ಶಾಲಾ ಆವರಣದಲ್ಲಿ ಜೂಟಾಟ: ಮದ್ಯದ ಬಾಟಲಿ ಎಸೆದ ಕಿಡಿಗೇಡಿಗಳು

0
23

ಕನ್ನಡಮ್ಮ ಸುದ್ದಿ-ಯಲಬುರ್ಗಾ: ತಾಲೂಕಿನ ಸಂಗನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ ವೇಳೆ ಜೂಟಾಟ ಆಡುವವರು ಮತ್ತು ಮದ್ಯಪಾನ ಮಾಡುವವರ ಹಾವಳಿಯಿಂದ ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ತೊಂದರೆಯಾಗಿದೆ.
ಶಾಲಾ ಸಮಯ ಮುಗಿದ ನಂತರ ಸಂಜೆ ವೇಳೆ ಜೂಟಾಟ ಆಡುವವರ ಹಾವಳಿ ಮೀತಿ ಮೀರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಜೂಟಾಟ ಆಡುವವರು ಮದ್ಯಪಾನ ಮಾಡಿ ಮದ್ಯದ ಬಾಟಲಿ, ಪೌಚಗಳನ್ನು ಪೊಟ್ಟಣಗಳನ್ನು ಶಾಲೆಯ ಮೈದಾನದಲ್ಲಿಯೇ ಬಿಸಾಡಿ ಹೋಗುತ್ತಾರೆ. ಪ್ರತಿದಿನ ಶಾಲೆಗೆ ಬರುವ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅವುಗಳನ್ನು ಗೂಡಿಸಿ ಸ್ವಚ್ಚಗೊಳಿಸುವುದೇ ದೊಡ್ಡ ಕೆಲಸವಾಗಿದೆ ಎನ್ನುತ್ತಾರೆ ಮುಖ್ಯಶಿಕ್ಷಕ.
ಕಿಡಿಗೇಡಿಗಳ ಹಾವಳಿ ನಿಯಂತ್ರಣಕ್ಕೆ ಗ್ರಾಮಸ್ಥರು ಎಸ್ಡಿಎಂಸಿ ಅಧ್ಯಕ್ಷರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನೆಯಾಗಿಲ್ಲ.
ಜೂಟಾಟ ಹಾಗೂ ಗ್ರಾಮದಲ್ಲಿ ಆಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಹಲವಾರು ಬಾರಿ ಗ್ರಾಮಸ್ಥರು ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸ್ಥಳೀಯರ ಆರೋಪವಾಗಿದೆ. ಆಕ್ರಮ ಮದ್ಯ ಮಾರಾಟ ನಿಯಂತ್ರಿಸಬೇಕಾದ ಪೊಲೀಸ್ ಸಿಬ್ಬಂದಿ ಅವರಿಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಗ್ರಾಮದಲ್ಲಿ ಮದ್ಯ ಮಾರಾಟಗಾರರು ರಾಜಾರೋಷವಾಗಿ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ನಿತ್ಯ ಸಾಕಷ್ಟು ಜನ ಕುಡಿದು ತಮ್ಮ ಕುಟುಂಬದಲ್ಲಿ ಜಗಳವಾಡುವ ಪ್ರಸಂಗವೂ ನಡೆದಿದೆ. ಯುವಕರು ಸಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಶೀಘ್ರದಲ್ಲಿ ಪೊಲೀಸ್ ಇಲಾಖೆ ಆಕ್ರಮ ಮದ್ಯ ಮಾರಾಟಗಾರರ ಮೇಲೆ ಹಾಗೂ ಶಾಲಾ ಆವರಣದಲ್ಲಿ ಜೂಟಾಟ, ಮದ್ಯಪಾನ ಮಾಡುವ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಗ್ರಾಮದ ಶಿವಲಿಂಗಪ್ಪ ಕವಲೂರು, ಬಸವನಗೌಡ, ಶರಣಪ್ಪ ಹಡಗಲಿ, ಮಲ್ಲಪ್ಪ ಅಡವಿಹಳ್ಳಿ ಆಗ್ರಹಿಸಿದ್ದಾರೆ.

loading...