ್ದ ವಿದ್ಯುತ್ ಮೋಟರ್ ಚಾಲಿತ ಬೋರವೆಲ್ ಒಂದು ಕೆಟ್ಟು ಹೋಗಿದೆ ಇದರಿಂದ ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರ ದೂರನ್ನು ಆಲಿಸಿದ ಸಂಭಂದಿಸಿದವರು ಅಶುದ್ದ ನೀರನ್ನು ಟ್ಯಾಂಕರ್ ಮುಖಾಂತರ ಪೂರೈಸುತ್ತಾ ಕೈತೊಳೆದುಕೊಂಡಿದ್ದಾರೆಂದು ಸಚಿವರಿಗೆ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ.

ಈ ಶಳ್ಳಗಿ ಗ್ರಾಮದಲ್ಲಿ ಛಲವಾದಿ ಹಾಗೂ ಮಾದರ ಸಮಾಜದವರು ಸುಮಾರು 750 ಕ್ಕೂ ಮಿಕ್ಕಿ ಜನರಿದ್ದಾರೆ ಈ ನೀರಿನ ಅಭಾವ ಕುರಿತು ಅನೇಕ ಸಲ ಹೋರಾಟದ ಹಾದಿ ಹಿಡಿದಿದ್ದರೂ ಸಹ ಮೂಗಿಗೆ ತುಪ್ಪ ಸವರಿದಂತೆ ಆಡಳಿತ ಕಾರ್ಯವೆಸಗಿ ಈ ಬಡಾವಣೆಯಲ್ಲಿ, ಈ ಗ್ರಾಮದಲ್ಲಿ ಏನು ನಡೆದಿದೆ ಎಂಬುದರ ಕುರಿತು ಮೌನ ತಾಳಿದ್ದರ ಒಳಗುಟ್ಟೇನೆಂದು ಛಲವಾದಿ ಹಾಗೂ ಮಾದರ ಸಮಾಜದವರು ಸಚಿವರಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಈಗಾಗಲೇ ಟ್ಯಾಂಕರ್ಗಳಿಂದ ಪೂರೈಸಲಾಗುತ್ತಿದ್ದ ಕುಡಿಯುವ ನೀರು ಅಶುದ್ದ ನೀರಾಗಿದೆ ಈ ನೀರು ಕುಡಿದಿದ್ದರಿಂದ ಕೆಲವರಿಗಂತೂ ವಾಂತಿ, ಬೇದಿ ತಗಲಿ ತಾಳಿಕೋಟೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಈ ಕುರಿತು ಗ್ರಾಮ ಪಂಚಾಯತಿಯವರಿಗೂ ಸೂಚಿಸಲಾಗಿದೆ ಅಲ್ಲದೇ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ನೀಡಿ ಈ ಗ್ರಾಮದ ಎಲ್ಲರಿಗೂ ಕುಡಿಯಲು ಶುದ್ದ ನೀರನ್ನು ಪೂರೈಸಬೇಕೆಂದು ವಿನಂತಿಸಲಾಗಿದೆ ಆದರೂ ಸಹ ಈ ಗ್ರಾಮಕ್ಕೆ ಪೂರೈಸಲಾಗುತ್ತಿರುವ ಟ್ಯಾಂಕರ್ ನೀರು ಅಶುದ್ದ ನೀರೆ ಪೂರೈಕೆಯಾಗುತ್ತದೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಕೂಡಲೇ ನೂತನ ಜಲಸಂಪನ್ಮೂಲ ಸಚಿವರಾಗಿ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ತಾವು ಕೂಡಲೇ ಶಳ್ಳಗಿ ಗ್ರಾಮದಲ್ಲಿಯ ಛಲವಾದಿ ಹಾಗೂ ಮಾದರ ಬಢಾವಣೆಯಲ್ಲಿಯ ಕೆಟ್ಟ ಬೋರವೆಲ್ನ್ನು ದುರಸ್ಥಿ ಕಾರ್ಯಕ್ಕಾಗಿ ಆದೇಶಿಸಿ ಹಾಗೂ ದಿನನಿತ್ಯ ಟ್ಯಾಂಕರ್ ಮುಖಾಂತರ ಪೂರೈಸಲಾಗುತ್ತಿರುವ ಅಶುದ್ದ ನೀರನ್ನು ಸ್ಥಗಿತಗೊಳಿಸಿ ಶುದ್ದ ನೀರನ್ನು ಪೂರೈಸಲು ಸೂಚಿಸಬೇಕೆಂದು ಸಚಿವ ಎಂ.ಬಿ. ಪಾಟೀಲ ಅವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಅಲ್ಲದೇ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ತಾಲೂಕಾ ತಹಶೀಲ್ದಾರ ಅವರಿಗೆ ಶಳ್ಳಗಿ ಗ್ರಾಮದ ಛಲವಾದಿ ಹಾಗೂ ಮಾದರ ಸಮಾಜದವರಾದ ಸಾಯಬಣ್ಣ ಮಾದರ, ಮಹಾದೇವಪ್ಪ ಮಾದರ, ಪರಶುರಾಮ ಸಾಗರ, ಜಗದೀಶ ದಿವಾರ, ಜಟ್ಟೆಪ್ಪ ನೀರಲಗಿ, ನಾಗಪ್ಪ ಗುಡಿಮನಿ, ಸಂಗನಬಸಪ್ಪ ಕಟ್ಟಿಮನಿ, ಭೀಮರಾವ್ ರತ್ನಾಕರ, ರಮೇಶ ಸಾಗರ, ಜಟ್ಟೆಪ್ಪ ಕಟ್ಟಿಮನಿ, ಅವರನ್ನೊಳಗೊಂಡು ಸುಮಾರು 25 ಜನ ಸಹಿ ಮಾಡಿದ ಮನವಿ ಪತ್ರವನ್ನು ಛಲವಾದಿ ಹಾಗೂ ಮಾದರ ಸಮಾಜ ಬಾಂಧವರು ರವಾನಿಸಿದ್ದಾರೆ.

loading...

LEAVE A REPLY

Please enter your comment!
Please enter your name here